Advertisement

ಪುತ್ತೂರು, ಸುಳ್ಯ ತಾಲೂಕಿಗೆ ಬಂಟ್ವಾಳದಿಂದ ನೀರು

12:55 PM Jun 27, 2024 | Team Udayavani |

ಬಂಟ್ವಾಳ: ಪುತ್ತೂರು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನೇತ್ರಾವತಿ ನದಿಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬಂಟ್ವಾಳದ ಬಾಳ್ತಿಲದಲ್ಲಿ ಜಾಕ್‌ವೆಲ್‌ ನಿರ್ಮಾಣಕ್ಕೆ ಇದೀಗ ಸ್ಥಳೀಯರಿಂದ ಅಪಸ್ವರ ಕೇಳಿಬಂದಿದೆ.

Advertisement

ಜಲಜೀವನ್‌ ಮಿಷನ್‌ ಕಾರ್ಯಕ್ರಮದಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 789 ಕೋ.ರೂ.ಗಳು
ಮಂಜೂರಾಗಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಳಿಕೆ ಮತ್ತು ಇತರ123 ಜನವಸತಿ (ವಿಟ್ಲ ಪಟ್ಟಣ ಪಂಚಾಯತ್‌
ಸೇರಿ) ಪ್ರದೇಶ, ಪುತ್ತೂರಿನ 319, ಕಡಬ ತಾಲೂಕಿನ 51 ಹಾಗೂ ಸುಳ್ಯ ತಾಲೂಕಿನ 243 ಜನವಸತಿ ಪ್ರದೇಶಗಳಿಗೆ ಕುಡಿಯುವ
ನೀರಿನ ಯೋಜನೆಗೆ ಜಾಕ್‌ವೆಲ್‌ ನಿರ್ಮಿಸಲಾಗುತ್ತಿದೆ.

ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ಕುಂದಾಯಮಜಲುನ ನೇತ್ರಾವತಿ ನದಿ ಕಿನಾರೆಯಲ್ಲಿ ಪ್ರಸ್ತುತ ಜಾಕ್‌ವೆಲ್‌ ಕಾಮಗಾರಿ ನಡೆಯುತ್ತಿದ್ದು, ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ, ಬೇಸಗೆಯಲ್ಲಿ ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಗೆ ಕುಡಿಯುವ ನೀರು ಸಾಲುತ್ತಿಲ್ಲ. ಹೀಗಾಗಿರುವ ಪುತ್ತೂರು, ಸುಳ್ಯ ಕ್ಷೇತ್ರಗಳಿಗೆ ಹೇಗೆ ನೀರು ಕೊಂಡುಹೋಗುತ್ತಾರೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಕುಂದಾಯಮಜಲಿನಲ್ಲಿ ಜಾಕ್‌ವೆಲ್‌ ನಿರ್ಮಾಣವನ್ನು ವಿರೋಧಿಸಿ ಈಗಾಗಲೇ ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ.ಗಳು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹಾಗೂ ತಹಶೀಲ್ದಾರ್‌ ಅರ್ಚನಾ ಡಿ.ಭಟ್‌ ಅವರ ಗಮನಕ್ಕೂ ತಂದಿದ್ದಾರೆ. ಸ್ಥಳೀಯವಾಗಿ ಕುಡಿಯುವ ನೀರು ಕೊಟ್ಟು ಬಳಿಕ ಉಳಿದ ಪ್ರದೇಶಗಳಿಗೆ ನೀರು ಕೊಡಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಬಂಡೆ ಸ್ಫೋಟದಿಂದ ಆತಂಕ
ಜಾಕ್‌ವೆಲ್‌ಗಾಗಿ ಹೊಂಡ ಕೊರೆಯಲಾಗುತ್ತಿದ್ದು, ಬಂಡೆ ಒಡೆಯುವುದಕ್ಕೆ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ ಸ್ಥಳೀಯ ಮನೆಗಳಲ್ಲಿ ಕಂಪನ, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದಿದೆ. ನದಿಯ ಮತ್ತೂಂದು ಕಿನಾರೆಯ ಪೂಪಾಡಿಕಟ್ಟೆ ಪ್ರದೇಶದಲ್ಲೂ ಸ್ಫೋಟದ ಸಂದರ್ಭ ಕಂಪನ ಉಂಟಾಗುತ್ತಿದೆ ಎಂಬ
ಕುರಿತು ಕೂಡ ದೂರುಗಳು ಕೇಳಿಬಂದಿದೆ.

