Advertisement

ಅಂಗನವಾಡಿಗೆ ತಲುಪದ ಜಲ ಜೀವನ ವಿಷನ್‌

06:24 PM Jul 07, 2021 | Team Udayavani |

ಕಲಬುರಗಿ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಅಭಿಯಾನಗಳಲ್ಲಿ ಒಂದಾದ “ಜಲ ಜೀವನ ವಿಷನ್‌’ ಜಿಲ್ಲೆಯಲ್ಲಿ ಆಮೆಗತಿಯಲ್ಲಿ ಸಾಗಿದೆ. ನೂರು ದಿನಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಂಪರ್ಕ ನೀಡಬೇಕೆಂಬ ಅಭಿಯಾನದ ಉದ್ದೇಶ 270 ದಿನಗಳು ಕಳೆದರೂ ಪೂರ್ಣವಾಗಿಲ್ಲ.

Advertisement

ಕಳೆದ ವರ್ಷ ಗ್ರಾಮೀಣ ನೀರು ಸರಬರಾಜು ಯೋಜನೆಯನ್ನು ಕೇಂದ್ರ ಸರ್ಕಾರ “ಜಲ ಜೀವನ ವಿಷನ್‌’ ಎಂದು ಹೆಸರಿಸಿದೆ. ಇದರಡಿ ಕೇಂದ್ರ ಸರ್ಕಾರ ಶೇ.25ರಷ್ಟು ಅನುದಾನ ಮತ್ತು ರಾಜ್ಯ ಸರ್ಕಾರ ಶೇ.75ರಷ್ಟು ಅನುದಾನ ಭರಿಸುತ್ತದೆ. 100 ದಿನಗಳಲ್ಲಿ ಎಲ್ಲ ಅಂಗನವಾಡಿಗಳು ಮತ್ತು ಶಾಲೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ 2020ರ ಅಕ್ಟೋಬರ್‌ 2ರಂದು ಸೂಚಿಸಿತ್ತು. 2021ರ ಜನವರಿ 10ಕ್ಕೆ ಈ ಅಭಿಯಾನ ಅಂತ್ಯವಾಗಿದೆ. ಆದರೆ, ಜಿಲ್ಲೆಯಲ್ಲಿ ಜೂನ್‌ ಕಳೆದರೂ ಕೇವಲ ಶೇ.11.50ರಷ್ಟು ಮಾತ್ರ ಪ್ರಗತಿ ಕಂಡಿದೆ.

ಗ್ರಾಮೀಣ ಭಾಗದ ಮೂಲಭೂತ ಸಮಸ್ಯೆ ದೃಷ್ಟಿಯಲ್ಲಿರಿಸಿಕೊಂಡು “ಜಲ ಜೀವನ’ ವಿಷನ್‌ ಅನುಷ್ಠಾನಕ್ಕೆ ತರಲಾಗಿದೆ. ಪ್ರಮುಖವಾಗಿ ಮಕ್ಕಳು ಕಲಿಯುವ ಕೇಂದ್ರಗಳಲ್ಲಿ ನೀರಿನ ಸೌಲಭ್ಯ ಒದಗಿಸಲು ವಿಶೇಷ ಅಭಿಯಾನವನ್ನೇ ಸರ್ಕಾರ ಹಾಕಿಕೊಂಡಿತ್ತು. ಮಕ್ಕಳಿಗೆ ಕುಡಿಯಲು, ಊಟ ತಯಾರಿಕೆ, ಕೈತೊಳೆಯಲು ಮತ್ತು ಶೌಚಾಲಯಗಳಲ್ಲಿ ಬಳಸಲು ನೀರಿನ ನಳದ ಸಂಪರ್ಕ ಒದಗಿಸುವುದು ಇದರ ಮುಖ್ಯ ಗುರಿ. ಆದರೆ, ಒಂಭತ್ತು ತಿಂಗಳು ಕಳೆದರೂ ಜಿಲ್ಲೆಯಲ್ಲಿ ಈ ಅಭಿಯಾನ ವೇಗವನ್ನೇ ಪಡೆದಿಲ್ಲ.

