Advertisement

ಮಳೆ ಕೊಯ್ಲು ಅಳವಡಿಸಿ ಪಾದೆಕಲ್ಲಿನ ಬಾವಿಯಲ್ಲೂ ನೀರು

10:19 PM Aug 01, 2019 | Team Udayavani |

ಉಡುಪಿ: ಉದಯವಾಣಿಯ ಜಲಸಾಕ್ಷರತೆಯ ಅಭಿಯಾನದಿಂದ ಎಲ್ಲೆಡೆ ಜಾಗೃತಿ ಮೂಡಿ ಮಳೆ ಕೊಯ್ಲು ಅಳವಡಿಸಿಕೊಳ್ಳುತ್ತಿದ್ದಾರೆ. ಮೂರು ವರ್ಷಗಳ ಹಿಂದೆಯೇ ಗ್ರಾ.ಪಂ. ಸದಸ್ಯರೋರ್ವರು ತಮ್ಮ ಮನೆಗೆ ಜಲಕೊಯ್ಲು ವ್ಯವಸ್ಥೆ ಮಾಡಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅಲೆವೂರು ಸಮೀಪದ ರಾಂ ಪುರದ ನಿವಾಸಿ, ಅಲೆವೂರು ಗ್ರಾ.ಪಂ. ಸದಸ್ಯ ಶೇಖರ್‌ ಆಚಾರ್ಯ ಅವರು ಅಂದು ಅಳವಡಿಸಿಕೊಂಡ ಜಲಕೊಯ್ಲು ಕಳೆದ ಬೇಸಗೆಯಲ್ಲಿ ಫ‌ಲ ನೀಡಿದೆ.

Advertisement

ಕಲ್ಲಿನಲ್ಲೂ ನೀರು
ಇವರ ಮನೆ ಮತ್ತು ಮನೆಯ ಬಾವಿ ಇರುವ ಪ್ರದೇಶ ಪಾದೆಕಲ್ಲಿನಿಂದ ಕೂಡಿದೆ. ಬಾವಿಯನ್ನು ಹೆಚ್ಚು ಆಳ ಮಾಡುವಂತೆಯೂ ಇಲ್ಲ. ಬೇಸಗೆ ಬಂದ ಕೂಡಲೇ ಬಾವಿ ಬತ್ತಿ ಹೋಗುವುದರಿಂದ ಕಳೆದ ಕೆಲವು ವರ್ಷಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯ ಬಾವಿಗೇ ಮಳೆ ನೀರು ಹರಿಸಿದರೆ ಹೇಗೆ ಎಂದು ಯೋಚಿಸಿದ ಶೇಖರ್‌ ಅವರು ಯೋಜನೆಯನ್ನು ಕಾರ್ಯಗತಗೊಳಿಸಿದರು. ಈ ಹಿಂದೆಲ್ಲಾ ಡಿಸೆಂಬರ್‌ಗೆ ಬತ್ತಿ ಹೋಗುತ್ತಿದ್ದ ಬಾವಿ ಈಗ ಮಾರ್ಚ್‌ವರೆಗೂ ನೀರು ಒದಗಿಸುತ್ತಿದೆ. ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚು ದಿನಗಳ ಕಾಲ ನೀರುಣಿಸಬಹುದು ಎಂಬ ವಿಶ್ವಾಸ ಶೇಖರ್‌ ಅವರದ್ದು. ಅವರು ಆಗ 6 ಅಡಿ ಉದ್ದದ ಪೈಪ್‌ ಅಳವಡಿಸಿದ್ದರು. ಅಂದು 3,000 ರೂ. ವೆಚ್ಚವಾಗಿದೆ.

