Advertisement

ನೀರಿಗಾಗಿ ನೀರೆಯರ ಆಕ್ರೋಶ

12:15 PM Mar 29, 2019 | Team Udayavani |

ಮಾದನ ಹಿಪ್ಪರಗಿ: ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪ್ರತಿ ವಾರ್ಡ್‌ಗೆ ಪೂರೈಸಬೇಕು ಎಂದು ಮಹಿಳೆಯರು ಗ್ರಾಮ ಪಂಚಾಯತ ಸದಸ್ಯರು, ಪಿಡಿಒ ಮತ್ತು ಕಿರಿಯ ಅಭಿಯಂತರರನ್ನು ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕೂಡಿ ಹಾಕಿ ಬೀಗ ಜಡಿದ ಘಟನೆ ಗುರುವಾರ ಗ್ರಾಮದಲ್ಲಿ ನಡೆದಿದೆ. ಬೇಸಿಗೆಯಲ್ಲಿ ಈ ಹಿಂದೆ ಇರದಷ್ಟು ನೀರಿನ ಸಮಸ್ಯೆ ಗ್ರಾಮದಲ್ಲಿ ಉಲ್ಬಣಗೊಂಡಿದೆ.

Advertisement

ಗ್ರಾಮಕ್ಕೆ ಪೂರೈಕೆ ಮಾಡುವ ನೀರಿನ ಮೂಲಗಳಾದ ಕೊಳವೆ ಬಾವಿಗಳು, ಕೇರೂರ ಹತ್ತಿರದ ಬಾವಿಗಳು ಬತ್ತಿರುವುದರಿಂದ ಗ್ರಾಮಕ್ಕೆ ನೀರು ಬರುತ್ತಿಲ್ಲ. ಹಗಲು-ರಾತ್ರಿ ನೀರಿಗಾಗಿ ತಿರುಗಾಡುವುದು ತಪ್ಪಿಲ್ಲ. ಆದರೂ ನೀರು ಸಿಗುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ನೂರಾರು ಮಹಿಳೆಯರು ಗ್ರಾಪಂ ಸದಸ್ಯರನ್ನು, ಉಪಾಧ್ಯಕ್ಷರನ್ನು, ಪಿಡಿಒ, ಜೆಇ ಹಾಗೂ ಮುಖಂಡರನ್ನು ಗ್ರಾಪಂ ಕಾರ್ಯಾಲಯದಲ್ಲಿ ಕೂಡಿಹಾಕಿ ಬೀಗ ಜಡಿದರು.

ಗ್ರಾಮದ ಹಿರಿಯ ಮಹಿಳೆಯರಾದ ಸಾವಂತ್ರೆಮ್ಮ ಪ್ಯಾಟಿ ಮಾತನಾಡಿ, ಚುನಾವಣೆ ಹತ್ತಿರ ಬಂದಾಗ ಮಾತ್ರ ನೀರು, ಚರಂಡಿ, ರಸ್ತೆ, ಮನೆ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಗೆದ್ದ ಮೇಲೆ ಮಾಯವಾಗುತ್ತಾರೆ. ಈ ಬಾರಿ ಲೋಕಸಭಾ ಚುನಾವಣೆ ಬಹಿಷ್ಕರಿಸಿಯೇ ತೀರುತ್ತೇವೆ ಎಂದು ಹೇಳಿದರು.

ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಬಾಬುರಾವ್‌ ಪಾಟೀಲ ಮಾತನಾಡಿ, ಗ್ರಾಮದ ನೀರಿನ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿ, ತಮ್ಮನ್ನು ಕಾರ್ಯಾಲಯದಲ್ಲಿ ಕೂಡಿಹಾಕಿದ್ದನ್ನು ತಿಳಿಸಿದರು. ಸಮಸ್ಯೆ ಗಂಭೀರತೆ ಅರಿತ ತಾಲೂಕಾ ಅಧಿಕಾರಿಗಳು ಕೂಡಲೇ ಗ್ರಾಮದ ಎಂಟು ವಾರ್ಡ್‌ಗಳಿಗೆ ತಲಾ ನಾಲ್ಕು ಟ್ಯಾಂಕರ್‌ಗಳ ನೀರು ಕೊಡಬೇಕೆಂದು ಸೂಚಿಸಿದರು.

ಗ್ರಾಮದ ಕೆಲವು ವಾರ್ಡ್‌ಗಳಲ್ಲಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿತ್ತು. ಈಗ ಅದನ್ನು ಎಲ್ಲ ವಾರ್ಡುಗಳಿಗೂ ವಿಸ್ತರಿಸಲಾಗುವುದು ಎಂದು ಜೆಇ ಚಂದ್ರಕಾಂತ ಹೇಳಿದರು. ನಂತರ ಟ್ಯಾಂಕರ್‌ವೊಂದು ನೀರು ಹೊತ್ತುಕೊಂಡು ಬಂದು ನಿಂತಿತು. ಆಗ ಎಲ್ಲ ಮಹಿಳೆಯರು ನೀರು ತುಂಬಲು ಮುಗಿ ಬಿದ್ದರು.