ಜಿಲ್ಲಾದ್ಯಂತ ಒಟ್ಟಾರೆ 3,130 ಅಂಗನವಾಡಿ ಕೇಂದ್ರಗಳು ಇವೆ. ನಗರ ಪ್ರದೇಶ ಹೊರತು ಪಡಿಸಿ, ಎಲ್ಲ ಹಳ್ಳಿಗಳಲ್ಲಿ ಸ್ವಂತ ಕಟ್ಟಡ ಹೊಂದಿರುವ ಕೇಂದ್ರಗಳಿಗೆ ನೇರ ನೀರು ಪೂರೈಸಬೇಕಿದೆ. ಅಂದರೆ, ಗ್ರಾಮೀಣ ಭಾಗದಲ್ಲಿ 2,146 ಅಂಗನವಾಡಿ ಕೇಂದ್ರಗಳ ಬರುತ್ತವೆ. ಆದರೆ, ಇದುವರೆಗೆ ಬರೀ 247 ಅಂಗನವಾಡಿಗಳಿಗೆ ಮಾತ್ರ ನೀರಿನ ಸಂರ್ಪಕ ದೊರೆತಿದೆ.

ಏನಾಗಬೇಕಿತ್ತು?: ಅಂಗನವಾಡಿಗಳಿಗೆ ಬರುವುದೇ ಅತಿ ಹೆಚ್ಚಾಗಿ ಬಡ ವರ್ಗದ ಮಕ್ಕಳು. ಆ ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ಊಟ, ಹಾಲು, ಮೊಟ್ಟೆ ನೀಡಲಾಗುತ್ತದೆ. ಇದೆಲ್ಲಕ್ಕೂ ನೀರು ಅಗತ್ಯವಾಗಿ ಬೇಕಾಗುತ್ತೆ. ಕೆಲವೊಂದು ಕೇಂದ್ರಗಳಲ್ಲಿ ಈಗಾಗಲೇ ನೀರಿನ ಸಂಪರ್ಕ ಹೊಂದಿದ್ದರೂ, ಬಹುತೇಕ ಕಡೆ ನೀರಿನ ಸಮಸ್ಯೆ ಇದ್ದೇ ಇದೆ. ಹೀಗಾಗಿ “ಜಲ ಜೀವನ ವಿಷನ್‌’ ಅಡಿ ನಳದ ಸಂಪರ್ಕ ನೀಡಬೇಕಿದೆ. ಜತೆಗೆ ನೀರು ಸಂಗ್ರಹಕ್ಕೆ ಸಿಂಟೆಕ್ಸ್‌, ಅಗತ್ಯವಾದ ಕಡೆ ನೀರು ತುಂಬಿಸಲು ಮೋಟರ್‌ ಹಾಗೂ ವಿದ್ಯುತ್‌ ಕೂಡ ಅಳವಡಿಕೆ ಮಾಡಬೇಕು.

Advertisement

ಹಲವು ಕಡೆಗಳಲ್ಲಿ ಸಹಾಯಕಿಯರು ಎರಡ್ಮೂರು ಗಂಟೆ ನಿಂತು ನೀರು ತರಬೇಕಿದೆ. ಇಂತಹ ಪರಿ ಸ್ಥಿತಿಯಲ್ಲೂ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾಗಿಲ್ಲ. ಕೆಲವು ಕಡೆಗಳಲ್ಲಿ ಸಿಂಟೆಕ್ಸ್‌ ಮತ್ತು ಮೋಟರ್‌ ಕೂಡಿಸಿದ್ದರೂ, ನೀರಿನ ನಳದ ಸಂಪರ್ಕ ಕೊಡಲು ಆಗಿಲ್ಲ. ಇದರಿಂದ ನೀರಿಗಾಗಿ ಕಾರ್ಯಕರ್ತೆಯರು, ಸಹಾಯಕಿಯರ ಅಳಲು ಮುಂದುವರಿಯುವಂತೆ ಆಗಿದೆ ಎಂದು ಅಂಗನವಾಡಿ ನೌಕರರ ಸಂಘದ ನಾಯಕಿ ಶಾಂಗಾ ಘಂಟಿ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ಕೇಂದ್ರಗಳಲ್ಲಿ ನಳದ ಸಂಪರ್ಕ ನೀಡಲಾಗಿದ್ದು, ಅಲ್ಲಿನ ಸಹಾಯಕಿಯರು ತುಸು ನೆಮ್ಮದಿ ತರಿಸಿದೆ. ಸಿಂಟೆಕ್ಸ್‌ ಕೂಡಿಸಿ ಅಡುಗೆ ಮನೆ, ಶೌಚಾಲಯಕ್ಕೆ ನೀರಿನ ಸಂಪರ್ಕ ಒದಗಿಸಲಾಗಿದೆ.

