Advertisement

ಸಹೋದರರಿಂದ ಮಳೆ ಕೊಯ್ಲು ಜಾಗೃತಿ

03:30 PM Mar 22, 2022 | Team Udayavani |

ಗದಗ: ತಮ್ಮ ಮನೆಗಳಲ್ಲಿ ಮಳೆನೀರು ಕೊಯ್ಲು ವಿಧಾನದ ಮೂಲಕ ನಗರದ ಮೂವರು ಸಹೋದರರು ಕುಡಿಯುವ ನೀರಿಗೆ ಸ್ವಾವಲಂಬನೆ ಕಂಡುಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಲ್ಲದೇ, ನೆರೆ-ಹೊರೆಯರು, ಪರಿಚಿತರಿಗೂ ಇದರ ಮಹತ್ವ ಸಾರಿ ಜಲ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಕೆಲವೇ ವರ್ಷಗಳ ಹಿಂದೆ ನಗರದಲ್ಲಿ ಕುಡಿಯುವ ನೀರಿಗೆ ಪರದಾಟವಿತ್ತು. ಬೇಸಿಗೆಯಲ್ಲಿ ನಗರ ಸಭೆಯಿಂದ ನಿಯಮಿತವಾಗಿ 15-20 ದಿನಕ್ಕೊಮ್ಮೆ ಪೂರೈಕೆಯಾಗುತ್ತಿತ್ತು. ಕೆಲವೊಮ್ಮೆ ತಾಂತ್ರಿಕ ಅಡಚಣೆ ಉಂಟಾದರೆ 45 ದಿನಕ್ಕೆ ನೀರು ಸರಬರಾಜು ಆದ ಉದಾಹರಣೆಗಳಿವೆ. ಹೀಗಾಗಿ ಜನರು ಬೇಸಿಗೆ ದಿನಗಳಲ್ಲಿ ತುಂಗಭದ್ರಾ ನದಿ ನೀರನ್ನು ಸಿಂಟೆಕ್ಸ್‌, ಸಿಮೆಂಟ್‌ ತೊಟ್ಟಿಗಳಲ್ಲದೇ, ಸಣ್ಣ ಪುಟ್ಟ ಪಾತ್ರೆಗಳಲ್ಲೂ ತುಂಬಿಟ್ಟುಕೊಳ್ಳುವ ಅನಿವಾರ್ಯತೆ ಇತ್ತು.

ಇಂತಹ ಪರಿಸ್ಥಿತಿಯಿಂದ ಮುಕ್ತರಾಗಲು ಚಿಂತನೆ ನಡೆಸಿದ ಸಿವಿಲ್‌ ಎಂಜಿನಿಯರ್‌ ಶ್ರೀಕಾಂತ ವಿ.ರಕ್ಕಸಗಿ ಅವರಿಗೆ ಮಳೆ ನೀರು ಕೊಯ್ಲು ಉಪಾಯ ಹೊಳೆದಿದೆ. ತಕ್ಷಣ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದ ಅವರಿಗೆ ಒಂದೇ ವರ್ಷದಲ್ಲಿ ಉತ್ತಮ ಫಲ ನೀಡಿದೆ. ನಂತರ ಕಿರಿಯ ಸಹೋದರರಾದ ಆರ್ಯುವೇದ ವೈದ್ಯ ಡಾ| ಪ್ರಕಾಶ ವಿ.ರಕ್ಕಸಗಿ ಹಾಗೂ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನ ಉಪನ್ಯಾಸಕ ರಾಜಶೇಖರ್‌ ವಿ.ರಕ್ಕಸಗಿ ಅವರು ಪ್ರತ್ಯೇಕ ಮನೆ ನಿರ್ಮಿಸಿಕೊಂಡಿದ್ದರೂ, ವರ್ಷಗಳಿಂದ ಮಳೆ ನಿರು ಕೊಯ್ಲು ವಿಧಾನವನ್ನೇ ಅವಲಂಭಿಸಿದ್ದು, ಜೀವ ಜಲದ ಸದ್ಬಳಕೆಯಲ್ಲಿ ತೊಡಗಿದ್ದಾರೆ.

