ಮುದ್ದೇಬಿಹಾಳ: ತಾಲೂಕಿನ ಪಡೇಕನೂರ ಕೆರೆ ತುಂಬಿಸಲು ಹೊಸದಾಗಿ ನಿರ್ಮಿಸಲಾಗಿರುವ ಚಿಮ್ಮಲಗಿ ಪಶ್ಚಿಮ ಕಾಲುವೆಯಿಂದ ನೀರು ಬಿಟ್ಟಾಗ ಮಡಿಕೇಶ್ವರ-ಚೊಂಡಿ ಹತ್ತಿರ ಉಪಕಾಲುವೆಯಲ್ಲಿ ಗುರುವಾರ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆ ಆಗತೊಡಗಿದೆ. ಇದು ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ.
ಕಾಲುವೆಯಿಂದ ಹೊರ ಹರಿಯುತ್ತಿರುವ ನೀರು ಕಾಲುವೆ ಅಕ್ಕಪಕ್ಕದ ರೈತರ ಜಮೀನುಗಳಿಗೆ ನುಗ್ಗಿದೆ. ಕಾಲುವೆಯಲ್ಲಿ ಬಿಟ್ಟ ನೀರು ಕೆರೆಗೆ ಸೇರುವುದಕ್ಕೂ ಮುನ್ನವೇ ಈ ರೀತಿ ನಿರುಪಯುಕ್ತವಾಗಿ ಹರಿದು ಹೋಗುತ್ತಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಲುವೆಯಲ್ಲಿ ಪ್ರಥಮ ಬಾರಿ ನೀರು ಬಿಟ್ಟಾಗ ಈ ಗತಿ ಆಗಿದೆ.
ಇನ್ನು ಮುಂದಿನ ದಿನಗಳಲ್ಲಿ ಕಾಲುವೆಯಲ್ಲಿ ನಿರಂತರ ನೀರು ಬಿಟ್ಟಾಗ ಏನಾಗಬಹುದು. ನೀರಿನ ಒತ್ತಡ ತಾಳದೆ ಕಾಲುವೆಯೇ ಒಡೆದು ಹೋಗಬಹುದು ಎನ್ನುವ ಆತಂಕ ಕಾಲುವೆ ಪಕ್ಕದ ರೈತರಲ್ಲಿ ಮನೆ ಮಾಡಿದೆ. ಕಾಲುವೆಯಿಂದ ನೀರು ಸೋರಿಕೆ ಆಗಲು ಕಳಪೆ ಗುಣಮಟ್ಟದ ಮರಳು, ಸಿಮೆಂಟ್ ಬಳಸಿದ್ದು, ಕಾಂಕ್ರೀಟ್ ಹಾಕಿದ ಮೇಲೆ ಸರಿಯಾಗಿ ಕ್ಯೂರಿಂಗ್ ಮಾಡದೆ ಇರುವುದೇ ಕಾರಣ ಎಂದು ಗ್ರಾಮಸ್ಥರು ಆಪಾದಿಸುತ್ತಿದ್ದಾರೆ.
ಸಂಬಂಧಿಸಿದ ಕಾಲುವೆ ವಿಭಾಗದ ಅಧಿಕಾರಿಗಳು ಈ ಕೂಡಲೇ ಕಾಲುವೆಯಲ್ಲಿ ನೀರು ಹರಿಯುವಿಕೆ ಬಂದ್ ಮಾಡಬೇಕು. ಎಲ್ಲೆಲ್ಲಿ ಕಳಪೆ ಕಾಮಗಾರಿ ಆಗಿದೆಯೋ ಅಲ್ಲೆಲ್ಲ ಗುಣಮಟ್ಟದ ಕಾಮಗಾರಿ ನಡೆಸಿ ಸೋರುವುದನ್ನು ಬಂದ್ ಮಾಡಬೇಕು. ಇಲ್ಲವಾದಲ್ಲಿ ರೈತರೆಲ್ಲ ಸೇರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶಿವಯ್ಯ ಬಿರಾದಾರ, ಗುರುಬಸಪ್ಪ ಮೇಟಿ, ಸುಭಾಷ ಮೇಟಿ, ಮಲ್ಲಪ್ಪ ರಾಮತಾಳ, ಮಹೇಶ ಪಾಟೀಲ, ಭೀಮನಗೌಡ ಮೇಟಿ, ಮಲ್ಲನಗೌಡ ಮೇಟಿ, ನಾಗಪ್ಪ ರಾಮತಾಳ, ರಾಜಶೇಖ ಪೂಜಾರಿ, ಸುಭಾಷ ಮೇಲಿನಮನಿ, ರಾಮನಗೌಡ ಮೇಟಿ ಎಚ್ಚರಿಸಿದ್ದಾರೆ.