ಮೂಡುಬಿದಿರೆಯ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ರಮೇಶ ಭಟ್ ಅವರು “ಉದಯವಾಣಿ’ಯ ಅಭಿಯಾನದಿಂದ ಪ್ರೇರಣೆಗೊಂಡು ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ.
Advertisement
ಛಾವಣಿ ನೀರನ್ನು ಪೈಪ್ ಮುಖಾಂತರ ಬಾವಿಗೆ ಬಿಡಲಾಗುತ್ತಿದೆ. ನಡುವೆ ಶುದ್ಧೀಕರಣಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸುರತ್ಕಲ್‌ನ ನಿರ್ಮಿತಿ ಕೇಂದ್ರದವರನ್ನು ಸಂಪರ್ಕಿಸಿ, ಅವರ ಮಾರ್ಗದರ್ಶನ ಪಡೆದು ಮೂಡುಬಿದಿರೆಯ ಪ್ರಕಾಶ ಅವರು ಇದನ್ನು ಅಳವಡಿಸಲು ಸಹಕರಿಸಿದ್ದಾರೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ತಡೆಯಲು ಪ್ರತಿಯೊಬ್ಬರೂ ಮಳೆಕೊಯ್ಲು ಅಳವಡಿಸಿಕೊಳ್ಳಲು ಮುಂದಾಗಬೇಕೆಂದು ಅವರು ಹೇಳುತ್ತಾರೆ.
ಕಡಬ ತಾಲೂಕಿನ ನೆಲ್ಯಾಡಿ ರಾಮನಗರ ದೀಪಕ್ ಮಾರ್ಲ ಅವರು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ತಮ್ಮ ಮನೆಯ ಟ್ಯಾಂಕ್‌ಗೆ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮನೆಯ ಟೆರೇಸ್‌ನಿಂದ ಮಳೆ ನೀರನ್ನು ಪೈಪ್ ಮುಖಾಂತರ ಫಿಲ್ಟರ್ ಮಾಡಿ ಟ್ಯಾಂಕಿಗೆ ಬಿಡಲಾಗುತ್ತಿದೆ. ಸುಮಾರು 1 ಸಾವಿರ ರೂ. ಖರ್ಚು ಇದಕ್ಕೆ ತಗುಲಿದೆ. “ಉದಯವಾಣಿ’ಯ ಮನೆಮನೆಗೆ ಮಳೆಕೊಯ್ಲು ಅಭಿಯಾನ ಜನಸಾಮಾನ್ಯರಿಗೊಂದು ಪ್ರೇರಣೆಯಾಗಿದೆ. ಈ ಅಭಿಯಾನ ನೋಡಿ ಹಲವಾರು ಮಂದಿ ಮಳೆಕೊಯ್ಲು ಮಾಡುತ್ತಿರುವುದು ನೀರುಳಿತಾಯಕ್ಕೆ ಸಿಕ್ಕ ಸ್ಫೂರ್ತಿ’ ಎಂದವರು ಹೇಳುತ್ತಾರೆ.
Related Articles
ಮೂಡುಬಿದಿರೆ ಶಿರ್ತಾಡಿಯ ಫ್ರೆಡ್ರಿಕ್ ಕ್ರಾಸ್ತಾ ಅವರ ಮನೆಯಲ್ಲಿ ಮೂರು ವಾರಗಳ ಹಿಂದೆ ಮಳೆಕೊಯ್ಲು ಅಳವಡಿಸಲಾಗಿದೆ. ಮನೆಯ ಛಾವಣಿ ನೀರನ್ನು ಪೈಪ್ ಮುಖಾಂತರ ಡ್ರಮ್‌ಗೆ ಬಿಡಲಾಗುತ್ತಿದೆ. ಅಲ್ಲಿ ಫಿಲ್ಟರ್ ವ್ಯವಸ್ಥೆ ಮಾಡಲಾಗಿದ್ದು, ಶುದ್ಧವಾದ ನೀರು ಬಾವಿ ಸೇರುತ್ತದೆ. ಇದಕ್ಕೆ ಅವರಿಗೆ ಸುಮಾರು 10 ಸಾವಿರ ರೂ. ಖರ್ಚಾಗಿದೆ. ಫ್ರೆಡ್ರಿಕ್ ಅವರ ಮನೆಯಲ್ಲಿ ಮಳೆಕೊಯ್ಲು ಅಳವಡಿಕೆ ಮಾಡಿರುವುದನ್ನು ನೋಡಿ ಆಸುಪಾಸಿನ ಮನೆಯವರೂ ಅಳವಡಿಕೆಗೆ ಮುಂದಾಗಿದ್ದಾರೆ ಎಂಬುದು ಖುಷಿಯ ವಿಚಾರ.
Advertisement
“ಎಪ್ರಿಲ್-ಮೇ ತಿಂಗಳಲ್ಲಿ ಬಾವಿಯಲ್ಲಿ ನೀರು ತುಂಬಾ ಕೊರತೆಯಾಗುತ್ತಿತ್ತು. ಈ ಬಾರಿ ಮಳೆಯೂ ಕಡಿಮೆಯಾಗಿರುವುದರಿಂದ ಭವಿಷ್ಯದಲ್ಲಿ ನೀರಿನ ತೊಂದರೆ ಉಂಟಾಗದಿರಲೆಂದು ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇವೆ.“ಉದಯವಾಣಿ’ ಪ್ರಕಟಿಸುತ್ತಿದ್ದ ಮಳೆಕೊಯ್ಲು ಮಾಹಿತಿಯೇ ನಮಗೆ ಪ್ರೇರಣೆ’ ಎನ್ನುತ್ತಾರೆ ಫ್ರೆಡ್ರಿಕ್ ಕ್ರಾಸ್ತಾ. ಉಪಯುಕ್ತ ಅಭಿಯಾನ
ಮಳೆಕೊಯ್ಲು ಅಳವಡಿಕೆಯ ಸರಳ ವಿಧಾನಗಳ ಬಗ್ಗೆ ಮಾಹಿತಿಯುಕ್ತ ಲೇಖನಗಳನ್ನು ಪ್ರಕಟಿ ಸುವ ಮೂಲಕ “ಉದಯ ವಾಣಿ’ಯು ಪ್ರತಿಯೊಬ್ಬರ ಮನೆಯಲ್ಲಿ ಮಳೆಕೊಯ್ಲು ಅಳವಡಿಸಲು ಕಾರಣವಾಗಿದೆ. ಈ ಅಭಿಯಾನ ಹಲವರಿಗೆ ಉಪಯು ಕ್ತವಾಗಿದೆ. ನಿರಂತರವಾಗಿ ಯಶೋ ಗಾಥೆ, ಅಳವಡಿಕೆಯ ಕಾರ್ಯ ವಿಧಾನಗಳ ಪ್ರಕಟನೆ ಮುಂದುವರಿಯಲಿ.
-ರೊನಾಲ್ಡ್ ಮೋನಿಸ್, ಮಡಂತ್ಯಾರು ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳ ಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000