ಈ ಭಾಗದ ಜನರ ನೀರಿನ ಬೇಡಿಕೆಯನ್ನು ಈಡೇರಿಸುವಲ್ಲಿ ನಗರ ಪಂಚಾಯತ್ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರೂ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
Advertisement
ನಗರ ಪಂಚಾಯತ್ ವ್ಯಾಪ್ತಿಯ ಬಹುತೇಕ ಪ್ರದೇಶಗಳು ಉಪ್ಪು ನೀರಿನ ನದಿಯಿಂದ ಸುತ್ತುವರಿದಿರುವುದರಿಂದ ಮಾನಂಪಾಡಿ, ಚಿತ್ರಾಪು, ಬಪ್ಪನಾಡು ಮತ್ತು ಕಾರ್ನಾಡು ಗ್ರಾಮದ ಹೆಚ್ಚಿನ ಭಾಗಗಳಲ್ಲಿ ನದಿಯ ಸಮೀಪವಿರುವ ಬಾವಿ ನೀರು ಮಳೆಗಾಲದಲ್ಲೂ ಕುಡಿಯಲು ಯೋಗ್ಯವಾಗಿಲ್ಲದಿರುವುದು ಇಲ್ಲಿಯ ಬಹು ದೊಡ್ಡ ಸಮಸ್ಯೆಯಾಗಿದೆ.
ವಿಶೇಷವಾಗಿ ಬಪ್ಪನಾಡು ಗ್ರಾಮದ ಚಂದ್ರಶ್ಯಾನುಬಾಗರ ಕುದ್ರು ಪ್ರದೇಶ ನಗರ ಪಂಚಾಯತ್‌ನ ನಳ್ಳಿ ನೀರನ್ನೇ ವರ್ಷವಿಡೀ ಅವಲಂಬಿಸಿಕೊಂಡಿದೆ. ಬಪ್ಪನಾಡು ಗ್ರಾಮದ ಕೊಳಚಿಕಂಬಳ ಮತ್ತು ಚಿತ್ರಾಪು ಗ್ರಾಮದ ಗಜನಿ ಹಾಗೂ ಚಿತ್ರಾಪು ಸ್ಮಶಾನ ರಸ್ತೆಯ ಉದ್ದಕ್ಕೂ ಕುಡಿಯುವ ಶುದ್ಧ ನೀರು ಬಾವಿಯಲ್ಲಿ ಸಿಗುವುದು ಕಷ್ಟ. ಕಾರ್ನಾಡು ಗ್ರಾಮದ ಒಂದು ಮೂಲೆಯಲ್ಲಿರುವ ಕಾರ್ನಾಡು ಸದಾಶಿವ ನಗರ, ಲಿಂಗಪಯ್ಯ ಕಾಡು ಮತ್ತು ಬಿಜಾಪುರ ಕಾಲನಿಯ ಪ್ರದೇಶಗಳು ಬಹುತೇಕ ಹೆಚ್ಚಿನ ಪ್ರಮಾಣದಲ್ಲಿ ಜನ ವಸತಿ ಇದ್ದು, ಇಲ್ಲಿ ವರ್ಷ ವಿಡೀ ನೀರಿನ ಸಮಸ್ಯೆ ಇದೆ. ಮಂಗಳೂರು ಮಹಾನಗರ ಪಾಲಿಕೆಯ ಕುಳಾಯಿ ಪಂಪ್ ಹೌಸ್ ಮೂಲಕ ತುಂಬೆಯ ನೀರು ಮೂಲ್ಕಿಗೆ ಸರಬರಾಜು ಆಗುತ್ತಿದೆ. ಇದರ ಹೆಚ್ಚಿನ ಭಾಗವು ಕಾರ್ನಾಡು ಸದಾಶಿವ ನಗರದ ಜನರ ಉಪಯೋಗಕ್ಕಾಗಿ ಬಳಕೆಯಾಗುತ್ತಿದೆ. ಈ ಮಾರ್ಗವಾಗಿ ಇರುವ ಹಳೆಯಂಗಡಿ ಪಂಚಾಯತ್ ನೀರನ್ನು ತನ್ನ ಗ್ರಾಮಸ್ಥರಿಗಾಗಿ ಟ್ಯಾಪಿಂಗ್ ಮಾಡುತ್ತಿದೆ. ಇದು ಕೂಡ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ.
Related Articles
Advertisement
ಕಾರ್ನಾಡು ಕೈಗಾರಿಕಾ ಪ್ರದೇಶ ಸಮೀಪದ ಬಿಜಾಪುರ ಕಾಲನಿ ಮೂಲ್ಕಿಯ ನಗರ ಪಂಚಾಯತ್‌ನ ಅತೀ ಹೆಚ್ಚು ಜನ ಸಂಖ್ಯೆ ಇರುವ ಪ್ರದೇಶವಾಗಿದೆ. ಇಲ್ಲಿ ವಲಸೆ ಬಂದು ಕೂಲಿ ಕಾರ್ಮಿಕರು ಹೆಚ್ಚಾಗಿದ್ದು, ಇಲ್ಲಿನ ಜನರಿಗೆ ಪೂರ್ಣ ಪ್ರಮಾಣದಲ್ಲಿ ನೀರು ಒದಗಿಸುವುದು ನಗರ ಪಂಚಾಯತ್‌ಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಮೂಲ್ಕಿ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಹೆಚ್ಚುವರಿಟ್ಯಾಂಕರ್ಗಳ ವ್ಯವಸ್ಥೆ ಮಾಡಬೇಕಾದ ಅನಿವಾರ್ಯವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ
ಹೆಚ್ಚಿನ ಬಿಸಿಲು, ಈವರೆಗೆ ಮಳೆ ಬಾರದೇ ಇರುವುದರಿಂದ ಈ ಭಾಗದ ಖಾಸಗಿ ಬಾವಿಗಳಲ್ಲೂ ನೀರಿನ ಒರತೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜನರ ಬೇಡಿಕೆಯಷ್ಟು ಸಾಧ್ಯವಾಗದಿದ್ದರೂ ನಗರ ಪಂಚಾಯತ್ ವತಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ಖಾಸಗಿ ಬಾವಿಗಳಿಂದ ನೀರು ಪಡೆದು ಟ್ಯಾಂಕರ್ ಮೂಲಕ ಒದಗಿಸಲಾಗುತ್ತಿದೆ. ಮುಂದೆ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಕಾರಣ ಹಿತಮಿತವಾಗಿ ನೀರನ್ನು ಬಳಕೆ ಮಾಡಲು ಎಲ್ಲರೂ ಸಹಕರಿಸಬೇಕಿದೆ.
- ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ ನಗರ ಪಂಚಾಯತ್ ಮೂಲ್ಕಿ