ತೀರ್ಥಹಳ್ಳಿ: ಮಾರ್ಚ್ ಮೊದಲ ವಾರ ತೀರ್ಥಹಳ್ಳಿಯಲ್ಲಿ ಉದ್ಘಾಟನೆಗೊಂಡಿದ್ದ 5 ಅಂತಸ್ತಿನ ಗ್ರಾಮೀಣಾಭಿವೃದ್ಧಿ ಭವನ ಈ ಬಾರಿಯ ಮೊದಲ ಮಳೆಗೇ ಸೋರುತ್ತಿದ್ದು, 13.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡ ಹೀಗೆ ಆಗುತ್ತಿರುವುದಕ್ಕೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಟ್ಟಡದ ಬಲ ಭಾಗದ ಪೂರ್ಣ ಗೋಡೆಯಲ್ಲಿ ನೀರಿನ ಪಸೆ ಒಸರುತ್ತಿದೆ. ಮೇಲ್ಬಾಗದಲ್ಲಿ ಮಳೆ ನೀರು ಸೋರದಂತೆ ಕಬ್ಬಿಣದ ಶೀಟ್ ಹೊದಿಸಲಾಗಿದೆ. ಆದರೆ ಅಲ್ಲೂ ಕೂಡ ಚಾವಣಿಯಿಂದ ನೀರು ಜಿನುಗುತ್ತಿದೆ.
ತಳ ಮಹಡಿಯಲ್ಲೂ ನೀರು ಶೇಖರಣೆಯಾಗುತ್ತಿದೆ. ಹೀಗಾಗಿ ಅಧಿಕಾರಿಗಳಿಗೆ ಭವನ ನಿರ್ವಹಣೆಯ ಸವಾಲು ಎದುರಾಗಿದೆ.
2023ರ ವಿಧಾನಸಭಾ ಚುನಾವಣೆ ಪೂರ್ವದಲ್ಲೇ ಗ್ರಾಮೀಣಾಭಿವೃದ್ಧಿ ಭವನ ಉದ್ಘಾಟಿಸುವ ಸಂಬಂಧ ಕಾಮಗಾರಿಗೆ ಅತ್ಯಂತ ವೇಗ ನೀಡಲಾಗಿತ್ತು. ತುರ್ತಾಗಿ ಉದ್ಘಾಟಿಸುವ ಧಾವಂತದಲ್ಲಿದ್ದ ಇವರು ಸಿಮೆಂಟ್ ಗೋಡೆಗಳಿಗೆ ನೀರು ಕೂಡ ಸಿಂಪಡಣೆ (ಕ್ಯೂರಿಂಗ್) ಮಾಡಿಲ್ಲ. ಈ ಎಲ್ಲಾ ಕಾರಣಕ್ಕೆ ಕಟ್ಟಡದ ಗುಣಮಟ್ಟ ಹಾಳಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅದೇ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಿಂದ ಕಟ್ಟಡ ಉದ್ಘಾಟನೆ ನಡೆದಿರಲಿಲ್ಲ.
ನಾಗರಿಕರ ಸೇವೆಗೆ ಎಂದು ಕಟ್ಟಿದ 5 ಅಂತಸ್ತಿನ ಕಟ್ಟಡದಲ್ಲಿ ಸಮಾಜ ಕಲ್ಯಾಣ, ತಾಲೂಕು ವೈದ್ಯಾಧಿಕಾರಿ, ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ, ಅಕ್ಷರ ದಾಸೋಹ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಚೇರಿ, ಶಾಸಕರ ಕಾರ್ಯಾಲಯ, ಸಭಾಂಗಣ, ವಿಡಿಯೊ ಕಾನ್ಸರೆನ್ಸ್ ಹಾಲ್ ನಿರ್ಮಿಸಲಾಗಿದೆ.
ಈ ಕಟ್ಟಡದಲ್ಲಿ ಮಳೆ ಸೋರುವಿಕೆ ಒಂದೆಡೆಯಾದರೆ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಟ್ಟಡದಲ್ಲಿ ಮಹಡಿ ಏರಲು ಅಳವಡಿಸಿದ್ದ ಲಿಫ್ಟ್ ಉದ್ಘಾಟನೆಗೊಂಡ 2 ತಿಂಗಳಲ್ಲೇ ಕೆಟ್ಟು ನಿಂತಿದೆ. ಗ್ರಾಮೀಣ ಭವನಕ್ಕೆ ಸೌಲಭ್ಯ ಅರಸಿ ಬರುವ ಅಂಗವಿಕಲರು, ಗರ್ಭಿಣಿಯರು, ಮಹಿಳೆಯರು, ಹಿರಿಯ ನಾಗರಿಕರು ಮೆಟ್ಟಿಲು ಏರಲು ಪ್ರತಿನಿತ್ಯ ಪರದಾಡುತ್ತಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ಜನರ ಅನುಕೂಲಕ್ಕೆ ಎಂದು ಕಟ್ಟಿದ ಕಟ್ಟಡದಲ್ಲಿ ಈಗ ಅಧಿಕಾರಿಗಳು ಪರದಾಟ ನಡೆಸುವಂತಾಗಿದೆ. ಅಧಿಕಾರಿಗಳು ಛತ್ರಿ ಹಿಡಿದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಬರಿ ಟೀಕೆ ಟಿಪ್ಪಣಿಯಲ್ಲೇ ಈ ಸಮಸ್ಯೆ ಮುಗಿಯುತ್ತದೆಯೋ ಅಥವಾ ತನಿಖೆ ನಡೆಸುವಂತೆ ಪಟ್ಟು ಹಿಡಿಯುತ್ತಾರೋ ಕಾದು ನೋಡಬೇಕಿದೆ.