Advertisement

ಕೈ ಕೊಡುತ್ತಿರುವ ನೀರಿನ ಮೀಟರ್‌: ಬಿಲ್‌ ದರ ದುಬಾರಿ

04:45 AM Jan 11, 2019 | Team Udayavani |

ಸುರತ್ಕಲ್‌ : ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿ ನೀರಿನ ಶುಲ್ಕ ಸಂಗ್ರಹ ವಿಚಾರದಲ್ಲಿ ಇರುವಷ್ಟು ಗೊಂದಲ ಬೇರೆ ವಿಚಾರಗಳಲ್ಲಿ ಇರಲು ಸಾಧ್ಯವಿಲ್ಲ. ನೀರಿನ ಶುಲ್ಕ ಸಂಗ್ರಹಿಸುವ ಗುತ್ತಿಗೆದಾರರು ಬದಲಾಗುವ ಸಮಯದಲ್ಲಿ ಮತ್ತಷ್ಟು ಬಾಕಿ, ನೀರಿನ ಮೀಟರ್‌ ಸಮಸ್ಯೆ ಮತ್ತೆ ದುಪ್ಪಟ್ಟು ದರ ವಿಧಿಸಿ ಕಳುಹಿಸಲಾಗುತ್ತಿದ್ದು, ಮೀಟರ್‌ ಅಳವಡಿಸಿ ಪ್ರಾಮಾಣಿಕವಾಗಿ ಬಿಲ್‌ ಕಟ್ಟುವವರಲ್ಲಿ ಅಸಮಾಧಾನ ಮೂಡಿಸಿದೆ.

Advertisement

ಕೆಸರು ನೀರು ಮತ್ತು ಗ್ಯಾರಂಟಿಯಿಲ್ಲದ ಮೀಟರ್‌ಗಳನ್ನು ದುರಸ್ತಿ ಮಾಡಿ ಗ್ರಾಹಕರು ಹೈರಾಣಾಗಿ ಹಾಗೆಯೇ ಬಿಟ್ಟು ನಿಗದಿತ ಶುಲ್ಕ ಕಟ್ಟುತ್ತಾ ಬರುತ್ತಾರೆ. ಕೆಲವು ಬಾರಿ ವಿದ್ಯುತ್‌ ಬಿಲ್‌ಗಿಂತ ಅಧಿಕ ನೀರಿನ ಬಿಲ್‌ ಶಾಕ್‌ ನೀಡುತ್ತದೆ.

ನಾಲ್ಕೈದು ವರ್ಷಗಳಿಂದ ಸರಿಯಾಗಿ ಬಿಲ್‌ ನೀಡದೆ ಇದೀಗ ಒಮ್ಮೆಲೇ ಅಷ್ಟೂ ಬಾರಿಯ ಬಿಲ್‌ ಒಟ್ಟಿಗೆ ನೀಡುತ್ತಿ ರುವುದರಿಂದ ಗ್ರಾಹಕರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಈ ಸಮಸ್ಯೆಗೆ ನೀರಿನ ಬಿಲ್‌ ಪಾವತಿ ಅದಾಲತ್‌ನಿಂದಲೂ ಹೆಚ್ಚಿನ ಪ್ರಯೋಜನವಾಗಿಲ್ಲ.

ಒಂದೇ ರೀಡಿಂಗ್‌ ಹಲವು ಮನೆಗಳಿಗೆ ಬಿಲ್‌ !
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ನಾಗರಿಕರಿಗೆ ಬಂದ ನೀರಿನ ಬಿಲ್‌ನಲ್ಲಿ ಒಂದಕ್ಕೆ ನಾಲ್ಕು ಪಟ್ಟು ಮೊತ್ತ ಬಂದಿದೆ. 30ರಿಂದ 40 ಸಾವಿರದವರೆಗೂ ಬಂದಿದೆ. ಕೆಲವರಿಗೆ ಹಲವು ತಿಂಗಳು ಗಳಿಂದ ಬಿಲ್‌ ಕೊಡುವವರೇ ಬಾರದೆ ಈ ಸ್ಥಿತಿಯಾದರೆ, ಇನ್ನು ಗರಿಷ್ಠ ಬಿಲ್‌ ಕೊಟ್ಟಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣ. ನೀರಿನ ಬಿಲ್‌ ಅನ್ನು ಕೊಡುವ ಜವಾಬ್ದಾರಿಯನ್ನು ಪಾಲಿಕೆ ಹೊರಗುತ್ತಿಗೆ ಆಧಾರದ ಮೇಲೆ ಕೊಟ್ಟಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

