Advertisement
ಮಂಡ್ಯ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳ ಸೇರಿದೆ. ಅದರಲ್ಲೂ ನಾಗಮಂಗಲ ಹಾಗೂ ಮಳವಳ್ಳಿ ತಾಲೂಕಿನಲ್ಲಂತೂ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಕುಸಿದಿದೆ. ರಣ ಬಿಸಿಲು ಹಾಗೂ ಅಂತರ್ಜಲದ ಯಥೇಚ್ಛ ಬಳಕೆಯಿಂದ ನೀರು ಪಾತಾಳ ಸೇರುತ್ತಿದೆ.
Related Articles
Advertisement
ಕೆರೆಯಾಶ್ರಿತ ನಾಗಮಂಗಲ: ನಾಗಮಂಗಲ ಸಂಪೂರ್ಣ ಮಳೆಯ ಆಶ್ರಿತ ಪ್ರದೇಶವಾಗಿದೆ. ಇಲ್ಲಿರುವ ಕೆರೆಗಳಿಗೆ ಮಳೆ ಬಿದ್ದರಷ್ಟೇ ನೀರಿನ ಭಾಗ್ಯ. ಅದರಲ್ಲೇ ಅಂತರ್ಜಲವನ್ನು ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಇಲ್ಲಿರುವ ಕೃಷಿಕರು ವ್ಯವಸಾಯಕ್ಕೆ ಸಂಪೂರ್ಣವಾಗಿ ಅಂತರ್ಜಲದ ಮೇಲೆ ಅವಲಂಬಿತರಾಗಿದ್ದಾರೆ. ಕುಡಿಯುವ ನೀರಿಗೆ ಈ ತಾಲೂಕಿನಲ್ಲಿ ಎದುರಾಗುವಷ್ಟು ಹಾಹಾಕಾರ ಜಿಲ್ಲೆಯ ಇನ್ನಾವುದೇ ತಾಲೂಕುಗಳಲ್ಲಿಯೂ ನೋಡಲಾಗು ವುದಿಲ್ಲ. ಈ ಬೇಸಿಗೆಯಲ್ಲಿ ತಾಲೂಕಿನ 59 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೂ ಅಂತರ್ಜಲವನ್ನೇ ಅವಲಂಬಿ ಸುವಂತಹ ದಯನೀಯ ಸ್ಥಿತಿ ಈ ತಾಲೂಕಿನದ್ದಾಗಿದೆ. ಸಾವಿರಾರು ಅಡಿ ಆಳಕ್ಕೆ ಕೊಳವೆಬಾವಿ ಕೊರೆದರೂ ನೀರು ಸಿಗದಂತಹ ದುಸ್ಥಿತಿ ಈ ತಾಲೂಕಿನಲ್ಲಿದೆ.
ಮಳವಳ್ಳಿ ತಾಲೂಕಿನ ಕೆಲವು ಭಾಗಕ್ಕೆ ಕಾವೇರಿ ನೀರು ಎಟುಕಿಸಿದರೂ ಮುಕ್ಕಾಲು ಭಾಗ ಸಂಪೂರ್ಣ ಮಳೆಯನ್ನೇ ಆಶ್ರಯಿಸಿದೆ. ಒಣಭೂಮಿ ಹೆಚ್ಚಾಗಿದೆ. ಕೆರೆಗಳೆಲ್ಲವೂ ಮಳೆಯ ಮೇಲೆ ಅವಲಂಬಿತವಾಗಿವೆ. ಹಾಗಾಗಿ ಈ ಭಾಗದ ಶೇ.75ರಷ್ಟು ಜನರು ಅಂತರ್ಜಲವನ್ನು ಬಳಕೆ ಮಾಡಿಕೊಂಡು ವ್ಯವಸಾಯ ನಡೆಸುತ್ತಿದ್ದಾರೆ.
ಪ್ರತಿ ತಿಂಗಳೂ ಕುಸಿತ: ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಶೇ.12.19ರಷ್ಟು ಕುಸಿತ ಕಂಡಿದೆ. ಜನವರಿಯಲ್ಲಿ ಶೇ.9.37, ಫೆಬ್ರವರಿಯಲ್ಲಿ ಶೇ.10.56, ಮಾರ್ಚ್‌ನಲ್ಲಿ ಶೇ.11.65ರಷ್ಟು ಅಂತರ್ಜಲ ಇಳಿಮುಖವಾಗಿತ್ತು. ಜಿಲ್ಲೆಯಲ್ಲಿ ಭೂಗರ್ಭ ಇಲಾಖೆಯವರು ನಿಗದಿಪಡಿಸಿರುವ 60 ಕೊಳವೆ ಬಾವಿಗಳಲ್ಲೂ ಪ್ರತಿ ತಿಂಗಳು ಸಮೀಕ್ಷೆ ನಡೆಸಿ ಅಂತರ್ಜಲ ಇಳಿಕೆ ಪ್ರಮಾಣವನ್ನು ಗುರುತಿಸುತ್ತಿದ್ದಾರೆ.
ಅಂತರ್ಜಲ ಅತಿ ಹೆಚ್ಚು ಬಳಕೆ: ಅಂತರ್ಜಲವನ್ನು ಯಥೇಚ್ಛವಾಗಿ ಬಳಸುತ್ತಿರುವ ತಾಲೂಕುಗಳಲ್ಲಿ ಮಳವಳ್ಳಿ ಜಿಲ್ಲೆಗೇ ಪ್ರಥಮ ಸ್ಥಾನದಲ್ಲಿದೆ. ಈ ತಾಲೂಕಿನ ಶೇ.71ರಷ್ಟು ಅಂತರ್ಜಲ ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂದು ಅಂತರ್ಜಲ ನಿರ್ದೇಶನಾಲಯದ ಸರ್ವೆಯಿಂದ ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ, ಮಂಡ್ಯ ತಾಲೂಕು ಶೇ.50ಕ್ಕಿಂತ ಕಡಿಮೆ ಅಂತರ್ಜಲ ಬಳಕೆ ಮಾಡಿಕೊಳ್ಳುತ್ತಿದ್ದರೆ, ಉಳಿದ ತಾಲೂಕುಗಳು ಶೇ.60ರ ಆಸುಪಾಸಿನಲ್ಲಿವೆ. ಆದರೆ, ಮಿತಿ ಮೀರಿದ ಅಂತರ್ಜಲ ಬಳಕೆ ಮಾಡುತ್ತಿರುವ ಮಳವಳ್ಳಿ ತಾಲೂಕನ್ನು ಸೂಕ್ಷ್ಮ ಪ್ರದೇಶಕ್ಕೆ ಸೇರಿಸಲಾಗಿದೆ. ಇದನ್ನು ಗಮನಿಸಿದರೆ ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾದ ನಾಗಮಂಗಲ ತಾಲೂಕಿನಲ್ಲಿ ಮಳವಳ್ಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಅಂತರ್ಜಲ ಬಳಕೆ ಮಾಡುತ್ತಿರುವುದು ಅಚ್ಚರಿಯ ವಿಷಯವೂ ಆಗಿದೆ.