ನನ್ನೆದುರು ಚಕ್ಕಳ ಮಕ್ಕಳ ಹಾಕಿ ಕುಳಿತ ದೈವೀ ಮುಖಕಾಂತಿಯ ಆ ಜ್ಯೋತಿಷಿಗಳು ಗಂಟೆ ಹೊಡೆದಂತೆ ಹೇಳಿದ್ದರು.
“ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ ‘. ಮುಂದಿನ ವಿಚಾರ ಹೇಳುವ ಮೊದಲು. ನಿಮಗೆ ಕೊಂಚ ಪ್ಲಾಷ್‌ಬ್ಯಾಕ್ ಹೇಳಲೇ ಬೇಕು. 1992ರ ಮಾತಿದು. ತಂದೆಯವರ ಪುನರಪಿ ಅನಾರೋಗ್ಯ ಇನ್ನಿತರ ಸಮಸ್ಯೆಗಳಿಂದ ಚೆನ್ನಾಗಿಯೇ ನಡೆಯುತ್ತಿದ್ದ “ಹೊಟೆಲ್ ಅಕ್ಷತ’ವನ್ನು ಮತ್ತೂಬ್ಬರಿಗೆ ಬಾಡಿಗೆಗೆ ಕೊಟ್ಟಿದ್ದೆವು. ಹೋಟೆಲ್ ಬೇಸರ ತರಿಸಿತ್ತು. ನಿತ್ಯ ಜಾಗರಣೆ, ಮನಸಿಗೆ ನೆಮ್ಮದಿಯಿಲ್ಲ. ಒಬ್ಬನೇ ಸಂಬಾಳಿಸಹುದಾದ ಹೊಸತೊಂದು ವ್ಯವಹಾರ ಮಾಡಲು ತಲೆ ಕೆಡಿಸಿಕೊಂಡಿದ್ದೆ. ಸಮೀಪದ ತೆಲಿಗಿ ಗ್ರಾಮದಲ್ಲಿ ಆಗ ಬಂದ್ ಆಗಿದ್ದ ಟೆಂಟ್ ಟಾಕೀಸ್‌ಅನ್ನು ಸುಪರ್ದಿಗೆ ತೆಗೆದುಕೊಂಡು ನಡೆಸಲು ಹೋದೆ. ಮೊದಲಿನಿಂದಲೂ ಸಿನಿಮಾ ನನ್ನ ಐಚ್ಛಿಕ ವಿಷಯ. ಮಾತುಕತೆ ಆಯಿತು, ನಾಲ್ಕು ತಿಂಗಳ ನಂತರ ಅಡ್ವಾನ್ಸ್ ಪಡೆದು ವಶಕ್ಕೆ ಕೊಡುವುದಾಗಿ ಹೇಳಿದರು.