10 ಸಾವಿರ ಲೀಟರ್‌ ಸಾಮರ್ಥ್ಯ: ರಕ್ಕಸಗಿ ಸಹೋದರರ ಮೂರೂ ಮನೆಗಳಲ್ಲಿ ದಿನ ಬಳಕೆ ಮತ್ತು ಕುಡಿಯುವ ನೀರಿಗಾಗಿ ಪ್ರತ್ಯೇಕ ಎರಡು ಸಂಪ್‌ಗ್ಳನ್ನು ನಿರ್ಮಿಸಿದ್ದಾರೆ. ಕುಡಿಯುವ ನೀರಿಗಾಗಿ ತಲಾ 10 ಸಾವಿರ ಲೀಟರ್‌ ಸಾಮರ್ಥ್ಯದ ಜಲ ಸಂಗ್ರಹಾಗಾರ ನಿರ್ಮಿಸಿದ್ದಾರೆ. ಮನೆ ಮೇಲ್ಛಾವಣಿಯಲ್ಲಿ ಬೀಳುವ ಪ್ರತಿ ಮಳೆ ಹನಿಯೂ ನಿಗದಿತ ತೊಟ್ಟಿಗೆ ಸೇರುವಂತೆ ಅಚ್ಚುಕಟ್ಟಾಗಿ ಪೈಪ್‌ಲೈನ್‌ ವ್ಯವಸ್ಥೆ ಮಾಡಿದ್ದಾರೆ. ಮಳೆಗಾಲದ ಆರಂಭದಲ್ಲಿ ಒಂದೆರಡು ಮಳೆ ನೀರು ಸಂಪೂರ್ಣವಾಗಿ ಹೊರಹೋಗುವಂತೆ ಮಾಡಲಾಗುತ್ತದೆ. ಮೇಲ್ಛಾವಣಿ ಸ್ವತ್ಛಗೊಳಿಸಿ, ಬಳಿಕ ಕುಡಿಯುವ ನೀರಿನ ಸಂಪ್‌ಗೆ ವಾಲ್ಟ್ ತಿರುಗಿಸಲಾಗುತ್ತದೆ. ಶುದ್ಧ ಮಳೆ ನೀರು ಸಂಗ್ರಹಿಸಿ, ಸುಮಾರು ಒಂದು ವರ್ಷದ ವರೆಗೆ ಕುಡಿಯಲು ಉಪಯೋಗಿಸುತ್ತೇವೆ ಎನ್ನುತ್ತಾರೆ ಶ್ರೀಕಾಂತ್‌ ರಕ್ಕಸಗಿ.

ಮಳೆ ನೀರು ಸಂಗ್ರಹಿಸುವ ತೊಟ್ಟಿಗೆ ಕಸ ಕಡ್ಡಿ ಬೀಳದಂತೆ, ಸೂರ್ಯನ ಕಿರಣಗಳೂ ಬೀಳದಂತೆ ನಿರ್ಮಿಸಲಾಗಿದೆ. ಮಳೆಗಾಲಕ್ಕೂ ಮುನ್ನ ವೈಜ್ಞಾನಿಕವಾಗಿ ಸ್ವತ್ಛಗೊಳಿಸುವುದರಿಂದ ಯಾವುದೇ ರೀತಿಯ ಕೀಟಗಳು ಉತ್ಪತ್ತಿಯಾಗುವುದಿಲ್ಲ. ನಮ್ಮ ಮೂರೂ ಮನೆಗಳಲ್ಲಿ ಕಳೆದ 7-8 ವರ್ಷಗಳಿಂದ ನಿರಂತರ ಮಳೆ ನೀರನ್ನೇ ಕುಡಿಯುತ್ತಿದ್ದೇವೆ. ಯಾರೊಬ್ಬರಿಗೂ ಸಣ್ಣ ಜ್ವರ ಕೂಡಾ ಬಂದಿಲ್ಲ ಎನ್ನುತ್ತಾರೆ ಡಾ| ಪ್ರಕಾಶ ರಕ್ಕಸಗಿ.

