ಪಾಕಶಾಸ್ತ್ರ ಪ್ರವೀಣ ಪುರಾಣದ ನಳ ಮಹಾರಾಜನು ಬೆಂಕಿ ಹಾಗೂ ನೀರು ಇಲ್ಲದೇ ಶುಚಿರುಚಿಯಾದ ಅಡುಗೆಯನ್ನು ಮಾಡುತ್ತಿದ್ದನಂತೆ. ಬಹುಶಃ ಇಂದು ಬಹುತೇಕ ಹೋಟೇಲ್ ಮಾಲೀಕರು ಅದೇ ರೀತಿ ಈರುಳ್ಳಿ ಬಳಸದೇ ಶುಚಿರುಚಿಯಾಗಿ ಅಡುಗೆ ಮಾಡಬಲ್ಲ ಬಾಣಸಿಗರನ್ನು ಹುಡುಕುತ್ತಿರಬಹುದು. ಇದು ಹಾಸ್ಯದ ಮಾತಲ್ಲ. ಈರುಳ್ಳಿ ದರ ಏರಿಕೆಯಿಂದಾಗಿ ಹೋಟೇಲ್ ಉದ್ಯಮಿಗಳು ತತ್ತರಿಸಿ ಹೋಗಿದ್ದಾರೆ. ವಾರಕ್ಕೆ ಒಂದೆರಡು ಕೆಜಿ ಈರುಳ್ಳಿ ಬಳಸುವ ಗೃಹಿಣಿಯರು ಈರುಳ್ಳಿ ದರ ಕೇಳಿ ಸುಸ್ತಾದರೆ, ಇನ್ನು ದಿನಕ್ಕೆ ಕನಿಷ್ಠ ಐವತ್ತರಿಂದ ಅರವತ್ತು ಕೆ.ಜಿ. ಈರುಳ್ಳಿ ಬಳಸುವ ಹೋಟೆಲಿಗರ ಪಾಡೇನಾಗಬೇಕು?
ಕೇವಲ ಎರಡು- ಮೂರು ತಿಂಗಳ ಹಿಂದೆ ಇಪ್ಪತ್ತು ರೂಪಾಯಿ ಆಸುಪಾಸಿನಲ್ಲಿದ್ದ ಈರುಳ್ಳಿ ಇಂದು 120 ರೂ.- 130 ರೂ. ದಾಟಿದೆ. ಮೊದಲ ಬಾರಿಗೆ ಇಷ್ಟೊಂದು ದರ ಏರಿಕೆಯಾಗಿರುವುದು. ಜಾಗದ ಬಾಡಿಗೆ, ಕೆಲಸಗಾರರ ಸಂಬಳ, ವಿದ್ಯುತ್ ದರ, ನೀರಿನ ಶುಲ್ಕ, ಏರಿಕೆಯಾಗುತ್ತಲೇ ಇವೆ. ಬೇಳೆ ಕಾಳುಗಳು, ಗ್ಯಾಸ್, ತರಕಾರಿ ಹಾಗೂ ಇತರ ದಿನಸಿ ಪದಾರ್ಥಗಳ ದರ ಹೆಚ್ಚಾದಂತೆ, ಆ ವಸ್ತುಗಳನ್ನು ಹಿತಮಿತವಾಗಿ ಬಳಸಿ ಹೋಟೆಲ್ ನಡೆಸಿದವನು ಮಾತ್ರ ಯಶಸ್ವಿ ಉದ್ಯಮಿಯಾಗಬಲ್ಲ. ಇಲ್ಲದಿದ್ದರೆ ನಷ್ಟದತ್ತ ಮುಖ ಮಾಡುತ್ತಾನೆ.
