Advertisement

ನೇತ್ರಾವತಿಯಲ್ಲಿ ಕ್ಷೀಣಿಸುತ್ತಿದೆ ನೀರು; ಓಡಸಾಲಿನ ಮೂಲಕ ಮೂಲಕ ನೀರು ಹರಿಸಬೇಕಾದ ಸ್ಥಿತಿ?

06:41 PM Apr 28, 2023 | Team Udayavani |

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಒಳಹರಿವು ಸಂಪೂರ್ಣ ನಿಂತು ಹೋಗಿ ಮಂಗಳೂರು ಸೇರಿದಂತೆ ಇತರ ಭಾಗಗಳಲ್ಲಿ ನೀರಿನ ಅಭಾವ ಉಂಟಾಗುವ ಆತಂಕ ಎ ದುರಾಗಿದ್ದು, ಸುಮಾರು ಮೂರು ವರ್ಷಗಳ ಹಿಂದಿನಂತೆ ಈ ಬಾರಿಯೂ ತುಂಬೆ
ಡ್ಯಾಂಗೆ ಓಡಸಾಲು(ಬೋಟ್‌ವೇ)ಗಳ ಮೂಲಕ ನೀರು ಹರಿಸಬೇಕಾದ ಸಾಧ್ಯತೆ ಹೆಚ್ಚಿದೆ.

Advertisement

2019ರಲ್ಲಿ ಜೂನ್‌ ತಿಂಗಳಿನವರೆಗೂ ಮಳೆ ಬಾರದೆ ತೀವ್ರ ನೀರಿನ ಸಂಕಷ್ಟ ಎದುರಾಗಿ ತುಂಬೆ ಡ್ಯಾಂ ಕೂಡ ಖಾಲಿಯಾಗಿತ್ತು. ಆ ವೇಳೆ ಸರಪಾಡಿಯ ಎಂಆರ್‌ ಪಿಎಲ್‌ ಡ್ಯಾಂ(ಎಎಂಆರ್‌ ಡ್ಯಾಂ ನಿರ್ಮಾಣದ ಬಳಿಕ ನಿರುಪಯುಕ್ತವಾಗಿದೆ)ಬಳಿಕ ಕೊಂಚ ನೀರಿನ ಸಂಗ್ರಹವಿದ್ದು, ಆ ವೇಳೆ ಎಂಆರ್‌ಪಿಎಲ್‌ ಡ್ಯಾಂನ ಗೇಟ್‌ ತೆರೆದು ಮರಳನ್ನು ಸರಿಸಿ ನದಿಯಲ್ಲೇ ನೀರು ಹರಿಯುವುದಕ್ಕೆ ವ್ಯವಸ್ಥೆ ಮಾಡಿ ತುಂಬೆ ಡ್ಯಾಂಗೆ ನೀರು ಹರಿಸಲಾಗಿತ್ತು.

ಪ್ರಸ್ತುತ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 4 ಮೀ. ವರೆಗೆ ತಲುಪಿದ್ದು, ಪ್ರಸ್ತುತ ಹರೇಕಳದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ನೂತನವಾಗಿ ನಿರ್ಮಾಣಗೊಂಡಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಿಂದ ನೀರನ್ನು ತುಂಬೆ ಡ್ಯಾಂಗೆ ಹಿಂದಕ್ಕೆ ಪಂಪ್‌ ಮಾಡಿ ತುಂಬಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆ ನೀರು ಕೂಡ ಖಾಲಿಯಾದರೆ
ಓಡಸಾಲಿನ ಮೂಲಕ ನೀರು ಹರಿಸುವುದು ಅನಿವಾರ್ಯವಾಗಲಿದೆ. ಆದರೆ ಅದಕ್ಕಿಂತ ಮುಂಚೆ ಮಳೆ ಬಂದರೆ ಇದರ ಪ್ರಮೇಯ ಸೃಷ್ಟಿಯಾಗದು ಎನ್ನಲಾಗುತ್ತಿದೆ.

ಸುಮಾರು 3 ವರ್ಷಗಳ ಹಿಂದೆ ಕೆಲವು ಕಡೆ ಇದೇ ರೀತಿ ಓಡಸಾಲಿನ ಹೂಳು ತೆಗೆದು ಬಂಟ್ವಾಳ ನಗರಕ್ಕೆ ನೀರು ಪೂರೈಸುವ ಜಕ್ರಿಬೆಟ್ಟು ಜಾಕ್‌ವೆಲ್‌ ಹಾಗೂ ತುಂಬೆ ಡ್ಯಾಂಗೆ ನೀರು ಹರಿಸಲಾಗಿತ್ತು. ಪ್ರಸ್ತುತ ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಪ್ರದೇಶದಲ್ಲೂ ಕೊಂಚಮಟ್ಟಿನ ನೀರಿನ ಸಂಗ್ರಹವಿದ್ದು, ಹೀಗಾಗಿ ಬಂಟ್ವಾಳ ನಗರಕ್ಕೆ ನೀರಿನ ಆತಂಕ ಇಲ್ಲ ಎನ್ನಲಾಗುತ್ತಿದೆ.

