ರಾಯಬಾಗ: ಪ್ರತಿ ವರ್ಷಕ್ಕಿಂತಲೂ ಈ ವರ್ಷ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಮಾರ್ಚ್ ತಿಂಗಳಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ.
ಕೃಷ್ಣಾ ನದಿಯಲ್ಲಿ ನೀರಿಲ್ಲದಿರುವುದರಿಂದ ತಾಲೂಕಿನ ದಿಗ್ಗೇವಾಡಿ ಗ್ರಾಮದ ಹತ್ತಿರ ಕೃಷ್ಣಾ ನದಿಯ ಜಾಕವೆಲ್ದಿಂದ ಮಾವಿನಹೊಂಡಾ ಗ್ರಾಮದ ಓವರ್ ಹೆಡ್ ಟ್ಯಾಂಕಿಗೆ ಹೋಗುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಭೆಂಡವಾಡ, ಮಾವಿನಹೊಂಡ, ದೇವನಕಟ್ಟಿ, ಬೂದಿಹಾಳ, ದೇವಾಪೂರಹಟ್ಟಿ, ಹುಬ್ಬರವಾಡಿ, ಮೇಖಳಿ, ಮಾರಡಿ, ಬಾವಚಿ, ಜೋಡಟ್ಟಿ ಸೇರಿದಂತೆ ಹನ್ನೊಂದು ಗ್ರಾಮಗಳಿಗೆ ನೀರಿನ ಸರಬರಾಜು ಸ್ಥಗಿತಗೊಂಡಿದೆ.
ಸುಟ್ಟಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮೊರಬ, ನಿಲಜಿ, ಸುಟ್ಟಟ್ಟಿ, ಸುಟ್ಟಟ್ಟಿ ಕ್ರಾಸ್ ಈ ಗ್ರಾಮಗಳಿಗೆ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಕೋಳಿಗುಡ್ಡ ಯೋಜನೆಯಿಂದ ಕೋಳಿಗುಡ್ಡ, ಗುಂಡವಾಡ, ಶಿರಗೂರ, ಸಿದ್ದಾಪೂರ ಗ್ರಾಮಗಳಿಗೆ ನೀರು ಪೂರೈಕೆ ಸಂಪೂರ್ಣ ಬಂದ್ ಆಗಿದೆ.
ತಾಲೂಕಿನಲ್ಲಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಬಂದ್ ಆದ ಕಾರಣ ಕುಡಿಯುವ ನೀರಿಗಾಗಿ ಮಹಿಳೆಯರು, ಮಕ್ಕಳು, ಪುರುಷರು ಸುಮಾರು 2 ಕಿಮೀ ದೂರದಲ್ಲಿರುವ ಜಲ ಮೂಲಗಳಿಂದ ನೀರು ತರುವುದೇ ಒಂದು ಕಾಯಕವಾಗಿದೆ. ಹಗಲಿನಲ್ಲಿ ಬಿಸಿಲಿನ ತಾಪದಲ್ಲಿ ಹಾಗೂ ಮಧ್ಯ ರಾತ್ರಿಯಲ್ಲಿ ಕತ್ತಲಿನಲ್ಲಿ ಟಾರ್ಚ್ ಹಿಡಿದು ನೀರು ತರುವುದು ಸಾಮಾನ್ಯವಾಗಿದೆ.
•ಡಿ.ಎಂ. ಐಹೊಳೆ ಶಾಸಕರು ರಾಯಬಾಗ ಮತಕ್ಷೇತ್ರ
Advertisement
ತಾಲೂಕಿನ ಜೀವನಾಡಿಯಾಗಿರುವ ಕೃಷ್ಣಾ ನದಿ ಕಳೆದ 26 ದಿನಗಳಿಂದ ಸಂಪೂರ್ಣ ಬತ್ತಿಹೋಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ರೈತರ ಬೆಳೆಗಳು ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಮೊದಲೇ ಸಂಕಷ್ಟದಲ್ಲಿರುವ ರೈತ ಒಣಗಿದ ಬೆಳೆಗಳನ್ನು ನೋಡಿ ಮಮ್ಮಲ ಮರುಗುತ್ತಿದ್ದಾನೆ. ಸರಕಾರದ ಬಹುಗ್ರಾಮ ಯೋಜನೆಗಳು ಸಂಪೂರ್ಣವಾಗಿ ಬಂದ್ ಆಗಿವೆ.
