Advertisement

ನೊರೆ ಹಾಲಿನ ಹೊಳೆಯಲ್ಲಿ ಜಲಲ ಜಲಧಾರೆ

09:08 AM Jul 23, 2019 | sudhir |

ಸುಳ್ಯ : ಕಾಡು ನಡುವಿನ ತೊರೆ ಸೃಷ್ಟಿಸುವ ಅಪೂರ್ವ ದೃಶ್ಯ ಕಾವ್ಯ ಕಣ್ತುಂಬಿಸಿಕೊಳ್ಳಬೇಕು ಎಂದಾ ದರೆ ಮಳೆಗಾಲಕ್ಕೆ ಕಾಯಬೇಕು. ಹಸಿರು ರಾಶಿಯ ನಡುವೆ ನೊರೆ ಹಾಲಿನ ಹೊಳೆ ಧುಮ್ಮಿಕ್ಕುತ್ತಿದ್ದರೆ ಅದು ಅನಿರ್ವಚನೀಯ ಆನಂದ ನೀಡುವುದು.

Advertisement

ಈ ಬಾರಿ ನಿರೀಕ್ಷಿತ ಮಳೆಯಾಗದೆ ಸೊರಗಿದ್ದ ತಾಲೂಕಿನ ವಿವಿಧ ಜಲಪಾತಗಳಲ್ಲಿ ಎರಡು ದಿನಗಳಿಂದ ನಿಧಾನವಾಗಿ ನೀರಿನ ಹರಿವು ಆರಂಭಗೊಂಡಿದೆ. ಬಿರುಸು ಮಳೆ ಪರಿಣಾಮ ಜಲಪಾತದ ಒಡಲಿನಲ್ಲಿ ಜಲಲ ಜಲಧಾರೆ ನರ್ತಿಸಲು ಆರಂಭಿಸಿದೆ. ಮಳೆ ಪ್ರಮಾಣ ಇನ್ನಷ್ಟು ಹೆಚ್ಚಳ ಗೊಂಡರೆ ನೋಡುಗರ ಮನ ಸೆಳೆಯಬಹುದು.

ಮಳೆಗಾಲದ ಪ್ರೇಕ್ಷಣೀಯ ಸ್ಥಳವಾಗಿ ಮನಸ್ಸಿಗೆ ಆಹ್ಲಾದ ಮೂಡಿಸುವ ಹತ್ತಾರು ಜಲಪಾತಗಳು ತಾಲೂಕಿನಲ್ಲಿಯೂ ಇವೆ. ಜುಳು ಜುಳು ನಿನಾದ ದೊಂದಿಗೆ ನೊರೆ ಹಾಲಿನ ಹೊಳೆ ರೂಪ ಪಡೆದು ಜನಾಕರ್ಷಣೆಯ ಕೇಂದ್ರವಾಗಿ ಗಮನ ಸೆಳೆಯುವುದು ಇಲ್ಲಿನ ವಿಶೇಷ. ಈ ಕಿರುಜಲಪಾತ ವೀಕ್ಷಣೆಗೆಂದು ರಜಾ ದಿನಕ್ಕೆ ಕಾಯುವ ಪ್ರೇಕ್ಷಕ ವರ್ಗವೇ ಇದೆ.

ಸುಳ್ಯ, ಕೊಡಗು ಮಲೆನಾಡಿನ ಅಂಚಿನಲ್ಲಿರುವ ಹಲವಾರು ಜಲಪಾತಗಳಿವೆ. ಮುಖ್ಯವಾಗಿ ಸುಳ್ಯ ನಗರದಿಂದ 6 ಕಿ.ಮೀ. ದೂರದಲ್ಲಿನ ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಸೋಣಂಗೇರಿ ಜಂಕ್ಷನ್‌ನಿಂದ ಕೆಲ ಮೀಟರ್‌ ಅಂತರದಲ್ಲಿ ರಸ್ತೆ ಸನಿಹವೇ ಸೋಣಂಗೇರಿ ಫಾಲ್ಸ್ ಇದೆ. ಕಾಡಿನಿಂದ ಹರಿದು ಬರುವ ನೀರು ಇಲ್ಲಿ ಜಲಪಾತದ ರೂಪ ಪಡೆದು ಮುಂದು ಸಾಗುತ್ತದೆ. ರಸ್ತೆ ಬಳಿ ನಿಂತು ಇದನ್ನು ವೀಕ್ಷಿಸಬಹುದು.

