Advertisement
ಇದು ಹಿಡಕಲ್ ಜಲಾಶಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಅಭಯ. ಈಗಿರುವ ಸ್ಥಿತಿಯಲ್ಲಿ ಜಲಾಶಯದಿಂದ ಕುಡಿಯುವ ನೀರು ಸರಬರಾಜಿಗೆ ಯಾವುದೇ ಅಡ್ಡಿ ಇಲ್ಲ. ಮೇ ತಿಂಗಳಲ್ಲಿ ಉತ್ತಮ ಮಳೆಯಾದರೆ ಜಲಾಶಯಕ್ಕೆ ಇನ್ನಷ್ಟು ನೀರು ಬರಬಹುದು ಎಂಬುದು ಅಧಿಕಾರಿಗಳ ವಿಶ್ವಾಸ.
Related Articles
Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸುಮಾರು 2 ಟಿಎಂಸಿ ಅಡಿ ನೀರು ಕಡಿಮೆಯಿದೆ. 2018ರಲ್ಲಿ ಜಲಾಶಯದಲ್ಲಿ ಈ ವೇಳೆಗೆ ಬಳಸಲು ಯೋಗ್ಯವಾದ 6.04 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈ ವರ್ಷ ಇದೇ ಅವಧಿಗೆ ಜಲಾಶಯದಲ್ಲಿ 4.28 ಟಿಎಂಸಿ ಅಡಿ ನೀರು ಉಳಿದುಕೊಂಡಿದೆ.
ಈ ಬಾರಿ ಬಿಸಿಲಿನ ಪ್ರಖರತೆ ಹಾಗೂ ಭೀಕರ ಬರಗಾಲ ಎದುರಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ನೀರಾವರಿಗೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗಿದೆ. ಜೂನ್‌ವರೆಗೆ ಎರಡೂ ಜಿಲ್ಲೆಗಳಿಗೆ ಯಾವ ತೊಂದರೆಯೂ ಆಗದು ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಾದೇಶಿಕ ಆಯುಕ್ತರ ಆದೇಶದಂತೆ ಮಾತ್ರ ಕುಡಿಯಲು ನೀರು ಬಿಡುಗಡೆ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಗೆ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ 2 ಟಿಎಂಸಿ ಅಡಿ ನೀರು ಬಿಡಲಾಗಿದೆ. ಹೀಗಾಗಿ ಅಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.
ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಲಕ್ಷಾಂತರ ಎಕರೆ ಪ್ರದೇಶದ ನೀರಾವರಿಗೆ ಈ ಜಲಾಶಯವೇ ಮುಖ್ಯ ಆಸರೆ. ಜಲಾಶಯ ನಿರ್ಮಾಣವಾದ ನಂತರ ನಾಲ್ಕೈದು ಬಾರಿ ಹೊರತುಪಡಿಸಿ ಉಳಿದ ಯಾವ ಅವಧಿಯಲ್ಲೂ ಕುಡಿಯಲು ಹಾಗೂ ನೀರಾವರಿಗೆ ನೀರು ಕೊಡುವಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಜಲಾಶಯ ಸಹ ಭರ್ತಿಯಾಗಿದೆ.-ಎಸ್.ಎಂ. ಮಾಡಿವಾಲೆ, ಸಹಾಯಕ ಇಂಜಿನಿಯರ್, ಹಿಡಕಲ್ ಜಲಾಶಯ * ಕೇಶವ ಆದಿ