Advertisement

10ರ ವರೆಗೆ ನೀರು ಹರಿಸಲು ಆಗ್ರಹ

01:10 PM Mar 29, 2019 | Team Udayavani |
ಬಳ್ಳಾರಿ: ತುಂಗಭದ್ರಾ ಜಲಾಶಯದ ಬಲದಂಡೆಯ ಎಲ್‌ಎಲ್‌ಸಿ ಕಾಲುವೆಗೆ ಏ.10ರ ವರೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಹೊಸಪೇಟೆಯ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ನೀರಾವರಿ ಸಲಹಾ ಸಮಿತಿಯಲ್ಲಿ ಶಾಸಕರು, ಸಂಸದರು ಕೈಗೊಂಡ ನಿರ್ಣಯದಿಂದಲೇ ಜಿಲ್ಲೆಯ ಎಲ್‌ಎಲ್‌ಸಿ ಕಾಲುವೆ ವ್ಯಾಪ್ತಿಯ 75 ಸಾವಿರ ಎಕರೆ ಜಮೀನಿನಲ್ಲಿ ರೈತರು ಭತ್ತ ನಾಟಿ ಮಾಡಿದ್ದಾರೆ. ಆದರೆ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಚಳಿ ಇದ್ದಿದ್ದರಿಂದ ಭತ್ತ ತೆನೆ ಕಟ್ಟುವಲ್ಲಿ ವಿಳಂಬವಾಗಿದೆ.
ಇದೀಗ ಮಾ.31ಕ್ಕೆ ಎಲ್‌ಎಲ್‌ಸಿ ಕಾಲುವೆ ನೀರು ಕಡಿತಗೊಳಿಸಲಾಗುತ್ತದೆ. ಇದರಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸಲಿದ್ದು, ಏ.10ರ ವರೆಗೆ ಎಲ್‌ಎಲ್‌ಸಿ ಕಾಲುವೆಗೆ ಕಡ್ಡಾಯವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ಹೊಸಪೇಟೆ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ತುಂಗಭದ್ರಾ ಜಲಾಶಯದಲ್ಲಿ ಸದ್ಯ 8 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಿದೆ.
ಇದರಲ್ಲಿ 2 ಟಿಎಂಸಿ ಡೆಡ್‌ ಸ್ಟೋರೇಜ್‌ಗೆ ಮೀಸಲಿಡಲಾಗುತ್ತದೆ. ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಕುಡಿಯುವ ನೀರಿನ ಉದ್ದೇಶದಿಂದಾಗಿ 2 ಟಿಎಂಸಿ, ರಾಯ, ಬಸವ, ವಿಜಯನಗರ ಕಾಲುವೆಗಳಿಗೆ 1 ಟಿಎಂಸಿ ನೀರನ್ನು ಮೀಸಲಿಡಲಾಗುತ್ತದೆ. ಇನ್ನು ಹೆಚ್ಚುವರಿಯಾಗಿ ಮೂರು ಟಿಎಂಸಿ ನೀರು ಲಭ್ಯವಿದೆ. ಹಾಗಾಗಿ ಎಚ್‌ಎಲ್‌ಸಿ ಕಾಲುವೆಗೆ ಮಾ.31ಕ್ಕೆ ಯಾವುದೇ ಕಾರಣಕ್ಕೆ ನೀರು ಕಡಿತಗೊಳಿಸದೆ, ಏ.10ರ ವರೆಗೆ ಆಂಧ್ರ-ಕರ್ನಾಟಕ ಪಾಲಿನ ನೀರನ್ನು ಜಂಟಿಯಾಗಿ ಕಾಲುವೆಗೆ ಹರಿಸಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿಯಲ್ಲಿನ ರಾಜ್ಯದ ಅಧಿಕಾರಿಗಳು ಆಂಧ್ರದ ಅಧಿಕಾರಿಗಳಿಗೆ ಭಯ ಪಡುತ್ತಿದ್ದಾರೆ ಎಂದು ಆರೋಪಿಸಿದ ಪುರುಷೋತ್ತಮಗೌಡ, ಕಳೆದ ವರ್ಷ ಈ ಸಮಯಕ್ಕೆ ಜಲಾಶಯದಲ್ಲಿ ಕೇವಲ 5 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಈ ಬಾರಿ 8 ಟಿಎಂಸಿ ನೀರು ಸಂಗ್ರಹವಿದೆ. ಆಂಧ್ರದವರು ಪ್ರತಿದಿನ 2 ಸಾವಿರ ಕ್ಯುಸೆಕ್‌ ನೀರು ಕೊಂಡೊಯ್ಯುತ್ತಿದ್ದಾರೆ.
ಜಲಾಶಯದಲ್ಲಿ ಇರುವ ಹೆಚ್ಚುವರಿ ನೀರನ್ನು ಕಾಲುವೆಗಳಿಗೆ ಹರಿಸಿ ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವಂತೆ ಕೋರಿದರೂ, ಮಂಡಳಿಯ ಮುಖ್ಯ ಇಂಜಿನಿಯರ್‌ ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಂಧ್ರದ ಅಧಿಕಾರಿಗಳಿಗೆ ಭಯ ಪಡುತ್ತಿರುವ ಮಂಡಳಿಯ ಮುಖ್ಯ ಇಂಜಿನಿಯರ್‌ ಬೇರೆಡೆಗೆ ವರ್ಗಾಯಿಸಿಕೊಂಡು ಹೋದರೆ ಜಿಲ್ಲೆಯ ರೈತಾಪಿ ವರ್ಗಕ್ಕೆ ಸಂತಸವಾಲಿದೆ ಎಂದರು.