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಸಮೀಪದ ದೇವರಗುಂಡಿ ಜಲಪಾತ. ಕೊಡಗಿನ ಪಟ್ಟಿ ಬೆಟ್ಟ ಹತ್ತುವ ದಾರಿಯಲ್ಲಿ 1.5 ಕಿ.ಮೀ. ದೂರದಲ್ಲಿ ಇದೆ. ಅಡಿಕೆ ತೋಟದಲ್ಲಿ 100 ಮೀಟರ್‌ ಸಾಗಿದರೆ ಧುಮ್ಮಿಕ್ಕುವ ತೊರೆ ಕಣ್ಣಿಗೊಂದು ಹಬ್ಬ. ನಿಧಾನವಾಗಿ ಹರಿಯುತ್ತಾ ದೇವಾಲಯದ ಮತ್ಸ್ಯತೀರ್ಥ ನದಿ ಸೇರುತ್ತದೆ. ಅಲ್ಲಿಂದ ಬಳಿಕ ಪಯಸ್ವಿನಿಯೊಂದಿಗೆ ಒಂದಾಗುತ್ತದೆ.

Advertisement

ಅಮರಮುಟ್ನೂರು ಗ್ರಾಮದ ಚಾಮಡ್ಕ ಜಲಪಾತ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ. ಕೆಲ ವರ್ಷಗಳಿಂದ ಇದು ಪ್ರಖ್ಯಾತಿ ಪಡೆದಿದೆ. ಬಂಟಮಲೆಯಲ್ಲಿ ಹುಟ್ಟುವ ತೊರೆ ಎತ್ತರದಿಂದ ಧುಮ್ಮಿಕ್ಕಿ ಜಲಧಾರೆಯಾಗಿ ಸಾಗುತ್ತದೆ. ಸುಳ್ಯದಿಂದ 11 ಕಿ.ಮೀ. ದೂರದಲ್ಲಿದೆ. ಸಿನೆಮಾ, ಕಿರುಚಿತ್ರ, ಆಲ್ಬಂ ಶೂಟಿಂಗ್‌ಗೆ ಇದು ಅತ್ಯಂತ ಪ್ರಸಿದ್ದಿ ಸ್ಥಳ. ಹಾಗಾಗಿ ಚಾಮಡ್ಕ ಕಿರು ಜಲಪಾತ ನೋಡಲೆಂದೂ ಹೊರ ತಾಲೂಕಿನಿಂದಲೂ ಜನರು ಆಗಮಿಸುತ್ತಾರೆ.

ಇವಲ್ಲದೆ ಚಾಮಡ್ಕ, ದೇವರಕೊಲ್ಲಿ, ಲೈನ್ಕಜೆ, ನಿಡ್ಯಮಲೆ, ಕಾಂತಬೈಲು, ಕಲ್ಯಾಳ, ಮೂಕಮಲೆ, ಹೊಸಗದ್ದೆ, ಜಾಕೆ, ಪಳಂಗಾಯ, ಬಿಳಿಮಲೆ, ಕೆಮನಬಳ್ಳಿ ಮೊದಲಾದ ಜಲಪಾತಗಳು ಮಳೆಗಾಲ ದಲ್ಲಿ ಚಾರಣಿಗರ ನೆಚ್ಚಿನ ತಾಣವಾಗಿವೆ.

ಧುಮ್ಮಿಕ್ಕಲು ಮಳೆ ಕೊರತೆ

ಕಾಡಂಚಿನಲ್ಲಿ ಬಿರು ಬೇಸಗೆಯಲ್ಲೂ ಒರತೆ ನೀರು ಇರುತ್ತದೆ. ನೀರ ಸೆಲೆ ಬತ್ತುವುದು ಕಡಿಮೆ. ಕೆಲ ವರ್ಷದಿಂದ ಒರತೆ ನೀರು ಇಳಿಮುಖವಾಗಿದೆ. ಮಳೆ ಬಿದ್ದಿಲ್ಲವೇನೂ ಎಂಬಂತಿದೆ ಅಲ್ಲಿನ ಚಿತ್ರಣ. ಅಂರ್ತಜಲಕ್ಕೆ ಮಳೆ ನೀರು ಇಳಿಯದ ಕಾರಣ ನೀರು ಒರತೆ ರೂಪದಲ್ಲಿ ಜಿನುಗುತ್ತಿಲ್ಲ. ಜತೆಗೆ ಮಳೆಯೂ ಸುರಿಯುತ್ತಿಲ್ಲ. ಜೂನ್‌ ತಿಂಗಳಲ್ಲೇ ಉಕ್ಕೇರುವ ಜಲಪಾತಗಳು ಜುಲೈ ಅಂತ್ಯದಲ್ಲಿ ಹರಿವು ಆರಂಭಿಸಿರುವುದು ಮಳೆ ಕಡಿಮೆ, ನೀರಿನ ಹರಿವಿಲ್ಲದಿರುವುದಕ್ಕೆ ಉದಾಹರಣೆ.
– ಕಿರಣ್ ಪ್ರಸಾದ್ ಕುಂಡಡ್ಕ 
Advertisement

Udayavani is now on Telegram. Click here to join our channel and stay updated with the latest news.

Next