Advertisement

ಕೃಷ್ಣೆಗೆ ಬಾರದ ಉಪ ನದಿಯ ನೀರು

09:33 AM Jun 03, 2019 | Suhan S |

ಬಾಗಲಕೋಟೆ: ಕೃಷ್ಣೆಗೆ ತನ್ನ ಉಪ ನದಿಯ ಮೂಲಕ ನೀರು ಹರಿಸುವ ರಾಜ್ಯ ಸರ್ಕಾರದ ಪ್ರಯತ್ನ ವಿಫಲವಾಗಿದೆ. ಅತ್ತ ಮಹಾರಾಷ್ಟ್ರವೂ ಕೊಯ್ನಾ ಜಲಾಶಯದಿಂದ ನೀರು ಬಿಡದೇ, ಸತಾಯಿಸುತ್ತಿದೆ. ಹೀಗಾಗಿ ಮುಳುಗಡೆ ಜಿಲ್ಲೆಯಲ್ಲಿ ನಿಜವಾಗಿ ಬರ ಎದುರಿಸುವ ಸವಾಲು ಈಗ ಎದುರಾಗಿದೆ.

Advertisement

ಹೌದು, ಜಿಲ್ಲೆಯ 602 ಹಳ್ಳಿಗಳು, 1072 ಜನ ವಸತಿ ಪ್ರದೇಶಗಳಲ್ಲಿ ಈ ವರೆಗೆ 47 ಜನ ವಸತಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗಿತ್ತು. ಈಗ ಎಲ್ಲೆಡೆ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಈ ವಾರದಲ್ಲಿ ರೋಹಿಣಿ ಮಳೆ ಸುರಿಯದಿದ್ದರೆ, ಜಿಲ್ಲಾಡಳಿತ ಬರ ಎದುರಿಸಲು ದೊಡ್ಡ ಸವಾಲನ್ನೇ ಎದುರಿಸಬೇಕಾಗುತ್ತದೆ ಎನ್ನಲಾಗಿದೆ.

ಬಾರದ ಉಪ ನದಿಯ ನೀರು: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಿಸುವ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ರಾಜ್ಯ ಸರ್ಕಾರದ ಪ್ರಯತ್ನ ಸದ್ಯಕ್ಕೆ ವಿಫಲವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಜನಪ್ರತಿನಿಧಿಗಳನ್ನು ಒಳಗೊಂಡ ನಿಯೋಗ, ಮಹಾರಾಷ್ಟ್ರಕ್ಕೆ ಹೋಗಿ, ಅಲ್ಲಿನ ಜಲ ಸಂಪನ್ಮೂಲ ಸಚಿವರು ಸಹಿತ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಪ್ರತ್ಯೇಕ ಮನವಿ ಮಾಡಿದರೂ ಮಹಾರಾಷ್ಟ್ರ ಮಾತ್ರ ಭರವಸೆ ಕೊಟ್ಟು ಕಳುಹಿಸಿದೆ. ನೀರು ಬಿಡಲು ಮಹಾರಾಷ್ಟ್ರ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕೃಷ್ಣೆಯ ಉಪನದಿ ಘಟಪ್ರಭಾ ನದಿಯ ಹಿಡಕಲ್ ಡ್ಯಾಂನಲ್ಲಿ ಇರುವ ಅಲ್ಪ ನೀರನ್ನೇ ಕಾಲುವೆ ಮೂಲಕ ಕೃಷ್ಣಾ ನದಿಗೆ ಹರಿಸುವ ಮೊದಲ ಬಾರಿಗೆ ನಡೆಸುವ ಪ್ರಯತ್ನ ಕೂಡ ಸಫಲವಾಗಿಲ್ಲ.

ಹಿಡಕಲ್ ಡ್ಯಾಂನಿಂದ ಒಟ್ಟು 1.46 ಟಿಎಂಸಿ ನೀರು, ಬಲದಂಡೆ ಕಾಲುವೆ ಮೂಲಕ ಕೃಷ್ಣಾ ನದಿಗೆ ತರಬೇಕೆಂಬ ದೊಡ್ಡ ಸವಾಲಿನ ಪ್ರಯತ್ನ ಅರ್ಧದಲ್ಲೇ ಮೊಟಕುಗೊಂಡಿದೆ. ಹಿಡಕಲ್ ಡ್ಯಾಂನಿಂದ ಬಿಟ್ಟ ನೀರು, ಕೇವಲ ಬೆಳಗಾವಿ ಜಿಲ್ಲೆಯ ಶೇಗುಣಸಿವರೆಗೆ ಮಾತ್ರ ಬಂದಿದೆ. ಅಷ್ಟೊತ್ತಿಗೆ ಹಿಡಕಲ್ ಡ್ಯಾಂನಲ್ಲಿದ್ದ ನೀರೂ ಖಾಲಿಯಾಗಿದೆ. ಹೀಗಾಗಿ ಕೃಷ್ಣೆಗೆ ಘಟಪ್ರಭಾ ನದಿ ನೀರು ಹರಿಸುವ ಪ್ರಯತ್ನ ಕೈಗೂಡಲಿಲ್ಲ.