Related Articles
Advertisement
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತಹಶೀಲದಾರ ಡಿ.ಎಚ್.ಕೋಮಾರ, ಕುಡಿಯುವ ನೀರಿನ ತೊಂದರೆ ಇರುವ ಗ್ರಾಮಗಳ ಗ್ರಾಪಂ ಸದಸ್ಯರು ಟ್ಯಾಂಕರ್ ನೀರು ಪೂರೈಕೆಗೆ ಮನವಿ ಪತ್ರ ಕೊಟ್ಟರೆ ಅಂಥ ಗ್ರಾಮಗಳಿಗೆ ನೀರು ಪೂರೈಕೆ ಮಾಡುವದಾಗಿ ತಿಳಿಸಿದರು. ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾದರೂ ಮೇವಿನ ಸಮಸ್ಯೆ ಎದುರಾಗಿಲ್ಲ. ಆದರೂ ತಾಲೂಕಾ ಆಡಳಿತದಿಂದ ಮೇವು ಪೂರೈಕೆ ಕುರಿತು ಮುಂಜಾಗ್ರತಾ ಕ್ರಮ ಕೈಕೊಳ್ಳಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಗಳ ಹೂಳೆತ್ತುವ ಕಾರ್ಯದ ಅಧಿಕಾರವನ್ನು ಆಯಾ ಗ್ರಾಪಂಗಳಿಗೆ ನೀಡಿ ಕೆರೆಗಳ ಮಣ್ಣನ್ನು ರೈತರೇ ಒಯ್ಯಲಿ ಎಂದು ಪಿಡಿಒಗಳಿಗೆ ತಿಳಿಸಲಾಗಿದೆ. ಹೂಳೆತ್ತುವುದರಿಂದ ಕೆರೆಗಳ ಆಳ ಹೆಚ್ಚಾಗಿ ಕೆರೆ ತುಂಬಿಸುವಾಗ ಹೆಚ್ಚಿನ ನೀರು ಸಂಗ್ರಹವಾಗಲಿದೆ ಎಂದು ತಹಶೀಲದಾರ ಡಿ.ಎಚ್.ಕೋಮಾರ ತಿಳಿಸಿದ್ದಾರೆ.
ಕೃಷ್ಣಾ ನದಿಯಿಂದ ರೈತರು ಸಾವಿರಾರು ಎಕರೆ ಭೂಮಿಯಲ್ಲಿ ಕಬ್ಬು, ಅರಿಷಿಣ, ಇನ್ನುಳಿದ ಅನೇಕ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಈಗ ನದಿ ನೀರು ಬತ್ತಿರುವುದರಿಂದಲೂ ಹಾಗೂ ಬಿಸಿಲಿನಿಂದ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಕಳೆದ ವರ್ಷ ಮಳೆಯ ಪ್ರಮಾಣ ಹೆಚ್ಚಿಗೆ ಆಗಿರುವುದರಿಂದ ಮಹಾರಾಷ್ಟ್ರದ ಜಲಾಶಯಗಳು ತುಂಬಿದ್ದವು. ಈಗ ಕೃಷ್ಣಾ ನದಿಗೆ ನೀರು ಬಿಡಿಸಲು ಜನ ಪ್ರತಿನಿಗಳು ಆಸಕ್ತಿ ತೋರಬೇಕಾಗಿದೆ. ಪ್ರತಿ ವರ್ಷ ಕೊಯ್ನಾ ಜಲಾಶಯದಿಂದ ನೀರು ಬಿಡಿಸಲಾಗುತ್ತಿತ್ತು. ಆದರೆ ಈ ವರ್ಷ ಸಾಕಷ್ಟು ನೀರಿನ ತೊಂದರೆ ಇದ್ದರೂ ಏಕೆ ಬಿಡಿಸುತ್ತಿಲ್ಲವೆನ್ನುವುದು ರೈತರ ಪ್ರಶ್ನೆಯಾಗಿದೆ.
ಈಗ ಮಹಾರಾಷ್ಟ್ರದಿಂದ ನೀರು ಬಿಟ್ಟರೂ ರಾಯಬಾಗ ತಾಲೂಕಿಗೆ ನೀರು ಬಂದು ತಲುಪುವದೇ ಸಂಶಯಕರ. ನದಿ ಸಂಪೂರ್ಣ ಒಣಗಿರುವುದರಿಂದ ರೈತರು ನದಿಯಲ್ಲಿಯೇ ದೊಡ್ಡ ಹೊಂಡಗಳನ್ನು ತೋಡಿದ್ದಾರೆ. ಅವುಗಳು ತುಂಬಿ ನೀರು ಮುಂದಕ್ಕೆ ಸಾಗುವುದು ಸಾಧ್ಯವೇ ಇಲ್ಲವೆಂಬುದು ರಾಯಬಾಗ ತಾಲೂಕಿನ ಕೊನೆಯ ನದೀ ತೀರದ ರೈತರ ಅನಿಸಿಕೆ.
ರಾಯಬಾಗ ತಾಲೂಕಿನಲ್ಲಿ ಕೃಷ್ಣಾ ನದಿ ಬತ್ತಿರುವುದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇದಕ್ಕೆ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವುದೇ ಪರಿಹಾರ. ಆದ್ದರಿಂದ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಸಧ್ಯದಲ್ಲಿಯೇ ಶಾಸಕರ ನಿಯೋಗ ಹೊರಡಲಿದೆ.•ಡಿ.ಎಂ. ಐಹೊಳೆ ಶಾಸಕರು ರಾಯಬಾಗ ಮತಕ್ಷೇತ್ರ