ಈ ಮಧ್ಯೆ ನನ್ನ ತಂಗಿಯ ಮನೆ ಕೊಪ್ಪಕ್ಕೆ ಹೋಗಿದ್ದಾಗ ಅಲ್ಲಿನ ಖ್ಯಾತ ಜ್ಯೋತಿಷಿಯವರ ಬಳಿ ಇಷ್ಟವಿರದಿದ್ದರೂ ಭಾವನ ಒತ್ತಾಯದ ಮೇರೆಗೆ ಹೋಗಿ ಜಾತಕ ಎದುರಿಗಿಟ್ಟು ಕುಳಿತೆ. ಆಗ ಅವರು ಗುಂಡು ಹೊಡೆದಂತೆ ಹೇಳಿದ್ದು. “ನೀವು ಹಾಲಿಗೆ ನೀರು ಹಾಕಲೇಬೇಕು ಕಣ್ರೀ… ಪುನಃ ಹೋಟೆಲ್ ಮಾಡಲೇಬೇಕು, ಅದರಲ್ಲಿಯೇ ನಿಮ್ಮ ಅಭ್ಯುದಯವಿದೆ, ಟೆಂಟ್ ಟಾಕೀಸ್ ಮಾಡಿದರೆ ಮುರು ವರ್ಷದಲ್ಲಿಯೇ ಅಗ್ನಿ ಅನಾಹುತದಲ್ಲಿ ಎಲ್ಲವನ್ನೂ ಕಳೆದುಕೊಳ್ಳುವಿರಿ………’
ಜ್ಯೋತಿಷಿಗಳು ಹೀಗೆ ಹೇಳಿದಾಗ- ನನ್ನ ಅಹಂಗೆ ಪೆಟ್ಟುಬಿದ್ದಿತ್ತು. ಇದ್ದ ಹೋಟೆಲನ್ನು ಬಾಡಿಗೆಗೆ ಕೊಟ್ಟು ಮತ್ತೆ ಅದರ ಬುಡಕ್ಕೆ ಶರಣಾಗುವುದೇ? “ಸಾಧ್ಯವೇ ಇಲ್ಲ ಜೋಯಿಸರೇ…..’ ಎಂದು ಕೈ ಮುಗಿದು ಎದ್ದು ಬಂದಿದ್ದೆ. ಕಾಕತಾಳೀಯವಾಗಿ ಟೆಂಟ್ ಟಾಕೀಸನ್ನು ಅದರ ಮಾಲೀಕರೇ ಪುನರಾಂಭಿಸಿದರು. ಇತ್ತ ಬಾಡಿಗೆಗೆ ಕೊಟ್ಟಿದ್ದ ಹೋಟೆಲಿಗೆ 4 ವರ್ಷಗಳಲ್ಲಿ ನಾಲ್ಕು ಮಾಲೀಕರು ಬದಲಾದರು. ಈ ಸ್ಥಳದಲ್ಲಿ ವ್ಯವಹಾರ ಏಳಿಗೆಯಾಗುವುದಿಲ್ಲ ಎಂದು ಮಾತನಾಡಲಾರಂಭಿಸಿದರು. ನನಗೂ ಬೇರೆ ಯಾವುದೇ ವ್ಯವಹಾರ ಆರಂಭಿಸಲು ಸಾಧ್ಯವಾಗಲಿಲ್ಲ. ಏನೋ ಅಡ್ಡಿ ಆತಂಕ!
ಇನ್ನು ಸುಮ್ಮನಿದ್ದರೆ ನಮ್ಮ ಜಾಗಕ್ಕೆ ಕಳಂಕ ಕಟ್ಟಿಟ್ಟ ಬುತ್ತಿ. ಜೋಯಿಸರು ಹೇಳಿದಂತೆ ಹೋಟೆಲೇ ನನ್ನPerfect Professionಅಹುದೇ? ಗಟ್ಟಿ ಧೈರ್ಯ ಮಾಡಿ 1996ರಲ್ಲಿ ಕೊಟ್ಟ ಹೋಟೆಲನ್ನೇ ವಾಪಸ್ ಪಡೆದು ಹೊಸ ಆಸನಗಳು, ಯಂತ್ರಗಳು, ಪಾತ್ರೆ ಪಡಗಗಳೊಂದಿಗೆ “ಹೋಟೆಲ್ ಅಭಿರುಚಿ’ ಆರಂಭಿಸಿದೆ. ನಮ್ಮ ಪರಿಶ್ರಮ, ಗ್ರಾಹಕರ ವಿಶ್ವಾಸ ಎಲ್ಲಕ್ಕೂ ಮಿಗಿಲಾಗಿ ದೈವಾನುಗ್ರಹ ಮಿಳಿತವಾಗಿ ಹೋಟೆಲ್ ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಿಸಲಿದೆ. ನನ್ನ Perfect Profession ನನಗೂ ಸಮಾಜದಲ್ಲಿ ಗೌರವ ದಕ್ಕಿದೆ.
ಕೆ.ಶ್ರೀನಿವಾಸರಾವ್