Advertisement

ಹೆಮ್ಮಾಡಿ ನೀರಿನ ಸಮಸ್ಯೆ: ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭೇಟಿ

11:19 AM Apr 30, 2022 | Team Udayavani |

ಹೆಮ್ಮಾಡಿ: ಇಲ್ಲಿನ ಹೆಮ್ಮಾಡಿ ಗ್ರಾಮದಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ನೀರಿನ ಮೂಲಗಳು ಬರಿದಾಗುತ್ತಿದೆ. ಈ ಬಗ್ಗೆ ಉದಯವಾಣಿ ಸುದಿನ’ವು ವಿಸ್ತೃತ ವರದಿ ಪ್ರಕಟಿಸಿದ್ದು, ಇದಕ್ಕೆ ಸ್ಪಂದಿಸಿದ ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಎನ್‌. ಅವರು ಶುಕ್ರವಾರ ಹೆಮ್ಮಾಡಿಗೆ ಭೇಟಿ ನೀಡಿ, ಪರ್ಯಾಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.

Advertisement

ಹೆಮ್ಮಾಡಿಯಲ್ಲಿರುವ 900 ಮನೆಗಳ ಪೈಕಿ 500ಕ್ಕೂ ಮಿಕ್ಕಿ ಮನೆಗಳಿಗೆ ನೀರಿನ ಸಮಸ್ಯೆಯಿದೆ. ಪಂಚಾಯತ್‌ ಅಧೀನದ ಬಾವಿ, ಬೋರ್‌ವೆಲ್‌ಗ‌ಳಲ್ಲಿಯೂ ನೀರು ಕಡಿಮೆಯಾಗುತ್ತಿದ್ದು ಇಲ್ಲಿನ ವಾರ್ಡ್‌ಗಳಿಗೆ 2 ಅಥವಾ 3 ದಿನಗಳಿಗೊಮ್ಮೆ ನಳ್ಳಿ ಮೂಲಕ ಕೊಡಲಾಗುತ್ತಿದೆ.

ದರ ಏರಿಕೆಗೆ ಮನವಿ

ಟ್ಯಾಂಕರ್‌ ನೀರಿನ ಪೂರೈಕೆ ಇನ್ನೂ ಆರಂಭವಾಗಿಲ್ಲ. ತಾಲೂಕು ಆಡಳಿತದಿಂದ ಟೆಂಡರ್‌ ಕರೆದರೂ, ಕಡಿಮೆ ದರ ನಿಗದಿಯಿಂದಾಗಿ ಯಾರೂ ಮುಂದೆ ಬಂದಿರಲಿಲ್ಲ. ಇದಕ್ಕಾಗಿ ಪ್ರತೀ ಲೀಟರ್‌ ನೀರಿಗೆ ಕೊಡುವ ದರವನ್ನು 25 ಪೈಸೆ ಬದಲು ಕನಿಷ್ಠ 40 ಪೈಸೆಗೆ ಏರಿಕೆ ಮಾಡಿದರೆ, ಪೂರೈಕೆಗೆ ಜನ ಬರಬಹುದು. ಇದಲ್ಲದೆ 15ನೇ ಹಣಕಾಸು ಯೋಜನೆಯಡಿ ಹಣವಿದ್ದು, ಅದನ್ನು ನೀರಿನ ತುರ್ತು ಅಗತ್ಯತೆಗೆ ಬಳಕೆಗೆ ಅನುಮತಿ ನೀಡಬೇಕು ಎನ್ನುವುದಾಗಿ ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ ಯು. ಸತ್ಯನಾರಾಯಣ ರಾವ್‌ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇದಕ್ಕುತ್ತರಿಸಿದ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ಈ ಎಲ್ಲ ವಿಚಾರವನ್ನು ಉಡುಪಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಭೆಯ ಮುಂದಿಡಲಾಗುವುದು. ಇಲ್ಲಿನ ಸಮಸ್ಯೆ ಬಗ್ಗೆ ಡಿಸಿ ಹಾಗೂ ಜಿ.ಪಂ. ಸಿಇಒ ಗಮನಕ್ಕೆ ತಂದು, ಪರಿಹರಿಸಲು ತ್ವರಿತಗತಿಯಲ್ಲಿ ಪ್ರಯತ್ನಿಸಲಾಗುವುದು ಎಂದವರು ಭರವಸೆ ನೀಡಿದರು. ಇದೇ ವೇಳೆ ಅವರು ಪಂ.ನಿಂದ ತೆಗೆಸಲಾದ ಹೊಸ ಬಾವಿಗಳ ಸ್ಥಿತಿಗತಿಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ ಸತ್ಯನಾರಾಯಣ ರಾವ್‌, ಪಿಡಿಒ ಮಂಜು ಬಿಲ್ಲವ, ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next