ಸ್ವಚ್ಛನೀರು ನೇರ ಬಾವಿಗೆ
ಮನೆಯ ಛಾವಣಿಗೆ ಅಳವಡಿಸಿದ 6 ಇಂಚು ವ್ಯಾಸದ ಪೈಪ್‌ನ ಮೂಲಕ ಬರುವ ನೀರು ಅಲ್ಲಿಯೇ ಅಳವಡಿಸಲಾದ ಶುದ್ಧೀಕರಣ ಘಟಕದ ಮೂಲಕ ಹಾದು ಬಾವಿ ಸೇರುತ್ತದೆ. ಶುದ್ಧೀಕರಣ ಘಟಕವನ್ನು ಜಲ್ಲಿ ಮತ್ತು ಮರಳಿನಿಂದ ಮಾಡಲಾಗಿದೆ. ಅದರ ನಡುವೆ 4 ಕಡೆ ಜಾಲಿಗಳನ್ನು ಅಳವಡಿಸಿ ಶುದ್ಧತೆಯನ್ನು ಖಾತರಿಗೊಳಿಸಲಾಗಿದೆ. 40ಎಂಎಂ ಹಾಗೂ 20 ಎಂಎಂ ಗಾತ್ರ ಜಲ್ಲಿಕಲ್ಲುಗಳನ್ನು ಬಳಸಿದ್ದಾರೆ. ಪೈಪ್‌ಲೈನ್‌ ಹೊರತು ಪಡಿಸಿ ಇಂತಹ ಘಟಕಕ್ಕೆ 4ರಿಂದ 5 ಸಾವಿರ ರೂ. ವೆಚ್ಚವಾಗುತ್ತದೆ.

ಬಾವಿಯಲ್ಲಿ ಪಾದೆಕಲ್ಲು ಇರುವುದರಿಂದ ಬಾವಿಗೆ ನೇರವಾಗಿ ಬಿಡುತ್ತಿದ್ದೇವೆ. ಇಲ್ಲವಾದರೆ ಆ ಪೈಪ್‌ನ್ನೇ ಬಾವಿಯ ತಳಕ್ಕೂ ಬಿಡಬಹುದು. ಪಾದೆಕಲ್ಲು ಇರುವುದರಿಂದ ನೇರವಾಗಿ ಬಿಟ್ಟರೂ ಬಾವಿಗೆ ಹಾನಿಯಾಗದು. ನಾನು ಸ್ವಲ್ಪ ಕಡಿಮೆ ವ್ಯಾಸದ ಪೈಪ್‌ ಬಳಸಿದ್ದೇನೆ. ಈಗ ಹೆಚ್ಚಾಗಿ 8 ಅಥವಾ 10 ಇಂಚು ವ್ಯಾಸದ ಪೈಪ್‌ಗ್ಳನ್ನು ಬಳಸಲಾಗುತ್ತದೆ. ಶುದ್ಧೀಕರಣಕ್ಕೆ ಹಂತ ಹಂತವಾಗಿ ಜಾಲಿ, ದೊಡ್ಡ ಜಲ್ಲಿ(40 ಎಂಎಂ), ಜಾಲಿ, ಜಲ್ಲಿ (20 ಎಂಎಂ), ಜಾಲಿ, ಮರಳು, ಜಾಲಿ ಹಾಕಲಾಗುತ್ತದೆ. ಪ್ರತಿ ವರ್ಷ ಜಾಲಿಯನ್ನು
ಬದಲಿಸಿದರೆ ಉತ್ತಮ. ಮಾಡಲೇಬೇಕೆಂದೇನಿಲ್ಲ .

ಬೇಸಗೆಯಲ್ಲಿ ನೀರು ಬಂದಿದೆ
2016ರಲ್ಲಿ ಅಳವಡಿಸಿದ್ದೆ. ನಮ್ಮದು ಪಾದೆಕಲ್ಲು ಪ್ರದೇಶ. ಹಾಗಾಗಿ ಜಾಸ್ತಿ ನಿರೀಕ್ಷೆ ಮಾಡುವ ಹಾಗಿಲ್ಲ. ಆದರೂ ನಮಗೆ ಫ‌ಲ ನೀಡಿದೆ. ನಮ್ಮ ಮನೆ ಬಾವಿಯ ನೀರು ಡಿಸೆಂಬರ್‌ನಲ್ಲಿ ಖಾಲಿಯಾಗುತ್ತಿತ್ತು. ಮಳೆ ಕೊಯ್ಲಿನ ಪರಿಣಾಮದಿಂದ ಈ ವರ್ಷದ ಬೇಸಗೆಯಲ್ಲಿ ಮಾರ್ಚ್‌ವರೆಗೆ ನೀರು ಬಂದಿದೆ.
-ಶೇಖರ್‌ ಆಚಾರ್ಯ,
ರಾಂಪುರ,

Advertisement

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529

Advertisement

Udayavani is now on Telegram. Click here to join our channel and stay updated with the latest news.

Next