Advertisement

ಅರಣ್ಯ ಸುಡುವ ಬೆಂಕಿಗೆ ಹೆಲಿಕಾಪ್ಟರ್‌ನಿಂದ ನೀರು

07:37 AM Feb 26, 2019 | |

ಗುಂಡ್ಲುಪೇಟೆ/ಚಾಮರಾಜನಗರ: ಬಂಡೀಪುರದಲ್ಲಿ ಇದೇ ಮೊದಲ ಬಾರಿ ಸುಮಾರು 9 ಸಾವಿರ ಎಕರೆ ಅರಣ್ಯವನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚು ನಂದಿಸಲು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೇನೆಯ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ. ಎರಡು ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕಾರ್ಯಾ ಚರಣೆಯಲ್ಲಿ ತೊಡಗಿವೆ. ಬಂಡೀಪುರ ಬಳಿಯ ಬೇರಂಬಾಡಿಯ ಕೆಂಪುಸಾಗರಕೆರೆಯಿಂದ ನೀರನ್ನು ಹೆಲಿಕಾಪ್ಟರ್‌ ಮೂಲಕ ಎತ್ತಿ ಕಾಡ್ಗಿಚ್ಚು ಹಬ್ಬಿರುವ ಪ್ರದೇಶಗಳಲ್ಲಿ ಆ ನೀರನ್ನು ಸುರಿಸಲಾಗುತ್ತಿದೆ.

Advertisement

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಳೆದ ಐದು ದಿನಗಳ ಹಿಂದೆ ಆರಂಭವಾದ ಕಾಡ್ಗಿಚ್ಚಿನ ಪ್ರತಾಪ ಸೋಮವಾರವೂ ಮುಂದುವರಿದಿದೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಿಂದ ಕೆಳಗಿಳಿದ ಬೆಂಕಿಯು ಪಶ್ಚಿಮದ ಮುಖಾಂತರ ಮದ್ದೂರು ಅರಣ್ಯವಲಯಕ್ಕೆ ಧಾವಿಸಿದ್ದು ಮೂಲೆಹೊಳೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದೆ.

ಈ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸಲು ಮಾನವನ ಪ್ರಯತ್ನ ಕಷ್ಟಸಾಧ್ಯವೆಂದು ತಿಳಿದ ರಾಜ್ಯ ಸರ್ಕಾರ ವಾಯುಪಡೆಯ ಹೆಲಿಕಾಪ್ಟರ್‌ ಸಹಾಯ ದಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದೆ. ಶನಿವಾರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇವಾಲಯದ ವರೆಗೂ ವ್ಯಾಪಿಸಿದ್ದ ಬೆಂಕಿ, ನಿಯಂತ್ರಣಕ್ಕೆ ಸಿಕ್ಕದೇ ಬಂಡೀಪುರ ವ್ಯಾಪ್ತಿಯ ಮದ್ದೂರು ವಲಯದ ಕಣಿವೆ ಮಲ್ಲೇಶ್ವರ ಕ್ಯಾಂಪ್‌ನತ್ತ ದಾಂಗುಡಿಯಿಟ್ಟಿತ್ತು.

ಅಲ್ಲಿಂದ ಮುಂದೆ ಹುಲಿಕಟ್ಟೆ ಗುಡ್ಡದ ಮೂಲಕ ಜಾಲ್ದರೆ ಕಣಿವೆಯತ್ತ ವ್ಯಾಪಿಸಿದ ಬೆಂಕಿಯು, ಮಧ್ಯಾಹ್ನದ ವೇಳೆಗೆ ಆಲಸ್ತ್ರೀ ಕಟ್ಟೆ ಮತ್ತು ಕರಡಿಕಲ್ಲು ಬೆಟ್ಟದಲ್ಲಿ ಅತಿ ತೀಕ್ಷ್ಮವಾಗಿ ಉರಿಯಲಾರಂಭಿಸಿತು. ಸೋಮವಾರ ಸಂಜೆಯ ವೇಳೆಗೆ ಮೂಲೆಹೊಳೆ ಅರಣ್ಯ ಪ್ರವೇಶಿಸಿರುವ ಬೆಂಕಿಯು ಕೇರಳದ ಕಲ್ಲಿಕೋಟೆಯನ್ನು ಸಂಪರ್ಕಿಸುವ ಹೆದ್ದಾರಿ 766 ನ್ನು ಹಾದು ಹೋಗುವ ಸಂಭವವಿದೆ.

