Advertisement

ಮ್ಯಾನ್‌ಹೋಲ್‌ನಿಂದ ಉಕ್ಕಿಬರುವ ತ್ಯಾಜ್ಯದ ನೀರು

04:00 PM Apr 08, 2019 | pallavi |
 ಬಂಟ್ವಾಳ : ಬಿ.ಸಿ. ರೋಡ್‌ ನಗರ ಕೇಂದ್ರದಿಂದ ಮೂರು ಕಿ.ಮೀ. ಸನಿಹದ ನಲ್ಕೆಮಾರ್‌ ಕರ್ನಾಟಕ ಗೃಹ ಮಂಡಳಿ ಬಡಾವಣೆಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ಬಡಾವಣೆಗೆ ಅಳವಡಿಸಿದ ಮ್ಯಾನ್‌ಹೋಲ್‌ನಿಂದ ಉಕ್ಕಿಬರುವ ತ್ಯಾಜ್ಯ ನೀರು ರೋಗ ಭೀತಿಗೆ ಕಾರಣವಾಗಿದೆ. ಅಸಹ್ಯ ದುರ್ವಾಸನೆ, ಸೊಳ್ಳೆಗಳು, ತ್ಯಾಜ್ಯ ನೀರು ಮಳೆಗಾಲದಲ್ಲಿ ಸಾರ್ವಜನಿಕ ಜನವಸತಿ ಪ್ರದೇಶ,  ಜಲಮೂಲಗಳನ್ನು ಸೇರಿ ಕುಡಿಯುವ ನೀರೂ ಕಲುಷಿತಗೊಂಡು ಆರೋಗ್ಯ ಸಮಸ್ಯೆಗೆ ಕಾರಣವಾಗುವ ಗಂಭೀರ ಅಪಾಯವಿದೆ.
ಪ್ರಾಥಮಿಕ ಶಾಲೆ, ಸರಕಾರಿ ಅಂಗನವಾಡಿ ಕೇಂದ್ರ ಬಳಿಯೇ ಇರುವುದರಿಂದ ಮಕ್ಕಳಿಗೂ ಇದರ ಪರಿಣಾಮ ಬೀಳುವ ಸಾಧ್ಯತೆಯಿದೆ. ಶಾಲಾ ಮಕ್ಕಳು ಈ ದಾರಿಯನ್ನು ಬಳಸುವುದರಿಂದ ಮಕ್ಕಳಿಗೂ ಇದರಿಂದ ತೊಂದರೆ ಎದುರಾಗುವ ಸಂಭವ ಇದೆ.
ಬಡಾವಣೆಯನ್ನು ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ. ಅದರ ನಿರ್ವಹಣೆ ಪಂಚಾಯತ್‌ ಹೊಣೆಗಾರಿಕೆ ಎಂದು ಗೃಹ ಮಂಡಳಿ ಹೇಳುತ್ತಿದೆ. ಈ ಬಡಾವಣೆಯಲ್ಲಿ ಮೆಸ್ಕಾಂ ಇಲಾಖೆಯಿದ್ದು, ಮೆಸ್ಕಾಂ ತನ್ನ ಸ್ವಂತ ವೆಚ್ಚದಲ್ಲಿ ಎರಡು ಬಾರಿ ಮ್ಯಾನ್‌ಹೋಲ್‌ಗ‌ಳನ್ನು ಸ್ವತ್ಛ ಮಾಡಿದೆ. ಆದರೆ ಎರಡೇ ದಿನಗಳಲ್ಲಿ ಮತ್ತೆ ತ್ಯಾಜ್ಯ ರಸ್ತೆಯಲ್ಲಿ ಹರಿಯತೊಡಗಿದೆ.
ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬಡಾವಣೆಯಾಗಲೀ ಪಂಚಾಯತ್‌ ಆಗಲೀ  ಗಮನ ಹರಿಸುವುದಿಲ್ಲ.  ಸಮಸ್ಯೆ ಪರಿಹರಿಸಲು ಸ್ಥಳೀಯ ಆಡಳಿತ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
   ಗಬ್ಬು ವಾಸನೆ
ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗಲೂ ಆಗುತ್ತಿಲ್ಲ. ಗಬ್ಬು ವಾಸನೆ. ಶಾಲಾ ಮಕ್ಕಳು ಓಡಾಡುವ ಪ್ರದೇಶದಲ್ಲಿ ಕೂಡಲೇ ಇದನ್ನು ಸರಿಮಾಡಬೇಕಾಗಿತ್ತು. ಆದರೆ ಯಾರೂ ಇತ್ತ ಕಡೆ ಬರುವುದಿಲ್ಲ.  ಆದಷ್ಟು ಬೇಗ ಪೈಪ್‌ಲೈನ್‌ ಸ್ವಲ್ಪ ದೊಡ್ಡದು ಮಾಡಿ ನೀರು ಹರಿಯುವಂತೆ ಮಾಡಿದರೆ ಎಲ್ಲರಿಗೂ ಒಳ್ಳೆಯದು.
 -ಚೆನ್ನಪ್ಪ ನಲ್ಕೆಮಾರ್‌, ಸ್ಥಳೀಯರು
 ಹಸ್ತಾಂತರ ಆಗಿಲ್ಲ
ನಲ್ಕೆಮಾರ್‌ ಗೃಹ ಮಂಡಳಿ ಬಡಾವಣೆಯಲ್ಲಿ 13 ಕಟ್ಟಡಗಳಿದ್ದು, 3ಕ್ಕೆ ಮಾತ್ರ ಡೋರ್‌ ನಂಬ್ರ ಪಡೆಯಲಾಗಿದೆ.  ಇತರ ಕಟ್ಟಡಗಳು ಅನಧಿಕೃತವಾಗಿ ನಿರ್ವಹಿಸಲ್ಪಡುತ್ತದೆ. ನಿಯಮಾನುಸಾರ ಗ್ರಾ.ಪಂ.ಗೆ ಹಸ್ತಾಂತರ ಆಗಿಲ್ಲ. ನಿರ್ವಹಣೆ ಕುರಿತು ಪಾರ್ಟ್‌ಬೈ ಪಾರ್ಟ್‌ ಹಸ್ತಾಂತರ ಹೊರತು ಪೂರ್ಣ ನಡೆದಿಲ್ಲ.  ಬಡಾವಣೆ ನಿರ್ಮಾಣದ ಸಂದರ್ಭ ಮಂಡಳಿ ಯೋಜನಾಬದ್ಧವಾಗಿ ಒಳಚರಂಡಿ ಕಾಮಗಾರಿಯನ್ನು ನಿರ್ವಹಿಸಿಲ್ಲ. ಸಣ್ಣ ಗಾತ್ರದ ಕೊಳವೆಗಳನ್ನು ಅಳವಡಿಸಲಾಗಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಆದರೂ ನಾನು ಮತ್ತು ಪಿಡಿಒ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ. ಪತ್ರವನ್ನು ಬರೆದು ಕಾನೂನು ಕ್ರಮ ಅನುಸರಿಸಲು ಸೂಚಿಸಿದೆ.
 -ಹರೀಶ್‌ ಪಡು, ಅಧ್ಯಕ್ಷರು, ಅಮಾಡಿ ಗ್ರಾ.ಪಂ.
 ಲಿಖೀತ ದೂರು ಇಲ್ಲ
ಸ್ಥಳೀಯರಿಂದ  ಪತ್ರ ಮುಖೇನ ದೂರು ಬಂದಿಲ್ಲ.  ಸಮಸ್ಯೆ ಎಲ್ಲರಿಗೂ ತಿಳಿದಿರುತ್ತದೆ. ಬಡಾವಣೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಚಿಕ್ಕ ಗಾತ್ರದ ಕೊಳವೆ ಅಳವಡಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಬಡಾವಣೆ ಪಂ.ಗೆ ಸಂಪೂರ್ಣ ಹಸ್ತಾಂತರವಾಗಲಿಲ್ಲ. ಮುಂದಿನ ದಿನಗಳಲ್ಲಿ ಕೂಡಲೇ ಸಮಸ್ಯೆಗೆ ಪರಿಹಾರ ಕ್ರಮದ ಬಗ್ಗೆ ಚರ್ಚಿಸಲಾಗುವುದು.
 -ಯೋಗೀಶ್‌, ಸ್ಥಳೀಯ ಸದಸ್ಯರು, ಅಮಾಡಿ ಪಂಚಾಯತ್‌
Advertisement

Udayavani is now on Telegram. Click here to join our channel and stay updated with the latest news.

Next