ಜಗಳೂರು: ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ದಿನನಿತ್ಯದ ಕೆಲಸ ಕಾರ್ಯಗಳನ್ನ ಬದಿಗೊತ್ತಿ ನೀರು ಹಿಡಿಯಲು ಸರತಿಯ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ತಾಲೂಕಿನ ಹನುಮಂತಾಪುರ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಕೊಳವೆ ಬಾವಿಯಿಂದ ಹನಿ ಹನಿ ಜಿನುಗುತ್ತಿರುವ ಕುಡಿಯುವ ನೀರು ಪಡೆಯಲು ಗ್ರಾಮದಲ್ಲಿ ರೂಪಿಸಲಾಗಿರುವ ಸರತಿ ಸಾಲಿನ ಲೆಕ್ಕಾಚಾರ ವ್ಯವಸ್ಥೆಯಲ್ಲಿ ನೀರು ಪಡೆಯಲು ಸಾರ್ವಜನಿಕರು ತಮ್ಮ ದಿನನಿತ್ಯ ಕೆಲಸ ಕಾರ್ಯಗಳನ್ನು ಬದಿಗೊತ್ತಿ ರಾಸಿ ರಾಸಿ ಬಿಂದಿಗೆಗಳನ್ನಿಟ್ಟು ಕೊಂಡು ನೀರಿಗಾಗಿ ಕಾಯುತ್ತಿರುವುದು ಸಾಮಾನ್ಯವಾಗಿದೆ. ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಮತ್ತು ಖಾಸಗಿ ಹೈಸ್ಕೂಲ್ ಬಳಿ ಇರುವ ಎರಡು ಕೊಳವೆ ಬಾವಿ ಬಳಿ ನೂರಾರು ಬಿಂದಿಗೆಗಳು ಸರದಿಯ ಸಾಲಿನಲ್ಲಿಟ್ಟಿರುವ ದೃಶ್ಯ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಹಾಹಾಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಸುಮಾರು 250 ಕುಟುಂಬ ಹೊಂದಿರುವ ಈ ಗ್ರಾಮದಲ್ಲಿ ಟ್ಯಾಂಕರ್ ಸೌಲಭ್ಯ ಇಲ್ಲವಾಗಿದ್ದು, ಚಾಲ್ತಿಯಲ್ಲಿರುವ ಎರಡು ಕೊಳವೆ ಬಾವಿಗಳಿಂದ ಸಿಗುವ ಅಲ್ಪ ಪ್ರಮಾಣದ ನೀರು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಸರತಿಯ ಸಾಲಿನಲ್ಲಿ ಬಿಂದಿಗೆಗಳನ್ನಿಟ್ಟು ರಾತ್ರಿಯೆಲ್ಲಾ ನಿದ್ರೆಗೆಟ್ಟು ಕಾಯಬೇಕು. ವಿದ್ಯುತ್ ಕೈಕೊಟ್ಟರೆ ನೀರಿನ ಮಾತೇ ಇಲ್ಲವಾಗಿದೆ. ಜವಾಬ್ದಾರಿಯುತ ಗ್ರಾಪಂ ಆಡಳಿತ ಮಂಡಳಿಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗೊತ್ತಿದೆಯಾದರೂ ಸಮಸ್ಯೆ ಬಗೆಹರಿಸುವಲ್ಲಿ ಪ್ರಯುತ್ನಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗ್ರಾಮದಲ್ಲಿರುವ ಎರಡು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಅಡುಗೆ ತಯಾರಿಸಲು ನೀರಿಗೆ ಕೊರೆತೆಯುಂಟಾಗಿದ್ದು, ಅಡುಗೆ ಸಿಬ್ಬಂದಿಗಳು ಶಾಲಾ ದಿನಗಳಲ್ಲಿ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಗಳು ಇತ್ತ ಕಡೆ ಗಮನಹರಿಸಿ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು
ಬಗೆಹರಿಸುವಂತೆ ಗ್ರಾಮಸ್ಥರಾದ ಬಸವರಾಜಪ್ಪ, ಸತೀಶ್, ವಿಜಯಕುಮಾರ್ ಸೇರಿದಂತೆ ಮತ್ತಿತರರು ಒತ್ತಾಯಿಸಿದ್ದಾರೆ.
ಟ್ಯಾಂಕರ್ ವ್ಯವಸ್ಥೆ ಮಾಡುವುದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಹೊಸ ಬೋರ್‌ವೆಲ್ ಕೊರೆಯಿಸುವ ಗ್ರಾಪಂನಿಂದ ಪ್ರಸ್ತಾವನೆ ಬಂದರೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ತುರ್ತು ಕುಡಿಯುವ ನೀರಿನ ಯೋಜನೆಯಡಿ 1 ಕೋಟಿ ರೂ.ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಯಲ್ಲಿ ಹನುಮಂತಪುರ ಗ್ರಾಮವು ಸೇರಿದೆ.
ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.