Advertisement

ಕೈಕೊಟ್ಟ ಮಳೆ; ಲಿಂಗನಮಕ್ಕಿ ವಿದ್ಯುತ್ ಉತ್ಪಾದನೆಗೆ ಆತಂಕ

09:19 AM Jun 14, 2022 | Team Udayavani |

ಸಾಗರ: ಮಳೆ ಮಾರುತಗಳು ಬಂದಿವೆ ಎಂಬ ಹವಾಮಾನ ಇಲಾಖೆ ವರದಿಗಳ ಹೊರತಾಗಿಯೂ ಕಳೆದ ಮೂರ‍್ನಾಲ್ಕು ದಿನಗಳಿಂದ ಮಳೆ ಸಂಪೂರ್ಣವಾಗಿ ಸಾಗರ ತಾಲೂಕಿನಲ್ಲಿ ಮಾಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಇಳಿಮುಖವಾಗಿದೆ. ಮುಂಗಾರು ಉತ್ತಮವಾಗಿ ಸುರಿಯದಿದ್ದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗುವ ಪರಿಸ್ಥಿತಿ ಎದುರಾಗಿದೆ.

Advertisement

ರಾಜ್ಯದ ಜಲ ವಿದ್ಯುದಾಗಾರಗಳಾದ ಶರಾವತಿ, ಮಹಾತ್ಮಾಗಾಂಧಿ, ಲಿಂಗನಮಕ್ಕಿ, ಅಂಬುತೀರ್ಥ ಮತ್ತು ಶರಾವತಿ ಟೇಲ್ ರೇಸ್ ಯೋಜನೆಗೆ ನೀರು ಪೂರೈಸುವ ಕೆಲಸವನ್ನು ಲಿಂಗನಮಕ್ಕಿ ಜಲಾಶಯ ಮಾಡುತ್ತಾ ಬಂದಿದೆ. 156 ಟಿಎಂಸಿ ಅಡಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಸದ್ಯ 47ಕ್ಕೂ ಕಡಿಮೆ ಟಿಎಂಸಿ ಅಡಿ ನೀರು ಮಾತ್ರ ಇದೆ. ಇದು ಜಲಾಶಯದಲ್ಲಿ ಸಂಗ್ರಹವಾಗುವ ಒಟ್ಟು ಸಾಮರ್ಥ್ಯದ ಶೇ. 31.15 ಮಾತ್ರ. ಡೆಡ್ ಸ್ಟೋರೇಜ್‌ ನ ಹೊರತಾಗಿ ವಿದ್ಯುತ್ ಉತ್ಪಾದನೆಗೆ ಸಿಗುವ ನೀರು ಅತ್ಯಂತ ಅಲ್ಪ ಎನ್ನುವ ಸ್ಥಿತಿ ಇದೆ.

ಜಲಾಶಯದ ನೀರಿನ ಮಟ್ಟ 1751.25 ಅಡಿಗೆ ಇಳಿದಿದ್ದು, ಕಳೆದ ಮೂರು ದಿನಗಳಿಂದ ಒಳಹರಿವು ಪ್ರಮಾಣ ಸಂಪೂರ್ಣ ನಿಂತಿದೆ. 4124 ಕ್ಯುಸೆಕ್ಸ್ ನೀರಿನ ಹೊರ ಹರಿವು ಇದೆ. ಹೀಗಾಗಿ ಮುಂಗಾರು ಉತ್ತಮವಾಗಿ ಸುರಿಯದಿದ್ದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗುವ ಸಂಭವ ಇದೆ. ಜಲಾನಯನದ ಪ್ರದೇಶಗಳಾದ ಅಂಬುತೀರ್ಥ, ಹೊಸನಗರ, ತುಮರಿ, ಬ್ಯಾಕೋಡು, ಹೊಳೆಬಾಗಿಲು, ಸಾವೇಹಕ್ಲು ಪ್ರದೇಶಗಳಲ್ಲಿ ಉತ್ತಮ ಮಳೆ ಆದಲ್ಲಿ ಜಲಾಶಯಕ್ಕೆ ಒಳಹರಿವು ಆರಂಭವಾಗುತ್ತದೆ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ:ಪ್ರತಿಯೊಂದು ಸಿಗರೇಟಿನ ಮೇಲೆ ಎಚ್ಚರಿಕೆಯ ಸಂದೇಶ ಮುದ್ರಿಸಲು ಕೆನಡಾ ನಿರ್ಧಾರ

ಶರಾವತಿ ಕೊಳ್ಳದ ಕೆಪಿಸಿ ಒಡೆತನದ ಎಲ್ಲ ಸ್ಥಾವರಗಳಿಗೂ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಹಲವು ವರ್ಷಗಳಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ನೇಮಿಸಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಆ ಕೂಗು ಈಗ ಸಾಕಾರಗೊಂಡಿದೆ. ಲಿಂಗನಮಕ್ಕಿ ಜಲಾಶಯ, ಶರಾವತಿ ಕಣಿವೆ ಪ್ರದೇಶದ ಜಲ ವಿದ್ಯುದಾಗರಗಳಿಗೆ 1964ರಿಂದ ಕೆಪಿಸಿ ಭದ್ರತಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮೀಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಭದ್ರತಾ ಸಿಬ್ಬಂದಿಯನ್ನು ಖಾಸಗಿ ಏಜೆನ್ಸಿ ಮೂಲಕ ನೇಮಿಸಲಾಗುತ್ತಿತ್ತು.

Advertisement

ಈ ನಡುವೆ ಮಲೆನಾಡು ಪ್ರದೇಶದಲ್ಲಿ ಸ್ಯಾಟ್‌ಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ವದಂತಿಗಳು ಹಬ್ಬಿದ್ದು, ಅದರ ಉದ್ದೇಶ ತನಿಖೆಯಿಂದಲೇ ತಿಳಿಯಬೇಕಾಗಿದೆ. ಮುಖ್ಯವಾಗಿ, ನೀರಿನ ಆಣೆಕಟ್ಟೆಗಳ ಪ್ರದೇಶದಲ್ಲಿಯೇ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎಂಬ ಮಾಹಿತಿಯಿದ್ದು, ಕಟ್ಟುನಿಟ್ಟಿನ ತನಿಖೆ ನಡೆಯಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next