ಬೆಳಗಾವಿ: ಮಳೆಯ ಅಬ್ಬರಕ್ಕೆ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಭತ್ತದ ಬೆಳೆಯಲ್ಲಿ ನಿಂತಿರುವ ನೀರು ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಬೆಳೆ ಸಂಪೂರ್ಣ ಹಾನಿಗೀಡಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅಕಾಲಿಕ ಮಳೆಯಿಂದಾಗಿ ಬೆಳೆಯಲ್ಲಿ ನೀರು ನಿಂತು ರೈತರು ನಷ್ಟ ಅನುಭವಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಕೊಯ್ಲು ಮಾಡಿದ್ದ ಭತ್ತಕ್ಕೆ ನೀರು ನುಗ್ಗಿದೆ. ಕಟಾವಿಗೆ ಬಂದ ಭತ್ತ ಸಂಪೂರ್ಣ ಜಲಾವೃತಗೊಂಡಿದೆ. ಜಲಾವೃತಗೊಂಡ ಭತ್ತದ ಬಣವೆಗಳ ನೀರಿನ ಮಟ್ಟ ಕಡಿಮೆ ಆಗಿಲ್ಲ.
ಭತ್ತ ಕೊಯ್ಲು ಮಾಡಿ ಜಮೀನಿನಲ್ಲಿಯೇ ಒಣಗಲು ಬಿಡಲಾಗಿತ್ತು. ಇನ್ನೇನು ರಾಶಿ ಮಾಡಲು ರೈತರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಕಾಲಿಕ ಮಳೆ ರೈತರ ಬದುಕಿಗೆ ಕೊಳ್ಳೆ ಇಟ್ಟಿದೆ. ಭತ್ತ ರಾಶಿ ಮಾಡಿ ಚೀಲ ತುಂಬಿ ಇಡಬೇಕಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಅನಗೋಳ, ಯಳ್ಳೂರು, ವಡಗಾಂವಿ, ಮಚ್ಛೆ, ಹಲಗಾ, ಬಸವನ ಕುಡಚಿ, ಕಲಖಾಂಬ, ಮುಚ್ಚಂಡಿ, ಅಷ್ಟೇ, ಚಂದಗಡ, ಕಣಬರ್ಗಿ, ಕಂಗ್ರಾಳಿ ಕೆ.ಎಚ್., ಕಂಗ್ರಾಳಿ ಬಿ.ಕೆ. ಸೇರಿದಂತೆ ವಿವಿಧ ಕಡೆ ಬೆಳೆದ ಭತ್ತ ಹಾನಿಗೀಡಾಗಿದೆ. ಹೊಲದಲ್ಲಿ ಕಾಲು ಇಡಲಾರದಂತ ಸ್ಥಿತಿ ಇದೆ. ಕಳೆದ ರಾತ್ರಿಯಿಂದ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಇನ್ನೂ ನೀರು ಮಾತ್ರ ಇಂಗಿಲ್ಲ. ಬೆಳಗಾವಿ ಬಾಸಮತಿ, ಇಂದ್ರಾಣಿ ಸೇರಿದಂತೆ ವಿವಿಧ ಭತ್ತದ ಬೆಳೆಗಳು ಹಾನಿಗೀಡಾಗಿವೆ. ನೀರು ನಿಂತು ಕೆಲವು ಕಡೆಗೆ ಬೆಳೆ ಕೊಳೆತಿವೆ.
ಶುಕ್ರವಾರ ಬೆಳಗ್ಗೆಯಿಂದ ಮಳೆ ಪ್ರಮಾಣ ಕಡಿಮೆ ಆಗಿದ್ದು, ಜಿಟಿಜಿಟಿ ಮಳೆ ಸುರಿಯುತ್ತಿದೆ. ಬೆಳಗಾವಿ, ಖಾನಾಪುರ, ಕಿತ್ತೂರು ತಾಲುಕು ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆ ಆಗುತ್ತಿದೆ.
ನೀರಲ್ಲಿ ಕುಳಿತು ರೈತರ ಅರೆಬೆತ್ತಲೆ ಪ್ರತಿಭಟನೆ: ಇಲ್ಲಿಯ ಹಲಗಾ-ಮಚ್ಛೆ ಬೆ„ಪಾಸ್ ರಸ್ತೆ ನಿರ್ಮಾಣ ವಿರೋಧಿ ಸಿ ರೈತರು ನೀರು ತುಂಬಿಕೊಂಡಿರುವ ಹೊಲದಲ್ಲಿಯೇ ಕುಳಿತುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಒಂದೆರಡು ಅಡಿವರೆಗೆ ನೀರು ಜಮೀನಿನಲ್ಲಿ ನಿಂತಿದ್ದು, ಅದರಲ್ಲಿಯೇ ಕುಳಿತುಕೊಂಡು ರೈತರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆ„ಪಾಸ್ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಹೊಲಗಳಲ್ಲಿ ನೀರು ನಿಂತಿದೆ. ಸುತ್ತಲೂ ಸುಮಾರು ಅರ್ಧ ಕಿ.ಮೀ. ಗೂ ಹೆಚ್ಚು ದೂರದ ವರೆಗೆ ನೀರು ತುಂಬಿಕೊಂಡಿದ್ದರಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಇಲ್ಲಿಯ ಬಳ್ಳಾರಿ ನಾಲಾ ನೀರು ಹರಿದು ಭತ್ತದ ಬೆಳೆಯಲ್ಲಿ ನಿಂತಿದೆ. ಈಗ ಸ್ವಲ್ಪ ಪ್ರಮಾಣದಲ್ಲಿ ನೀರು ಕಡಿಮೆಯಾಗಿದ್ದರೂ ಇನ್ನೂ ತೇವಾಂಶ ಮಾತ್ರ ಇಳಿಕೆ ಆಗಿಲ್ಲ.