ಪ್ರಮಾಣದಲ್ಲಿ ಇಳಿಕೆ: ಆರೇಳು ವರ್ಷಗಳ ಹಿಂದೆ ಅಕ್ಕಿ, ಬೇಳೆ ಕಾಳುಗಳು, ಎಣ್ಣೆ, ಗ್ಯಾಸ್ ದರಗಳೆಲ್ಲ ಏರಿದ್ದಾಗ ಹೋಟೆಲ್‌ನ ತಿಂಡಿ ತಿನಿಸುಗಳ ದರ ಏರಿಸಿದ್ದರು. ಹಾಲಿನ ದರ ಒಂದೇ ಸಮನೇ ಏರುತ್ತಾ ಬಂದಾಗ ಕಾಫಿ, ಟೀ ದರವನ್ನು ಏರಿಸಲಾಗಿತ್ತು. ಹಾಲಿನ ದರ ಮತ್ತೆ ಏರಿದಾಗ ಗ್ರಾಹಕರಿಗೆ ಕೊಡುವ ಕಾಫಿ ಟೀ ಪ್ರಮಾಣವನ್ನು ಇಳಿಸಿ, ದರ ಏರಿಸದೇ ಗ್ರಾಹಕನಿಗೂ ಹೊರೆಯಾಗದಂತೆ ಹೊಂದಿಸಲಾಗಿತ್ತು. ಉದಾಹರಣೆಗೆ, ಹತ್ತು ರೂಪಾಯಿಗೆ 120 ಎಂ.ಎಲ್ ಲೋಟದಲ್ಲಿ ಕಾಫಿ- ಟೀ ಕೊಡುತ್ತಿದ್ದ ಹೋಟೇಲಿಗರು, ನಂತರ ಹಾಲಿನ ದರ ಮತ್ತೆ ಏರಿದಾಗ 120 ರಿಂದ 90- 100 ಎಂ.ಎಲ್ ಲೋಟದಲ್ಲಿ ಕಾಫಿಯನ್ನು ಕೊಡಲಾರಂಭಿಸಿದರು.
ಬದಲಿ ಬಳಕೆ: ಸಾಮಾನ್ಯವಾಗಿ ಅಗತ್ಯ ದಿನಬಳಕೆಯ ಆಹಾರ ಧಾನ್ಯಗಳ, ತರಕಾರಿಗಳ ಬೆಲೆ ಶಾಶ್ವತವಾಗಿ ಏರಿಕೆಯಾಗಿದ್ದು ಕಡಿಮೆ. ಅನೇಕ ಬಾರಿ ಒಂದೆರಡು ತಿಂಗಳು ಏರಿ ನಂತರ ಸಹಜ ಸ್ಥಿತಿಗೆ ಬಂದಿದೆ. ಒಮ್ಮೊಮ್ಮೆ ಟೊಮೆಟೊ ಹಣ್ಣಿನ ದರ ಕೂಡ ನೂರರ ಆಸುಪಾಸು ಸುಳಿದದ್ದಿದೆ. ಆಗ ಅಡುಗೆಗೆ ಹುಣಿಸೇ ಹಣ್ಣನ್ನು ಹೆಚ್ಚು ಉಪಯೋಗಿಸಿ, ಟೊಮೆಟೊ ಬಳಕೆ ಕಡಿಮೆ ಮಾಡಲಾಗುತ್ತಿತ್ತು. ಹುಣಸೇಹಣ್ಣಿನ ದರ ಏರಿದಾಗ ಟೊಮಟೋ ಹಣ್ಣನ್ನು ಹೆಚ್ಚು ಬಳಸಲಾಗುತ್ತಿತ್ತು. ಹುರಿಗಡಲೆ ಬೆಲೆ ಏರಿದಾಗ ತೆಂಗಿನಕಾಯಿಯನ್ನು ಹೆಚ್ಚು ಬಳಸುತ್ತಲೂ, ತೆಂಗಿನಕಾಯಿ ದರ ಏರಿದಾಗ ಹುರಿಗಡಲೆ ಹೆಚ್ಚು ಬಳಸಿ ಚಟ್ನಿ ಮಾಡಲಾಗುತ್ತದೆ.