ಕೂಳೂರು, ಪಂಜಿಮೊಗರು ಭಾಗದಲ್ಲಿ ಈ ಹಿಂದೆ ಇದ್ದ ಗುತ್ತಿಗೆದಾರರು ನೀರಿನ ಬಿಲ್‌ ಕೊಡುವ ಸಂದರ್ಭ ಒಂದೇ ತೆರನಾದ ಸ್ವೀಕೆನ್ಸ್‌ ನಂಬರ್‌ ನೀಡಿ ವಿವಿಧ ನಮೂನೆಯ ಬಿಲ್‌ ನೀಡಿದ್ದರು. ಬಿಲ್‌ ಕಟ್ಟಿದವರಿಗೂ ಹೆಚ್ಚುವರಿ ಬಿಲ್‌ ನೀಡಲಾಗಿದೆ. ಕಾರಣ ಅನೇಕ ಏರಿಯಾ ಗಳಲ್ಲಿರುವ ಮನೆಗಳಿಗೆ ಹೋಗುತ್ತಲೇ ಇರಲಿಲ್ಲ. ಆಫೀಸ್‌ನಲ್ಲಿ ಕುಳಿತು ಎನ್‌.ಎಲ್‌. (ನಾಟ್ ಲಿಜಿಬಲ್‌) ಅಥವಾ ಮೀಟರ್‌ ನಾಟ್ ರೀಡಿಂಗ್‌ ಎಂದು ನೀಡುತ್ತಾ ಸಿಬಂದಿ ಬಂದಿರುವುದೇ ಸಮಸ್ಯೆಗಳಿಗೆ ಕಾರಣ.

Advertisement

ಇನ್ನು ಕೆಲವಡೆ ಮನೆಯಲ್ಲಿಯೇ ಆಹಾರ, ತಿಂಡಿ ತಯಾರಿಸಿ ಕ್ಯಾಂಟೀನ್‌, ಕ್ಯಾಟರಿಂಗ್‌ ನಡೆಸುತ್ತಿದ್ದು ಇಂತಹ ಕಡೆ ನೀರಿನ ಬಿಲ್‌ ಸಹಜವಾಗಿ ಜಾಸ್ತಿ ಬಂದರೂ ವಶೀಲಿಬಾಜಿಯಿಂದ ಕನಿಷ್ಠ ದರ ವಿಧಿಸಿ ನಷ್ಟ ಆದ ಘಟನೆಯೂ ನಡೆದಿದೆ ಎನ್ನುತ್ತಾರೆ ಕೂಳೂರು ನಾಗರಿಕ ಸಮಿತಿಯ ಗುರುಚಂದ್ರ ಹೆಗ್ಡೆ ಗಂಗಾರಿ ಅವರು.

ಹೊಸ ಸಾಫ್ಟ್‌ವೇರ್‌ ಅಳವಡಿಕೆ
ನೀರಿನ ಬಿಲ್‌ ಸಂಗ್ರಹ ಕುರಿತಂತೆ ಹೊಸ ಸಾಫ್ಟ್‌ ವೇರ್‌ ಅಳವಡಿಸಲಾಗಿದೆ. ಇದರಿಂದ ಸೂಕ್ತ ಬಿಲ್‌ ನೀಡಲು ಸಹಕಾರಿ ಆಗಲಿದೆ. ಗೊಂದಲವಿಲ್ಲದೆ ಮುಂದಿನ ದಿನಗಳಲ್ಲಿ ನೀರಿನ ಶುಲ್ಕ ಸಂಗ್ರಹಿಸಲಾಗುವುದು. ಮೀಟರ್‌ ಗುಣಮಟ್ಟ ಕಾಪಾಡಿಕೊಳ್ಳಲು ಒಂದೇ ಸಂಸ್ಥೆಯಿಂದ ಖರೀದಿಸುವಂತೆ ಬಳಕೆದಾರರಿಗೆ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ.
– ಮಹಮ್ಮದ್‌ ನಝೀರ್‌,
  ಆಯುಕ್ತರು, ಮನಪಾ

ನ್ಯಾಯಾಲಯದ ಮೊರೆಗೆ ತೀರ್ಮಾನ
ನೀರಿನ ಬಿಲ್‌ ನೀಡುವ ಗುತ್ತಿಗೆದಾರರು ಸರಿಯಾಗಿ ಮಾಪನ ಮಾಡದೆ ನೀಡುತ್ತಾರೆ, ಮತ್ತೆ ನೀರಿನ ದರ ವಿಧಿಸುವಾಗಲೂ ತಾರತಮ್ಯ ಮಾಡಲಾಗಿದೆ. ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಈ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲು ಬಳಕೆದಾರರ ವತಿಯಿಂದ ತೀರ್ಮಾನಿಸಲಾಗಿದೆ.
ಪದ್ಮನಾಭ ಉಳ್ಳಾಲ್‌,
ನಿವೃತ್ತ ಅಧಿಕಾರಿ ಮನಪಾ

ವಿಶೇಷ ವರದಿ 

Advertisement

Udayavani is now on Telegram. Click here to join our channel and stay updated with the latest news.

Next