ಕೆ.ಆರ್.ಪುರ: ಕೆಆರ್‌ಪುರ ಕ್ಷೇತ್ರದ ಬಸವನಪುರ ವಾರ್ಡ್‌ನ ಗಾಯಿತ್ರಿ ಬಡವಾಣೆಯ ಮೂಲಕ ಎಲೆಮಲ್ಲಪ್ಪ ಶೆಟ್ಟಿ ಕೆರೆಗೆ ಹಾದುಹೋಗಿರುವ ರಾಜಕಾಲುವೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿ, ಗಿಡಗೆಂಟೆಗಳು ಬೆಳೆದು ನಿಂತಿದ್ದು ಮಳೆ ನೀರು ಹರಿದು ಹೋಗಲಾಗದ ಸ್ಥಿತಿ ಎದುರಾಗಿದೆ.
ರಾಜಕಾಲುವೆ ದುಸ್ಥಿತಿಯಿಂದಾಗಿ ಮಳೆ ಬಂದರರೆ ಗಾಯಿತ್ರಿ ಬಡವಾಣೆಯ ಮನೆಗಳು ಜಲವೃತವಾಗುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಗ್ಗೆ ಮಾಹಿತಿ ಇದ್ದರೂ ಪಾಲಿಕೆಯ ಬೃಹತ್ ನೀರುಗಾಲುವೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಮೂರ್ತಿನಗರ, ಐಟಿಐ, ಕೆಆರ್‌ಪುರ, ಕೌದೇನಹಳ್ಳಿ, ಅಕ್ಷಯನಗರ,ಸೇರಿದಂತೆ ಮುಂತಾದ ಕಡೆಗಳ ನೀರು ಇದೇ ಕಾಲುವೆಯಲ್ಲಿ ಹರಿಯಬೇಕು. ಆದರೆ, 7-8 ವರ್ಷಗಳಿಂದ ಹೂಳು ತೆಗೆಯದ ಪರಿಣಾಮ ಗಿಡಗೆಂಟೆಗಳು ಬೆಳೆದುಕೊಂಡಿವೆ. ಇದರ ಜತೆಗೇ ರಾತ್ರೋರಾತ್ರಿ ಕಾಲುವೆಗೆ ಮಾಂಸದಂಗಡಿಗಳ ತ್ಯಾಜ್ಯವನ್ನೂ ಸುರಿಯಲಾಗುತ್ತಿದೆ. ಈ ತ್ಯಾಜ್ಯ ಕೊಳೆತು ನೈರ್ಮಲ್ಯದ ಸಮಸ್ಯೆಯನ್ನೂ ತಂದೊಡ್ಡಿವೆ ಎನ್ನುತ್ತಾರೆ ಗಾಯಿತ್ರಿ ಬಡಾವಣೆ ನಿವಾಸಿಗಳು.
ಕಳೆದ ವಾರ ಸುರಿದ ಭಾರಿ ಮಳೆಗೆ ಇದೇ ಬಡಾವಣೆಯ 32 ಮನೆಗಳ ಸಂಪ್‌ಗ್ಳಲ್ಲಿ ಕೊಳಚೆ ನೀರು ತುಂಬಿತ್ತು. ಕಾರಣ, ರಾಜಕಾಲುವೆಯಲ್ಲಿ ಹರಿದು ಹೋಗದ ನೀರು ಮನೆಗಳ ಕಡೆ ನುಗ್ಗಿ ಸಂಪ್ ಸೇರಿತ್ತು. ಇದು ಪ್ರತಿ ಮಳೆಗಾಲದ ಕತೆ ಎಂಬಂತಾಗಿಬಿಟ್ಟಿದೆ.
ಈ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರನ್ನು ಸಂಪರ್ಕಿಸಿದರೆ ರಾಜಕೀಯ ಕಾರಣಗಳನ್ನು, ವೋಟ್ ಬ್ಯಾಂಕ್ ವಿಚಾರವನ್ನು ಮುಂದಿಟ್ಟು ತಾರತಮ್ಯ ಮಾಡುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ. ಇನ್ನು ಕಾಲುವೆಯ ಮೇಲೆ ನಿರ್ಮಿಸಲಾಗಿರುವ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿದೆ. ಇತ್ತೀಚೆಗಷ್ಟೇ ಇತ್ತೀಚಿಗೆ ಸೈಕಲ್ ಸವಾರನೊಬ್ಬ ಸೇತುವೆ ಮೇಲಿಂದ ಆಯತಪ್ಪಿಬಿದ್ದು, ಸ್ಥಳೀಯರಿಂದ ರಕ್ಷಿಸಲ್ಪಟ್ಟಿದ್ದಾನೆ.