ಈರುಳ್ಳಿ ದರ ಏರಿರುವ ಈ ಸಂದರ್ಭದಲ್ಲಿ ದೋಸೆ ಪಲ್ಯ, ಆಲೂ ಪಲ್ಯ ಇತರ ಪಲ್ಯದ ಅಡುಗೆಗೆ ಈರುಳ್ಳಿ ಜೊತೆ ಎಲೆಕೋಸು ಸೇರಿಸಿ ಶೇಕಡಾ 10% ರಷ್ಟು ಈರುಳ್ಳಿ ಬಳಕೆ ಕಡಿಮೆ ಮಾಡಬಹುದಾಗಿದೆ. ಆದರೆ ಈರುಳ್ಳಿ ಬದಲಿಗೆ ಎಲೆಕೋಸು ಸೇರಿಸುವುದರಿಂದ ಆ ಅಡುಗೆ ರ ನೈಜ ರುಚಿಯನ್ನು ಕೊಡುವುದಿಲ್ಲ. ಹಾಗಾಗಿ ಈರುಳ್ಳಿ ಹಚ್ಚುವಾಗ ಬರುವ ಕಣ್ಣೀರು ಈರುಳ್ಳಿ ಕೊಂಡುಕೊಳ್ಳುವಾಗ ಬರುವಂತಾಗಿದೆ. ಈ ರೀತಿ ಉತ್ಪನ್ನಗಳ ದರ ಏರಿಕೆಯ ಸಂದರ್ಭದಲ್ಲಿ ಸರ್ಕಾರಗಳು ಅಗತ್ಯ ವಸ್ತುಗಳನ್ನು ಶೀಘ್ರ ಆಮದು ಮಾಡಿಕೊಂಡು ಮಾರುಕಟ್ಟೆ ದರ ವಿಪರೀತ ವಾಗದಂತೆ, ಕಾಳಸಂತೆ ವಹಿವಾಟು ಹೆಚ್ಚದಂತೆ ತಡೆಗಟ್ಟಿ ಜನಸಾಮಾನ್ಯರಿಗೆ, ಉದ್ಯಮಗಳಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕಾಗಿದೆ.
ತುಂಬಾ ಸ್ಪರ್ಧೆ ಎದುರಿಸಬೇಕಾಗುತ್ತೆ: ದಕ್ಷಿಣ ಭಾರತೀಯ ಹಾಗೂ ಉತ್ತರ ಭಾರತೀಯ ಶೈಲಿಯ ಸಸ್ಯಾಹಾರಿ ಅಡುಗೆಗೆ ಈರುಳ್ಳಿ ಬಳಕೆ ಅತ್ಯಗತ್ಯ. ಈರುಳ್ಳಿ ಉತ್ತಪ್ಪ, ಈರುಳ್ಳಿ ಪಕೋಡ, ಈರುಳ್ಳಿ ದೋಸೆ, ಮುಂತಾದ ತಿಂಡಿಗಳನ್ನೇನೋ ಕೆಲ ದಿನಗಳ ಮಟ್ಟಿಗೆ ಮೆನು ಕಾರ್ಡ್‌ನಿಂದ ತೆಗೆದಿಡಬಹುದು. ಆದರೆ ಸಾಂಬಾರ್, ಗ್ರೇವಿ, ಪಲ್ಯ ಹಾಗೂ ಇತರ ಖಾದ್ಯಗಳಿಗೆ ಈರುಳ್ಳಿ ಬಳಸಲೇ ಬೇಕಲ್ಲ. ಹಾಗೆಂದು ದರ ಏರಿಸಿದರೆ ಗ್ರಾಹಕನನ್ನು ಕಳೆದುಕೊಳ್ಳಬಹುದು. ಅಲ್ಲದೆ, ಅಸಂಘಟಿತ ಉದ್ಯಮವಾದ್ದರಿಂದ, ಈ ವ್ಯವಹಾರದಲ್ಲಿ ರಸ್ತೆ ಬದಿಯ ವ್ಯಾಪಾರಿಗಳಿಂದ, ಇತರ ಆನ್‌ಲೈನ್ ಕಿಚನ್‌ಗಳಿಂದ ವ್ಯವಹಾರದ ಪೈಪೋಟಿ ವಿಪರೀತವಿದೆ.
* ಅಜಿತ್ ಶೆಟ್ಟಿ ಕಿರಾಡಿ