Advertisement

ಗ್ರಾಮೀಣ ಮನೆಗಳಿಗೂ ವಾಟರ್‌ ಮೀಟರ್‌ ಕಡ್ಡಾಯ

01:05 AM Feb 27, 2022 | Team Udayavani |

ಮಂಗಳೂರು: ಗ್ರಾಮ ಪಂಚಾಯತ್‌ಗಳು ಮನೆ ಮನೆಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ಇನ್ನು ಮೀಟರ್‌ ಕಡ್ಡಾಯವಾಗಲಿದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಪೂರಕ ತಯಾರಿ ಆರಂಭಗೊಂಡಿದೆ. ಈಗಾಗಲೇ ಇರುವ ಸಂಪರ್ಕಕ್ಕೂ ಜಲಜೀವನ್‌ ಮಿಷನ್‌ ಯೋಜನೆಯಡಿ ನೀಡಲಾಗುತ್ತಿರುವ ಹೊಸ ಸಂಪರ್ಕಕ್ಕೂ ಇದು ಅನ್ವಯ.

Advertisement

ಪ್ರಸ್ತುತ ಗ್ರಾ.ಪಂ.ಗಳು ಬಳಕೆದಾರರಿಂದ ತಿಂಗಳಿಗೆ ನಿರ್ದಿಷ್ಟ ಶುಲ್ಕ ವಸೂಲಿ ಮಾಡುತ್ತಿವೆ. ಹಾಗೆಂದು ಪೂರೈಸುವ ನೀರಿಗೆ ಮಿತಿಯನ್ನು ಹಾಕಿಕೊಂಡಿಲ್ಲ. ಆದರೆ ಪೂರೈಕೆ ಎಲ್ಲ ಭಾಗಗಳಿಗೂ ಸಮರ್ಪಕವಾಗಿಲ್ಲ. ಆದ್ದರಿಂದ ಜಲಜೀವನ್‌ ಮಿಷನ್‌ನಡಿ ಬಹುತೇಕ ಎಲ್ಲ ಮನೆಗಳಿಗೂ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ 30 ವರ್ಷಗಳಿಗೆ ಬೇಕಾದಷ್ಟು ನೀರಿನ ಮೂಲಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನಿಷ್ಠ 55 ಲೀಟರ್‌
ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರದನ್ವಯ ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ಕನಿಷ್ಠ 55 ಲೀಟರ್‌ ನೀರು ಒದಗಿಸುವುದು ಜೆಜೆಎಂ (ಜಲಜೀವನ್‌ ಮಿಷನ್‌) ಉದ್ದೇಶ. ಗ್ರಾ.ಪಂ.ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚು ಕೂಡ ಪೂರೈಸಬಹುದಾಗಿದೆ. ಪ್ರತೀಲೀಟರ್‌ಗೆ 5 ಪೈಸೆ ನಿಗದಿಪಡಿಸುವ ಚಿಂತನೆ ಸರಕಾರ ಮಟ್ಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಕೆಲವೆಡೆ ಬೇಕಾಬಿಟ್ಟಿ ನೀರಿನ ಬಳಕೆಯಾಗುತ್ತಿರುವುದು, ಇನ್ನು ಕೆಲವೆಡೆ ಅಗತ್ಯವಿರುವಷ್ಟು ಲಭ್ಯವಾಗದಿರುವುದು ಕಂಡು ಬಂದಿದೆ. ಇದನ್ನು ಸರಿಪಡಿಸಲು ಜೆಜೆಎಂನಲ್ಲಿ ಆದ್ಯತೆ ನೀಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಈಗಾಗಲೇ ಜೆಜೆಎಂನಡಿ 28,000ಕ್ಕೂ ಅಧಿಕ ಸಂಪರ್ಕಗಳಿಗೆ ಮೀಟರ್‌ ಅಳವಡಿಸಲಾಗುತ್ತಿದೆ.
– ಡಾ| ಕುಮಾರ್‌,
ಸಿಇಒ, ದ.ಕ ಜಿ.ಪಂ.

ಸದ್ಯ ಗ್ರಾ.ಪಂ.ಗಳು ತಿಂಗಳಿಗೆ ನಿಗದಿತ ಶುಲ್ಕ ವಸೂಲಿ ಮಾಡುತ್ತಿವೆ. ಮುಂದೆ ನೀರಿನ ಬಳಕೆಗೆ ತಕ್ಕಂತೆ ದರ ನಿಗದಿಯಾಗಲಿದೆ. ಮೀಟರ್‌ ಜತೆ ವಾಲ್‌Ì ಕೂಡ ಕಡ್ಡಾಯ ಮಾಡಲಾಗುವುದು. ಇದು ಪ್ರಶರ್‌ನಲ್ಲಿ ನೀರು ಪೂರೈಕೆಯಾಗಲು ಸಹಕಾರಿ ಹಾಗೂ ಪೋಲಾಗುವುದನ್ನು ತಡೆಯಲಿದೆ. ಯಾವ ರೀತಿ ಮೀಟರ್‌ ಅಳವಡಿಕೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ ಉತ್ತಮ ಸೇವೆ ನೀಡಬಹುದು ಎಂಬ ಬಗ್ಗೆ ಶೀಘ್ರದಲ್ಲೇ ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಮತ್ತು ವಾಟರ್‌ಮನ್‌ಗಳಿಗೆ ತರಬೇತಿ ನೀಡಲಾಗುವುದು.
– ಡಾ| ನವೀನ್‌ ಭಟ್‌,
ಸಿಇಒ ಉಡುಪಿ ಜಿ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next