ಆದರೆ ಮುಂದಿನ ದಿನಗಳಲ್ಲಿ ಜಕ್ರಿಬೆಟ್ಟಿನ ನೀರು ಯಾವ ಹಂತಕ್ಕೆ ತಲುಪುತ್ತದೆ ಎಂದು ಹೇಳುವಂತಿಲ್ಲ. ಜತೆಗೆ ಮಳೆಯೇ ಬಾರದೆ ಇದ್ದರೆ ಓಡಸಾಲಿನ ಮೂಲಕ ನೀರು ಹರಿಸುವ ಪ್ರಯತ್ನ ಯಾವ ಹಂತಕ್ಕೆ ತಲುಪಲಿದೆ ಎಂದು ಹೇಳುವಂತಿಲ್ಲ.

Advertisement

ಏನಿದು ಓಡಸಾಲು ?
ಹಿಂದಿನ ಕಾಲದಲ್ಲಿ ರಸ್ತೆಯೇ ಇಲ್ಲದ ಪರಿಸ್ಥಿತಿಯಲ್ಲಿ ಉಪ್ಪಿನಂಗಡಿ ಭಾಗದಿಂದ ಸರಕುಗಳನ್ನು ಮಂಗಳೂರಿಗೆ ದೋಣಿಯ ಮೂಲಕ ನದಿಯಲ್ಲೇ ಸಾಗಿಸಲಾಗುತ್ತಿತ್ತು. ಆಗ ಅಣೆಕಟ್ಟುಗಳಿಲ್ಲದೆ ಉಪ್ಪಿನಂಗಡಿಯಿಂದ ಮಂಗಳೂರಿನವರೆಗೂ ನದಿಯಲ್ಲೇ ಸಾಗಬಹುದಿತ್ತು. ನದಿ ಯಲ್ಲಿ ನೀರು ಕಡಿಮೆಯಾದ ಸಂದರ್ಭದಲ್ಲಿ ಯಾವುದೇ ಕಲ್ಲುಗಳಿಲ್ಲದ ಜಾಗದಲ್ಲಿ ದೋಣಿ ಸಾಗಬೇಕಾದ ಹಿನ್ನೆಲೆ ಓಡಸಾಲಿನ ವ್ಯವಸ್ಥೆ ಇತ್ತು. ಆದರೆ ಈಗ ಅಂತಹ ಓಡಸಾಲು ಹೂಳಿನಿಂದ ತುಂಬಿ ಸಂಪೂರ್ಣ ಮುಚ್ಚಿಹೋಗಿದೆ.

ಸದ್ಯ ಬಂಟ್ವಾಳಕ್ಕೆ ಆತಂಕವಿಲ್ಲ
ಸದ್ಯಕ್ಕೆ ಸರಪಾಡಿ ಎಂಆರ್‌ಪಿಎಲ್‌ ಡ್ಯಾಂ ಪ್ರದೇಶದಲ್ಲಿ ಸ್ವಲ್ಪ ಮಟ್ಟಿನ ನೀರಿನ ಸಂಗ್ರಹವಿದ್ದು, ಮುಂದಿನ ದಿನಗಳಲ್ಲಿ ತುಂಬೆ ಡ್ಯಾಂನಲ್ಲಿ ನೀರು ಖಾಲಿಯಾದರೆ ಸರಪಾಡಿ ಡ್ಯಾಂನ ಬಳಿಯಿರುವ ನೀರು ಯಾವ ಹಂತಕ್ಕೆ ತಲುಪುತ್ತದೆ ಎಂದು ಹೇಳುವಂತಿಲ್ಲ. ಆದರೂ ಆಗ ಒಂದೆರಡು ಮಳೆ ಬಂದು ಸ್ವಲ್ಪ ಮಟ್ಟಿಗೆ ಒಳಹರಿವು ಇದ್ದರೆ ಈ ಓಡಸಾಲಿನ ಮೂಲಕ ನೀರು ಹರಿಸುವ ಪ್ರಯತ್ನ ಯಶಸ್ವಿಯಾಗುವ ಸಾಧ್ಯತೆ ಇದೆ.

*ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next