Advertisement

ಉಪಾಧ್ಯಕ್ಷ ಶಿವಲಿಂಗಪ್ಪ ಜಮಾದಾರ, ಸದಸ್ಯರಾದ ಗಣೇಶ ಓನಮಶೆಟ್ಟಿ, ದೊಂಡಿಬಾ ಪೂಜಾರಿ, ಲಕ್ಷ್ಮಣ ಸಮತಾಜೀವನ ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಕರ್ಜಗಿ ಗ್ರಾಪಂಗೆ ನಾರಿಯರ ಮುತ್ತಿಗೆ
ಅಫಜಲಪುರ: ತಾಲೂಕಿನ ಕರ್ಜಗಿಯ ವಾರ್ಡ್‌ ನಂ1. 5 ಮತ್ತು 6 ರಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ವಾರ್ಡ್‌ ನಿವಾಸಿಗಳೆಲ್ಲ ಗ್ರಾಪಂ ಕಚೇರಿಗೆ ಕೊಡಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸುಮಾರು ದಿನಗಳಿಂದ ಗ್ರಾಮದ ಎರಡು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇರುವ ಕೊಳವೆ ಬಾವಿ ಹಾಳಾಗಿ ಸ್ಥಗಿತವಾಗಿದೆ. ಸರ್ಕಾರಿ ನಲ್ಲಿಗಳ ವ್ಯವಸ್ಥೆಯೂ ಇಲ್ಲ. ಹೀಗಾಗಿ ಖಾಸಗಿ ಹೊಲ, ಗದ್ದೆಗಳಿಗೆಲ್ಲ ಅಲೆದಾಡಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಷಯದ ಕುರಿತು ಗ್ರಾ.ಪಂ.ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಖಾಲಿ ಕೊಡಗಳೊಂದಿಗೆ ಗ್ರಾ.ಪಂ. ಕಚೇರಿಗೆ ಮುತ್ತಿಗೆ ಹಾಕಿದ್ದೇವೆ. ಈಗಲಾದರೂ ಸಂಬಂಧ ಪಟ್ಟವರು ಸಮಸ್ಯೆಗೆ ಪರಿಹಾರ ಕಲ್ಪಿಸಲಿ. ಇಲ್ಲವಾದರೆ ಬರುವ ದಿನಗಳಲ್ಲಿ ಗ್ರಾ.ಪಂ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.

10ದಿಂದ 12 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ನೀರು ಪೂರೈಸುವುದು ಕಷ್ಟದ ಕೆಲಸವಾಗಿದೆ. ಗ್ರಾಮಸ್ಥರು ನೀರನ್ನು ಮಿತವಾಗಿ ಬಳಕೆ ಮಾಡುವಂತೆ ಡಂಗುರ ಸಾರಲಾಗಿದೆ. ಆದರೂ ಸಾರ್ವಜನಿಕರು ನೀರನ್ನು ಮನಸೋ ಇಚ್ಛೆ ಬಳಕೆ ಮಾಡುತ್ತಾರೆ ಎಂದು ಗ್ರಾ.ಪಂ ಅಧ್ಯಕ್ಷರು ಹೇಳಿದರು.

ಗ್ರಾಪಂ ಸದಸ್ಯರಾದ ಮಹಾದೇವ ಬೋರಟಿ, ವಿಠ್ಠಲ ಪೂಜಾರಿ, ವಿಜು ಮೇತ್ರೆ, ಮುಖಂಡ ಸಿದ್ಧಪ್ಪ ಹೊರ್ತಿ, ಸುಧಾರಾಣಿ ಸುತಾರ, ಕಲಾವತಿ ತಡಲಗಿ, ನಿಂಗಮ್ಮ ಅಗರಖೇಡ, ಬೋರಮ್ಮ, ಜಗದೇವಿ, ಸವಿತಾ, ಜಯಶ್ರೀ, ಸಾಯಬಕ್ಕ, ಶಾಂತಾಬಾಯಿ ಖೇಡ, ಶಿವಲೀಲಾ, ಜ್ಯೋತಿ, ನೀಲಮ್ಮ, ಅಶ್ವಿ‌ನಿ, ಲಕ್ಷ್ಮೀಬಾಯಿ, ಮಾನಂದ, ಮಲ್ಲಮ್ಮ, ಸಿದ್ಧಮ್ಮ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next