ಜನಪ್ರತಿನಿಧಿಗಳು ಗಮನಿಸಬೇಕು: ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಸಂಸದ ವಿ.ಎಸ್‌. ಉಗ್ರಪ್ಪ, ಬಿಜೆಪಿಯ ವೈ.ದೇವೇಂದ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌, ಬಿಜೆಪಿಯ ಜಗದೀಶ್‌ ಶೆಟ್ಟರ್‌ ಸೇರಿದಂತೆ ಇನ್ನಿತರೆ ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗ್ಗೆ ಗಮನ ಹರಿಸಬೇಕು. ಈ ಹಿಂದೆ
ರೈತರನ್ನು ನಿರ್ಲಕ್ಷಿಸಿದ್ದ ಜಿಲ್ಲೆಯ ಹಲವರು ಸೋಲುಂಡಿದ್ದಾರೆ. ಹಾಗಾಗಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಸೀದಿಪುರ ಬಸವನಗೌಡ, ಗಂಗಾವತಿ ವೀರೇಶ್‌, ಜಾಲಿಹಾಳ್‌ ಶ್ರೀಧರಗೌಡ, ಕೊಂಚಿಗೇರಿ
ಮಲ್ಲಪ್ಪ, ಕರೂರು ರಾಮನಗೌಡ, ಮುಷ್ಠಗಟ್ಟೆ ಭೀಮನಗೌಡ, ಗೆಣಿಕೆಹಾಳು ಶರಣಪ್ಪ, ಕೊಂಚಿಗೇರಿ ಗೋವಿಂದಪ್ಪ, ಹಾಗಲೂರು ಬಸವನಗೌಡ ಸೇರಿದಂತೆ ಸಂಘದ ಮುಖಂಡರು ಇದ್ದರು.
ಏ.25ರಂದು ಅಮೃತ ಮಹೋತ್ಸವ ತುಂಗಭದ್ರಾ ಜಲಾಶಯ ನಿರ್ಮಾಣಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಏ.25 ರಂದು ನಗರದಲ್ಲಿ ಸಂಘದಿಂದ ಅಮೃತ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುವುದು. ಮಹೋತ್ಸವದಲ್ಲಿ ಜಲಾಶಯದಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಗುವುದು. ಜತೆಗೆ ಸತತ ಮೂರನೇ ಬಾರಿಗೆ ತುಂಗಭದ್ರಾ ಜಲಾಶಯದಲ್ಲಿನ ಹೂಳನ್ನು ತೆರವುಗೊಳಿಸುವ ಹೂಳಿನ ಜಾತ್ರೆಯನ್ನು ಮೇ.16ರಿಂದ ಹಮ್ಮಿಕೊಳ್ಳಲಾಗುವುದು ಎಂದು ದರೂರು ಪುರುಷೋತ್ತಗೌಡ ತಿಳಿಸಿದರು
ಎಲ್‌ಎಲ್‌ಸಿ ಕಾಲುವೆಯಿಂದ ಕೆರೆಗಳಿಗೆ ನೀರು 
ಸಿರುಗುಪ್ಪ: ತಾಲೂಕಿನಲ್ಲಿರುವ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ಗುರುವಾರ ಮುಂದಾಗಿದ್ದಾರೆ. ಈ ಹಿಂದೆ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಕಳೆದ ಮಾ.24 ರಂದು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳ ನಿರ್ಲಕ್ಷತೆಯಿಂದ ತಾಲೂಕಿನಲ್ಲಿನರುವ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ ಎಂದು ಆರೋಪಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ತಾಲೂಕಿನಲ್ಲಿ ಹರಿಯುವ ಎಲ್‌ಎಲ್‌ಸಿ ಕಾಲುವೆ ಭಾಗದ ವ್ಯಾಪ್ತಿಯಲ್ಲಿ ಕರೂರು, ಸಿರಿಗೇರಿ, ತಾಳೂರು, ಎಚ್‌.ಹೊಸಳ್ಳಿ ಮುಂತಾದ ಕೆರೆಗಳಿಗೆ ಮತ್ತು ಬಾಗೇವಾಡಿ ಕಾಲುವೆ ವ್ಯಾಪ್ತಿಯಲ್ಲಿರುವ ತೆಕ್ಕಲಕೋಟೆ, ಉಪ್ಪಾರು ಹೊಸಳ್ಳಿ, ಹಳೇಕೋಟೆ, ಬೂದುಗುಪ್ಪ, ಬಗ್ಗೂರು, ಅರಳಿಗನೂರು ಮುಂತಾದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿದ್ದಾರೆ.
ಕಾಲುವೆಯಿಂದ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪೊಲೀಸ್‌ ಸಿಬ್ಬಂದಿ ಬಾಗೇವಾಡಿ ಕಾಲುವೆ ಮೇಲೆ ಗಸ್ತು ತಿರುಗುತ್ತಿದ್ದಾರೆ. ಈ ಸಂದರ್ಭದಲ್ಲಿ ತಾಪಂ ಇಒ ಶಿವಪ್ಪ
ಸುಬೇದಾರ್‌, ನೀರು ಮತ್ತು ನೈರ್ಮಲ್ಯ ಅಧಿಕಾರಿ ಫಕ್ಕೀರಸ್ವಾಮಿ ಪೊಲೀಸ್‌ ಸಿಬ್ಬಂದಿ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next