ಮೂರು ಕಡೆ ಅತ್ಯಂತ ನೀರಸ: “ಜಲ ಜೀವನ’ ವಿಷನ್‌ ಅಭಿಯಾನವು ಮೂರು ತಾಲೂಕುಗಳಲ್ಲಿ ಅತ್ಯಂತ ನೀರಸದಿಂದ ಕೂಡಿದೆ ಎಂದು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತವೆ. ಇದುವರೆಗೆ ಸೇಡಂ ನಲ್ಲಿ ಕೇವಲ ಐದು, ಆಳಂದ ಮತ್ತು ಶಹಾಬಾದ್‌ನಲ್ಲಿ ತಲಾ ಎಂಟು ಕೇಂದ್ರಗಳಿಗೆ ಮಾತ್ರ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ. ಚಿಂಚೋಳಿಯಲ್ಲಿ ಕೊಂಚ ಉತ್ತಮ ಪ್ರಗತಿ ಕಂಡಿದೆ. ಇಲ್ಲಿ ಈಗಾಗಲೇ 70 ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದೆ. ಕಲಬುರಗಿ ಗ್ರಾಮೀಣ-46, ಜೇವರ್ಗಿ-40, ಅಫಜಲಪುರ-38, ಚಿತ್ತಾಪುರದಲ್ಲಿ 32 ಕೇಂದ್ರಗಳಿಗೆ ನೀರಿನ ಸಂಪರ್ಕ ಸಿಕ್ಕಿದೆ.

ಸಮನ್ವಯ ಕೊರತೆಯೇ ಕಾರಣ: “ಜಲ ಜೀವನ ವಿಷನ್‌’ ಅಭಿಯಾನ ಹಿನ್ನೆಡೆಗೆ ಕೊರೊನಾ ಎರಡನೇ ಅಲೆ ಒಂದು ಕಾರಣವಾದರೆ, ಇದರ ಅನುಷ್ಠಾನ ಗೊಳಿಸಬೇಕಾದ ಮೂರು ಇಲಾಖೆಗಳಲ್ಲಿನ ಸಮನ್ವಯ ಕೊರತೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣ ಕುಡಿಯುವ ನೀರು ಪೂರೈಕೆ ಕಾರ್ಯಕ್ರಮ ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆಯಿಂದ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ.

ಮಾರ್ಚ್‌ ತಿಂಗಳಲ್ಲಿ “ಜಲ ಜೀವನ ವಿಷನ್‌’ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆದರೆ, ಅದೇ ತಿಂಗಳು ಕೊರೊನಾ ಉಲ್ಬಣಗೊಂಡು ಅಡೆ-ತಡೆ ಉಂಟಾಯಿತು. ಈಗ ಮತ್ತೆ ಇದಕ್ಕೆ ವೇಗ ಕೊಡಲಾಗುತ್ತದೆ. ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸ್ಥಿತಿ-ಗತಿ ಬಗ್ಗೆ ಮತ್ತೂಮ್ಮೆ ಮಾಹಿತಿ ಪಡೆಯಲಾಗುತ್ತದೆ. ಈ ತಿಂಗಳ (ಜುಲೈ) ಅಂತ್ಯದೊಳಗೆ ಶೇ.100ಕ್ಕೆ 100ರಷ್ಟು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ.
ಡಾ| ದಿಲೀಷ್‌ ಸಸಿ, ಸಿಇಒ, ಜಿಪ

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next