Advertisement

ಬೇಸಗೆಯಲ್ಲಿ ಪಂಪುಸೆಟ್‌ ತೆರವು
ಪ್ರತೀ ಬೇಸಗೆಯ ಸಂದರ್ಭದಲ್ಲಿ ಬಾಳ್ತಿಲ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ನೀರಿಲ್ಲ ಎಂದು ಕೃಷಿ ಪಂಪುಸೆಟ್‌ಗಳನ್ನೂ ತೆರವು ಮಾಡುತ್ತಾರೆ. ಬೇಸಗೆಯಲ್ಲಿ ನೀರಿಲ್ಲ ಎಂದಾದರೆ ಈ ಯೋಜನೆಗೆ ನೀರು ಎಲ್ಲಿಂದ ಸಿಗುತ್ತದೆ?
*ಶಿವರಾಜ್‌ ಕಾಂದಿಲ, ಸದಸ್ಯರು, ಬಾಳ್ತಿಲ ಗ್ರಾ.ಪಂ

ಸ್ಥಳೀಯಾಡಳಿತಕ್ಕೆ ಮಾಹಿತಿ ಇಲ್ಲ
ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಗಡಿ ಪ್ರದೇಶದಲ್ಲಿ 789 ಕೋ.ರೂ.ಗಳ ಯೋಜನೆ ಅನುಷ್ಠಾನಕ್ಕೆ ಕಾಮಗಾರಿ ಆರಂಭಗೊಂಡಿದೆ. ಆದರೆ ಈ ಕುರಿತು ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಸ್ಫೋಟಕಗಳ ಮೂಲಕ ಬಂಡೆಗಳನ್ನು ಒಡೆಯಲಾಗುತ್ತಿದ್ದು, ಹಲವು ಮನೆಗಳು ಕಂಪಿಸುತ್ತಿದೆ. ಜತೆಗೆ ನರಿಕೊಂಬು, ಬಾಳ್ತಿಲಕ್ಕೆ ಬೇಸಗೆಯಲ್ಲಿ ನೀರಿನ ಅಭಾವ ತಲೆದೋರುತ್ತಿದ್ದು, ನಮ್ಮ ಗ್ರಾಮಗಳ ನೀರಿನ ಸಮಸ್ಯೆ ಪರಿಹರಿಸಿ ಬಳಿಕ ಬೇರೆ ಊರಿಗೆ ನೀರು ಕೊಂಡು ಹೋಗಲಿ ಎಂಬುದು ನಮ್ಮ ಆಗ್ರಹ.
*ಸಂತೋಷ್‌ ಶಂಭೂರು, ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.

ಸ್ಥಳೀಯವಾಗಿ ಯಾವುದೇ ಸಮಸ್ಯೆ ಇಲ್ಲ
ಸ್ಥಳೀಯ ಗ್ರಾಮಕ್ಕೆ ಕುಡಿಯುವ ನೀರು ಕಡಿಮೆಯಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದು, ಆಂತಹ ಯಾವುದೇ ಸಮಸ್ಯೆ ಇಲ್ಲ. ಜಾಕ್‌ವೆಲ್‌ಗಾಗಿ ಕಾಮಗಾರಿ ನಡೆದು ಅಪಾಯ ಇಲ್ಲದೆ ಬಂಡೆಗಳನ್ನು ಒಡೆಯುವ ಕೆಲಸ ಮಾಡಲಾಗಿದೆ. ಪ್ರಸ್ತುತ ಮಳೆಗಾಲವಾದುದರಿಂದ ಹೆಚ್ಚಿನ ಕಾಮಗಾರಿ ನಡೆಯುತ್ತಿಲ್ಲ.
*ಜಿ.ಕೆ.ನಾಯ್ಕ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬಂಟ್ವಾಳ.

*ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next