209 ಗ್ರಾಮಗಳಲ್ಲಿ ಸಮಸ್ಯೆ: ಈ ವರೆಗೆ ಜಿಲ್ಲೆಯ 58 ಗ್ರಾಮಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇತ್ತು. ಅದರಲ್ಲಿ 25 ಗ್ರಾಮಗಳ ಜನರಿಗೆ ನಿತ್ಯ 47 ಟ್ಯಾಂಕರ್‌ ನೀರು ಕೊಡಲಾಗುತ್ತಿದೆ. 33 ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳ ಕೊಳವೆ ಬಾವಿ ಮೂಲಕ ನೀರು ಕೊಡುವ ಪ್ರಯತ್ನ ಜಿಲ್ಲಾಡಳಿತ ಮಾಡುತ್ತಿದೆ. ಈ ವಾರ ಮಳೆ ಸುರಿಯದಿದ್ದರೆ, ಸಮಸ್ಯೆಯಾತ್ಮಕ ಹಳ್ಳಿಗಳ ಸಂಖ್ಯೆ 209 ದಾಟಲಿದೆ. ಜೂನ್‌ ಅಂತ್ಯದವರೆಗೆ 209 ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಲಿದ್ದು, ಅದರಲ್ಲಿ 144 ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸಲು ಟಿಟಿಎಫ್‌-3 ಸಹಿತ ವಿವಿಧ ಯೋಜನೆಗಳಡಿ ಅನುದಾನ ಒದಗಿಸಲಾಗಿದೆ. ಆದರೆ, ಇನ್ನುಳಿದ 65 ಗ್ರಾಮಗಳಲ್ಲಿ ಟ್ಯಾಂಕರ್‌ ನೀರು ಕೊಡುವುದು ಬಿಟ್ಟರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಷ್ಟು ಸುಲಭದ (ನೀರಿನ ಮೂಲ ಇಲ್ಲ) ಮಾತಲ್ಲ. ಹೀಗಾಗಿ ಜಿಲ್ಲಾಡಳಿತವೂ ಬೇಗ ಮಳೆ ಬರಲಿ ಎಂದು ಕಾಯುತ್ತಿದೆ.

Advertisement

ಘಟಪ್ರಭಾ ನದಿಯ ಹಿಡಕಲ್ ಡ್ಯಾಂನಿಂದ ಕೃಷ್ಣಾ ನದಿಗೆ ನೀರು ಹರಿಸಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಆದರೆ, ಹಿಡಕಲ್ ಡ್ಯಾಂನ ನೀರು ಕೇವಲ ಬೆಳಗಾವಿ ಜಿಲ್ಲೆಯ ಶೇಗುಣಸಿ ವರೆಗೆ ಮಾತ್ರ ಬಂದಿದೆ. ನಮಗೆ ಕೇವಲ ಅರ್ಧ ಟಿಎಂಸಿ ಅಡಿಯಷ್ಟಾದರೂ ನೀರು ಬಂದಿದ್ದರೆ, ಇನ್ನೂ 15 ದಿನಗಳ ಕಾಲ ಸಮಸ್ಯೆ ಪರಿಹಾರವಾಗಲಿತ್ತು. ಆದರೆ, ಹಿಡಕಲ್ ಡ್ಯಾಂನಲ್ಲೂ ನೀರಿಲ್ಲ. ನಮ್ಮ ಭಾಗದ ಕೃಷ್ಣಾ ನದಿಯಲ್ಲೂ ನೀರಿಲ್ಲ. ಹೀಗಾಗಿ ಪರ್ಯಾಯ ಮಾರ್ಗಗಳ ಮೂಲಕ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವ ಪ್ರಯತ್ನದಲ್ಲಿದ್ದೇವೆ.•ಆರ್‌. ರಾಮಚಂದ್ರನ್‌, ಜಿಲ್ಲಾಧಿಕಾರಿ

ಬಾಗಲಕೋಟೆಗೆ ಕುಡಿಯುವ ನೀರು ಒದಗಿಸುವ ಜಲಮೂಲವಾದ ಆನದಿನ್ನಿ ಬ್ಯಾರೇಜ್‌ನಲ್ಲೂ ನೀರು ಕಡಿಮೆಯಾಗಿದೆ. ಸದ್ಯ ಸಂಗ್ರಹಗೊಂಡ ನೀರು ಜೂನ್‌ 15ರ ವರೆಗೆ ಬರುತ್ತದೆ. ಅದೂ ಖಾಲಿಯಾದರೆ, ಗಂಭೀರ ಸಮಸ್ಯೆ ಎದುರಿಸುತ್ತೇವೆ. ಕಳೆದ ವಾರ ಹಿಡಕಲ್ ಡ್ಯಾಂನಿಂದ ಘಟಪ್ರಭಾ ನದಿಗೆ ಬಿಟ್ಟ ನೀರು ಆನದಿನ್ನಿ ವರೆಗೆ ಬಂದಿಲ್ಲ. ಆ ನೀರು ಬಂದಿದ್ದರೆ, ಈ ತಿಂಗಳ ಅಂತ್ಯದ ವರೆಗೂ ನಮಗೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ.•ಮೋಹನ ಹಲಗತ್ತಿ, ಎಇಇ, ಬಿಟಿಡಿಎ

Advertisement

Udayavani is now on Telegram. Click here to join our channel and stay updated with the latest news.

Next