ಇನ್ನೆರಡು ವಲಯಗಳಿಗೂ ಹಬ್ಬುವ ಸಾಧ್ಯತೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕದೇ ಕೊನೆಯದಾಗಿ ಉಳಿದಿರುವ ಮತ್ತೆರಡು ವಲಯಗಳಾದ ಕಲ್ಕೆರೆ ಮತ್ತು ಮೊಳೆಯೂರು ಅರಣ್ಯವನ್ನು ಬೆಂಕಿಯು ನಾಶಗೊಳಿಸುವ ಸಾಧ್ಯತೆಯಿದೆ. ಓಂಕಾರ ಅರಣ್ಯ ವಲಯವೊಂದು ಮಾತ್ರ ಬೆಂಕಿಯ ಕೆನ್ನಾಲಿಗೆಗೆ ಸಿಲುಕುವ ಸಾಧ್ಯತೆ ಕಡಿಮೆ.

Advertisement

ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ಕುಂದುಕೆರೆ, ಬಂಡೀಪುರ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯದ ವಲಯಾರಣ್ಯಾಧಿಕಾರಿಗಳಿಗೂ ಸ್ಥಳೀಯ ಆದಿವಾಸಿಗಳಿಗೂ ಸಂಬಂಧ ಅಷ್ಟಕಷ್ಟೆ. ಆದಿವಾಸಿಗಳು ಬೆಂಕಿ ಬೀಳದಂತೆ ಅಥವಾ ಬೆಂಕಿ ಬಿದ್ದ ತಕ್ಷಣವೇ ಆರಿಸಲು ಪ್ರಯತ್ನಿಸುತ್ತಾರೆ. ಬೆಂಕಿರೇಖೆಗಳನ್ನು ಮಾಡಿದ್ದರೂ ಕುಂದುಕೆರೆ ವಲಯದಲ್ಲಿ ಬೆಂಕಿ ಬಿದ್ದ ನಂತರ ಬಂಡೀಪುರ ವಲಯಾರಣ್ಯಾಧಿಕಾರಿಯವರ ಕರೆಗೆ ಆದಿವಾಸಿಗಳು ಓಗೊಡಲಿಲ್ಲ.

ಈ ಪರಿಣಾಮ ಇಷ್ಟು ಅನಾಹುತ ಸಂಭವಿಸಿದೆ. ಗೋಪಾಲಸ್ವಾಮಿ ವಲಯದ ಅಧಿಕಾರಿ ಕಳೆದ ಮೂರು ದಿನಗಳಿಂದ ಅರಣ್ಯದಲ್ಲೇ ಮೊಕ್ಕಾಂ ಹೂಡಿದ್ದರೂ ಕೂಡಾ ಆದಿವಾಸಿಗಳನ್ನು ಸಂಭಾಳಿಸುವಲ್ಲಿ ವಿಫ‌ಲರಾದರು ಎಂದು ತಿಳಿದು ಬಂದಿದೆ. ಮದ್ದೂರು ವಲಯದಲ್ಲಿ ಬೆಂಕಿ ರೇಖೆ ಮಾಡದ ಕಾರಣ ಭೂಮಿಗೆ ಬಿದ್ದಿರುವ ಒಣ ಎಲೆಗಳು ಬೆಂಕಿ ಹರಡಲು ಕಾರಣವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next