Advertisement

ಜಾಕ್‌ವೆಲ್ ನಿರ್ಮಾಣ ಕಾಮಗಾರಿಯಿಂದ 18 ಕೆರೆಗೆ ನೀರು

11:14 AM Jun 28, 2019 | Suhan S |

ಬ್ಯಾಡಗಿ: ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಿದ್ಧಗೊಳ್ಳುತ್ತಿರುವ 92 ಕೋಟಿ ರೂ.ವೆಚ್ಚದ ಅಸುಂಡಿ ಸೇರಿದಂತೆ 18 ಕೆರೆಗಳನ್ನು ತುಂಬಿಸುವ ಯೋಜನೆ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು, ಈ ಭಾಗದ ರೈತರ ಬಹುದಿನದ ಬೇಡಿಕೆ ಈಡೇರಲಿದೆ ಎಂದು ಮಾಜಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

Advertisement

ಮತಕ್ಷೇತ್ರದ ಕೋಟಿಹಾಳ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಜಾಕ್‌ವೆಲ್ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆ ಇದಾಗಿದ್ದು, ಈಗಾಗಲೇ ಜಾಕ್‌ವೆಲ್ ನಿರ್ಮಾಣದ ಸ್ಥಳದಿಂದ ಕುಪ್ಪೇಲೂರ ಗ್ರಾಮದ ವರೆಗೆ ಸುಮಾರು 5 ಕಿಮೀ ನಷ್ಟು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಹಾರೊಗೊಪ್ಪ ಗ್ರಾಮದವರೆಗೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

18 ಗ್ರಾಮಗಳ ಕೆರೆ ಭರ್ತಿ:ಯುಟಿಪಿ ಎಂಜಿನಿಯರ ಎನ್‌.ಎಚ್.ಹುಗ್ಗಿ ಮಾತನಾಡಿ, ಸದರಿ ಯೋಜನೆಯಡಿ ಬ್ಯಾಡಗಿ ತಾಲೂಕಿನ ಬೆಳಕೇರಿ ಸೇರಿದಂತೆ, ಬ್ಯಾಡಗಿ ಮತಕ್ಷೇತ್ರ ವ್ಯಾಪ್ತಿಯ ರಾಣಿಬೆನ್ನೂರ ತಾಲೂಕಿನ ಅಸುಂಡಿ, ಬೆನಕನಕೊಂಡ, ಸುಣಕಲ್ ಬಿದರಿ, ಉಕ್ಕುಂದ, ಸರ್ವಂದ, ಹೊಸ ಹೂಲಿಹಳ್ಳಿ, ಜೋಯಿಸರಹರಳಳ್ಳಿ, ಹೆಡಿಯಾಲ, ಗುಡ್ಡದ ಬೇವಿನಹಳ್ಳಿ, ಯರೇಕುಪ್ಪಿ, ತಿರುಮಲದೇವರಕೊಪ್ಪ ಹಾಗೂ ಹಿರೇಕೆರೂರ ತಾಲೂಕಿನ ನೇಸ್ವಿ, ಕೋಡ, ಆಲದಗೇರಿ, ಲಿಂಗೆದೇವರಕೊಪ್ಪ, ಕುಂಚೂರ ಗ್ರಾಮಗಳ ಕೆರೆಗಳನ್ನು ಭರ್ತಿ ಮಾಡಲಾಗುವುದು. ಹೈದರಾಬಾದ್‌ ಮೂಲದ ಜಿವಿಪಿಆರ್‌ ಎಂಜಿನಿಯರ್ ಲಿಮಿಟೆಡ್‌ ಗುತ್ತಿಗೆ ಪಡೆದಿದ್ದು, ಕಾಮಗಾರಿ ತೀವ್ರಗತಿಯಲ್ಲಿ ಪ್ರಗತಿಯಲ್ಲಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಕರಿಲಿಂಗಪ್ಪನವರ, ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ, ಯುವ ಘಟಕದ ಅಧ್ಯಕ್ಷ ಡಿ.ಎಚ್.ಬುಡ್ಡನಗೌಡ್ರ, ಧುರೀಣರಾದ ಬೀರಣ್ಣ ಬಣಕಾರ, ಶಂಕರಗೌಡ ಪಾಟೀಲ, ಬಸವರಾಜ ಸವಣೂರ, ಸುರೇಶಗೌಡ್ರ ಪಾಟೀಲ, ಭಾಷಾಸಾಬ್‌ ದೊಡ್ಮನಿ, ಹನುಮಂತಪ್ಪ ನಾಯ್ಕರ್‌, ಎಂ.ಬಿ.ಅಸುಂಡಿ, ಮಂಜುನಾಥ ಆನ್ವೇರಿ, ರವಿ ಕದರಮಂಡಲಗಿ, ದ್ಯಾಮನಗೌಡ್ರ, ಮಲ್ಲಪ್ಪ, ಪುಟ್ಟಪ್ಪ. ಹಾಲಪ್ಪ, ಪ್ರಕಾಶ ಅಜ್ಜಮ್ಮನವರ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next