ವಾಡಿ: ಬಿರುಬಿಸಿಲು ಹೆಚ್ಚುತ್ತಿದ್ದಂತೆ ಕುಡಿಯುವ ನೀರಿನ ಬೇಡಿಕೆ ಹೆಚ್ಚಿದ್ದು, ಶುದ್ಧ ನೀರು ಸುಗ್ಗಿ ರೂಪದಲ್ಲಿ ಮಾರಾಟವಾಗುತ್ತಿದೆ. ಸಿಮೆಂಟ್ ನಗರಿ ವಾಡಿ ಪಟ್ಟಣದಲ್ಲಿ ವಾಸಿಸುವ 50 ಸಾವಿರ ಜನರು 6 ಕಿ.ಮೀ. ಅಂತರದ ಕಂದನೂರಿನ ಭೀಮಾ ನದಿಯ ನೀರನ್ನೇ ಅವಲಂಬಿಸಿದ್ದಾರೆ.
ನದಿ ನೀರನ್ನು ಶುದ್ಧೀಕರಿಸಿ ಪೂರೈಸಲು ಕೋಟ್ಯಂತರ ರೂ. ಅನುದಾನ ಸುರಿದು ಕುಂದನೂರಿನಲ್ಲೇ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಘಟಕ ಕಾರ್ಯಾರಂಭಗೊಂಡು ಸುಮಾರು ಹತ್ತು ವರ್ಷಗಳೇ ಗತಿಸಿವೆ. ಇಂದಿಗೂ ಘಟಕದ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷಾಂತರ ರೂ. ಖರ್ಚು ಭರಿಸಲಾಗುತ್ತಿದೆ.
ಆದರೂ ಸ್ಥಳೀಯರಿಗೆ ಶುದ್ಧ ನೀರು ಎಂಬುದು ಗಗನಕುಸುಮ ಆಗಿದೆ. ಪುರಸಭೆ ಪೂರೈಸುವ ಗಲ್ಲಿಗಳ ನಳಗಳಲ್ಲಿ ಗಲೀಜು ನೀರು ಸರಬರಾಜು ಆಗುತ್ತಿದ್ದು, ಕುಡಿಯಲು ಜನರು ಹಿಂಜರಿಯುತ್ತಿದ್ದಾರೆ. ಬೇಸಿಗೆ ಎದುರಿಸಲು ನದಿಗಳಲ್ಲಿ ಹರಿಯುವ ನೀರಿಗೆ ತಡೆಯೊಡ್ಡಲಾಗಿದ್ದು, ನಿಂತ ನೀರು ಹಳಸಿ ಹುಳುಹುಪ್ಪಡಿಗಳು ಹುಟ್ಟಿಕೊಂಡಿವೆ.
ಪಾಚಿಗಟ್ಟಿದ ನೀರನ್ನು ಶುದ್ಧೀಕರಿಸಿ ಪೂರೈಸಲಾಗುತ್ತಿದೆ ಎಂದು ಪುರಸಭೆ ಅಧಿಧಿಕಾರಿಗಳು ಹೇಳುತ್ತಿದ್ದರೂ ಊರಿನ ಜನರು ಮಾತ್ರ ಶುದ್ಧ ನೀರನ್ನು ಖರೀದಿಸಿಯೇ ಕುಡಿಯುತ್ತಿದ್ದಾರೆ. ನಳದ ನೀರು ಗೃಹ ಬಳಕೆಗೆ ಮಾತ್ರ ಉಪಯೊಗವಾಗುತ್ತಿದೆ.
ಪಟ್ಟಣದ ವಾರ್ಡ್ 4ರ ರೆಸ್ಟ್‌ಕ್ಯಾಂಪ್ ತಾಂಡಾ ಬಡಾವಣೆಯಲ್ಲಿ ಜಲಮಂಡಳಿ ವತಿಯಿಂದ ಶುದ್ಧ ನೀರಿನ ಕಿರು ಘಟಕ ಸ್ಥಾಪಿಸಲಾಗಿದೆ. ಖಾಸಗಿ ಸಂಸ್ಥೆಯೊಂದು ಅದರ ನಿರ್ವಹಣೆ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಶುದ್ಧ ನೀರಿನ ಮಾರಾಟ ದಂಧೆಯಲ್ಲಿ ತೊಡಗಿದೆ.
20 ಲೀಟರ್ ನೀರಿಗೆ ಐದು ರೂ. ನಿಗದಿಪಡಿಸಲಾಗಿದ್ದು, ಜನರು ಮುಗಿಬಿದ್ದು ಶುದ್ಧ ನೀರು ಪಡೆಯುತ್ತಿದ್ದಾರೆ. ಒಟ್ಟು 750 ಸದಸ್ಯರನ್ನು ಹೊಂದಿರುವ ಈ ಘಟಕದಿಂದ ಪ್ರತಿನಿತ್ಯ 10 ಸಾವಿರ ಲೀಟರ್ ನೀರು ಖರ್ಚಾಗುತ್ತಿದೆ. ವಿವಿಧ ಬಡಾವಣೆ ನಿವಾಸಿಗಳು ಬೈಕ್ ಮೇಲೆ ಬಂದು ನೀರು ಖರೀದಿಸುತ್ತಾರೆ.
ಕಿರು ಘಟಕದ ಮುಂದೆ ಕ್ಯಾನ್ ಗಳ ಸಾಲು ನೋಡಿದರೆ ಶುದ್ಧ ನೀರಿನ ಬೇಡಿಕೆ ಎಷ್ಟು ಎಂಬುದು ಅರ್ಥವಾಗುತ್ತದೆ. ಪಟ್ಟಣದಲ್ಲಿ ಕೋಟ್ಯಂತರ ರೂ. ಮೌಲ್ಯದ ಶುದ್ಧ ನೀರಿನ ಘಟಕವಿದ್ದರೂ ವ್ಯರ್ಥ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.