Advertisement

ನೀರು ಅಮೂಲ್ಯವಾದ ಜೀವ ಜಲ

07:37 AM Mar 23, 2019 | |

ತುಮಕೂರು: ನೀರು ಅಮೂಲ್ಯವಾದ ಜೀವ ಜಲ. ನೀರನ್ನು ಮಿತವಾಗಿ ಬಳಸುವುದರ ಮೂಲಕ ಸಂರಕ್ಷಣೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್‌ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್‌ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಿಶ್ವ ನೀರಿನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನೀರು ದೇವರು ಕೊಟ್ಟ ಕಾಣಿಕೆ: ನೀರನ್ನು ಮಿತವಾಗಿ ಬಳಸದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿಯೇ ಯುದ್ಧ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ. ನಾವೆಲ್ಲರೂ ಸಂಶೋಧನೆಗಳಿಂದ ಎಷ್ಟೇ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮುಂದುವರಿದರೂ, ನಮ್ಮಿಂದ ನೀರನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ನೀರು ದೇವರು ಕೊಟ್ಟ ಕಾಣಿಕೆ. ಅದನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕೆಂದರೆ ನೀರನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.

ನೀರಿಲ್ಲದೇ ಬದುಕಲು ಕಷ್ಟ: ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್‌ ಮಾತನಾಡಿ, ನೀರು ವಿಶಿಷ್ಟವಾದ ಜೀವಜಲ. ನಾವು ಊಟವಿಲ್ಲದೇ ಬದುಕಬಹುದು. ಆದರೆ, ನೀರಿಲ್ಲದೇ ಯಾವ ಜೀವ ಸಂಕುಲವೂ ಬದುಕಲಾರವು. ಜನಸಂಖ್ಯೆ ಹೆಚ್ಚಾದಂತೆಲ್ಲಾ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಈಗಾಗಲೇ ಕುಡಿಯುವ ನೀರನ್ನು ಹಣಕೊಟ್ಟು ಬಳಸುತ್ತಿದ್ದೇವೆ. ಭವಿಷ್ಯದಲ್ಲಿ ನೀರಿನ ಅಭಾವ ಉಂಟಾಗದಂತೆ ನೀರಿನ ಮೂಲಗಳನ್ನು ಸಂರಕ್ಷಿಸಬೇಕು ಎಂದರು.

ಸಾಲು ಮರದ ತಿಮ್ಮಕ್ಕ ಮಾದರಿ: ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗದಂತೆ ತಡೆಯಲು ಹೆಚ್ಚು ಹೆಚ್ಚು ಗಿಡ ಬೆಳೆಸಬೇಕು. ಯಾವುದೇ ನಿರೀಕ್ಷೆಯಿಲ್ಲದೇ ಸಾವಿರಾರು ಮರಗಳನ್ನು ಬೆಳೆಸುವುದರ ಮೂಲಕ ಗುಬ್ಬಿ ತಾಲೂಕಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ನಿಸರ್ಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ನೀರು ಧಾರಾಳವಾಗಿ ದೊರೆಯುತ್ತಿದ್ದರೂ, ನಾವು ನೀರನ್ನು ಹೆಚ್ಚು ವ್ಯಯ ಮಾಡುತ್ತಿದ್ದೇವೆ. ಇನ್ನಾದರೂ ನೀರಿನ ಮೌಲ್ಯವನ್ನು ಅರಿತು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಲ ನಮ್ಮ ಜೀವನ ಮೂಲ, ಜಲ ಅಮೂಲ್ಯ. ನಾವು ಜಲಸಾಕ್ಷರತೆಯನ್ನು ಪ್ರತಿ ಕುಟುಂಬಕ್ಕೂ ತಲುಪಿಸುತ್ತೇವೆ.

Advertisement

ನೀರನ್ನು ಸಂರಕ್ಷಿಸಿ ಪ್ರಸ್ತುತವಿರುವ ಜಲಮೂಲಗಳನ್ನು ಪುನಶ್ಚೇತನಗೊಳಿಸಿ ಹೊಸ ಜಲಮೂಲಗಳನ್ನು ನಿರ್ಮಿಸುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಇದಕ್ಕೂ ಮುನ್ನ ಜಿಪಂ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಪಂ ಉಪಕಾರ್ಯದರ್ಶಿಗಳಾದ ಡಿ.ಕೃಷ್ಣಪ್ಪ ಹಾಗೂ ಡಾ.ಎಸ್‌.ಪ್ರೇಮ್‌ಕುಮಾರ್‌, ಮುಖ್ಯ ಯೋಜನಾಧಿಕಾರಿ ಬಾಲರಾಜು,

-ಯೋಜನಾ ನಿರ್ದೇಶಕ ಮಾಂಕಾಳಪ್ಪ, ಮುಖ್ಯ ಲೆಕ್ಕಾಧಿಕಾರಿ ಕನಕರಾಜು, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕ ಎಸ್‌.ನಟರಾಜ್‌ ಐ.ಇ.ಸಿ ಸಂಯೋಜಕ ಉಮೇಶ್‌ ಹುಲಿಕುಂಟೆ ಸೇರಿದಂತೆ ಅಧಿಕಾರಿ, ಸಿಬ್ಬಂದಿವರ್ಗದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next