Advertisement

ಶ್ರೀಕಾಂತ್‌ ಅವರು ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದರಿಂದ ಹೊಸದಾಗಿ ಮನೆ ನಿರ್ಮಿಸಿಕೊಳ್ಳುವವರಿಗೆ ಮಳೆ ನೀರಿನ ಕೊಯ್ಲು ಮಹತ್ವವನ್ನು ವಿವರಿಸಿ, ಅದನ್ನು ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಿದ್ದಾರೆ. ಡಾ| ಪ್ರಕಾಶ್‌ ಅವರು ತಮ್ಮ ಬಳಿಗೆ ಬರುವ ರೋಗಿಗಳಿಗೆ ಹಾಗೂ ಪ್ರಾಧ್ಯಾಪಕ ರಾಜಶೇಖರ್‌ ಅವರು ತಮ್ಮ ವಿದ್ಯಾರ್ಥಿ ಸಮೂಹದ ಮೂಲಕ ಜಲ ಸಂರಕ್ಷಣೆ ಹಾಗೂ ಸದ್ಬಳಕೆ ಬಗ್ಗೆ ಅರಿವು ಮೂಡಿಸುತ್ತಿರುವುದು ಗಮನಾರ್ಹ. ‌

 

ಮೂರು ಟ್ಯಾಂಕ್‌ ನಿರ್ಮಾಣ, ಪೈಪ್‌ಲೈನ್‌ ಅಳವಡಿಕೆಗೆ ಕೇವಲ 60 ಸಾವಿರ ರೂ. ಖರ್ಚಾಗಿದೆ. ಟ್ಯಾಂಕ್‌ ಅಳತೆಗೆ ಅನುಗುಣವಾಗಿ ವೆಚ್ಚದಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ನಾನೇ ನಿರ್ಮಿಸಿದ ಹಲವಾರು ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಟ್ಟಿದ್ದೇನೆ. ಆರಂಭದಲ್ಲಿ ಮಳೆ ನೀರು ಕೊಯ್ಲಿಗೆ ನಿರಾಸಕ್ತಿ ತೋರಿದ್ದ ಮನೆ ಮಾಲೀಕರು ಇದೀಗ ಅದರಿಂದ ಖುಷಿಯಾಗಿದ್ದಾರೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆನೋವಿರದು.

ಶ್ರೀಕಾಂತ ರಕ್ಕಸಗಿ, ಸಿವಿಲ್‌ ಎಂಜಿನಿಯರ್‌

 

ನಮ್ಮ ಮನೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡಿದ್ದರಿಂದ ಸಾಕಷ್ಟು ಅನುಕೂಲವಾಗಿದೆ. ಈ ಬಗ್ಗೆ ನೆರೆಹೊರೆಯವರು, ನನ್ನ ವಿದ್ಯಾರ್ಥಿಗಳಿಗೂ ಸಂದರ್ಭಕ್ಕೆ ಅನುಗುಣವಾಗಿ ತಿಳಿವಳಿಕೆ ನೀಡುತ್ತಿರುತ್ತೇನೆ. ಹಳೆ ವಿದ್ಯಾರ್ಥಿಗಳನೇಕರು ತಮ್ಮ ಮನೆಗಳಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ.

-ರಾಜಶೇಖರ ರಕ್ಕಸಗಿ, ಬಿವಿಬಿ ಕಾಲೇಜು ಪ್ರಾಧ್ಯಾಪಕ

-ವೀರೇಂದ್ರ ನಾಗಲದಿನಿ

 

 

Advertisement

Udayavani is now on Telegram. Click here to join our channel and stay updated with the latest news.

Next