Advertisement

ಹೂಳು ತುಂಬಿದ ಹೊಳೆಗಳು; ಕೃಷಿ ಕೇತ್ರ ತತ್ತರ, ಬೇಕಿದೆ ಸರಕಾರದ ಉತ್ತರ

02:23 PM Oct 10, 2022 | Team Udayavani |

ಕೋಟ: ಕೋಟ ಹೋಬಳಿ ವ್ಯಾಪ್ತಿಯಲ್ಲಿ ಹರಿಯುವ ದೊಡ್ಡ ಹೊಳೆಗಳು ಕೃಷಿ ಜಮೀನಿಗೆ ನೀರಿನಾಶ್ರಯವಾಗಿದೆ. ಕಳೆದ ಕೆಲವು ವರ್ಷಗಳಿಂದ ಹೂಳು ತುಂಬಿ, ಸರಿಯಾಗಿ ನೀರು ಹರಿಯದ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿ ನೂರಾರು ಎಕ್ರೆ ಬೆಳೆ ನಾಶವಾಗುತ್ತಿದೆ. ಹೂಳೆತ್ತಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂಬುದು ಜನರ ಆಗ್ರಹವಾಗಿದೆ.

Advertisement

ಗಿಳಿಯಾರು- ಚಿತ್ರಪಾಡಿ ಸಮಸ್ಯೆ

ಕೋಟ ಮೂಡುಗಿಳಿಯಾರು, ಹರ್ತಟ್ಟು, ದೇವಸ ಹಾಗೂ ಚಿತ್ರಪಾಡಿ ಬೆಟ್ಲಕ್ಕಿ ತನಕ ಸುಮಾರು 500 ಎಕ್ರೆ ಜಮೀನಿನಲ್ಲಿ ಭತ್ತದ ಬೆಳೆ ಪ್ರತೀ ವರ್ಷ ನೆರೆ ಹಾವಳಿಯಿಂದ ಹಾನಿಗೀಡಾಗುತ್ತದೆ.

ಹಲವು ಮಂದಿ ಗದ್ದೆಯನ್ನು ಹಡಿಲು ಹಾಕಿದ್ದು, ನೂರಾರು ರೈತರು ಕೃಷಿಯಿಂದ ವಿಮುಖರಾಗುವ ಹಂತದಲ್ಲಿದ್ದಾರೆ. ಈ ಬಾರಿ ಮಳೆಗಾಲದಲ್ಲಿ ಸಮಸ್ಯೆಯ ತೀವ್ರತೆ ಸಾಕಷ್ಟು ಹೆಚ್ಚಿದ್ದು, ರೈತರು ಕೋಟ-ಬನ್ನಾಡಿ ಜಿಲ್ಲಾ ಮುಖ್ಯ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರು. ಸಹಾಯಕ ಆಯುಕ್ತರು ಸ್ಥಳ ಪರಿಶೀಲಿಸಿ ವರದಿ ನೀಡುವುದಾಗಿ ತಿಳಿಸಿದ್ದರು.

ಯಡ್ತಾಡಿ-ವಡ್ಡರ್ಸೆ ಹೊಳೆ ಸಮಸ್ಯೆ

Advertisement

ಹೆಗ್ಗುಂಜೆಯಲ್ಲಿ ಉಗಮಗೊಂಡು ಯಡ್ತಾಡಿ, ಕಾವಡಿಯ ಫಲವತ್ತಾದ ಕೃಷಿಭೂಮಿಯ ನಡುವೆ ಹರಿದು ಬನ್ನಾಡಿ ಹೊಳೆ ಸೇರುವ ಯಡ್ತಾಡಿ -ಕಾವಡಿ ದೊಡ್ಡ ಹೊಳೆ ಸುಮಾರು 1,000 ಹೆಕ್ಟೇರ್‌ ಕೃಷಿಭೂಮಿಗೆ ನೀರಿನಾಶ್ರಯವಾಗಿದೆ. ಹೊಳೆಯಲ್ಲಿ ಹೇರಳ ಪ್ರಮಾಣದ ಹೂಳು, ಪೊದೆಗಳು ತುಂಬಿದ್ದು ನೀರಿನ ಹರಿಯುವಿಕೆ ಅಡ್ಡಿಯಾಗಿದೆ. ಡಿಸೆಂಬರ್‌ ಮಧ್ಯ ಭಾಗದಲ್ಲೇ ಹೊಳೆಯ ನೀರು ಬತ್ತಿಹೋಗುತ್ತಿದೆ, ಮಳೆಗಾಲದಲ್ಲಿ ಚಿಕ್ಕ ನೆರೆ ಬಂದರೂ ಕೃಷಿಭೂಮಿಗಳು 4-5 ದಿನ ಜಲಾವೃತವಾಗಿ ಬೆಳೆ ನಾಶವಾಗುತ್ತದೆ.

ಕಾವಡಿ, ಮಾನಂಬಳ್ಳಿ, ವಡ್ಡರ್ಸೆ ಭಾಗದಲ್ಲಿ ಅತೀ ಹೆಚ್ಚಿನ ಸಮಸ್ಯೆ ಇದ್ದು ಮಳೆಗಾಲದಲ್ಲಿ ನೆರೆಹಾವಳಿಯಿಂದ ಹಾಗೂ ಬೇಸಗೆಯಲ್ಲಿ ನೀರಿನ ಕೊರತೆಯಿಂದ ಜನರು ತತ್ತರಿಸಿ ಕೃಷಿಭೂಮಿಯನ್ನು ಹಡಿಲು ಹಾಕುವ ಆಲೋಚನೆಯಲ್ಲಿದ್ದಾರೆ ಮತ್ತು ಹಿಂಗಾರು ಬೇಸಾಯಕ್ಕೆ ಮನಮಾಡುತ್ತಿಲ್ಲ. ಹಿಂದೆ ಕಾವಡಿ ಮತ್ತು ವಡ್ಡರ್ಸೆಯಲ್ಲಿರುವ ಕಿಂಡಿ ಅಣೆಕಟ್ಟುಗಳಿಗೆ ಒಡ್ಡು ಅಳವಡಿಸಿ ಈ ಭಾಗದಲ್ಲಿ ಬೇಸಾಯ ಮಾಡಲಾಗುತ್ತಿತ್ತು. ಇದೀಗ ಅಣೆಕಟ್ಟು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ನೀರಿನ ಸಂಗ್ರಹಣೆ ಸಾಧ್ಯವಾಗುತ್ತಿಲ್ಲ. ಹೊಸ ಕಿಂಡಿ ಅಣೆಕಟ್ಟು ನಿರ್ಮಿಸುವಂತೆ ಬೇಡಿಕೆ ಕೂಡ ಇದೆ.

ವಾರಾಹಿ ಯೋಜನೆ ಸಫಲತೆಗೆ

ವಾರಾಹಿ ಎಡದಂಡೆ ಎತ ನೀರಾವರಿ ಕಾಲುವೆ ಯೋಜನೆ ಪ್ರಸ್ತುತ ಚಾಲನೆಯಲ್ಲಿದ್ದು, ಹೆಗ್ಗುಂಜೆ, ಯಡ್ತಾಡಿ, ಕಾವಡಿ ಭಾಗದಲ್ಲಿ ಹೊಳೆಗೆ ಸಂಪರ್ಕಿಸುವ ಯೋಜನೆ ಇದೆ. ಒಂದು ವೇಳೆ ಹೊಳೆ ದುರಸ್ತಿಪಡಿಸದೆ ಕಾಲುವೆ ಜೋಡಣೆ ಮಾಡಿದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿಯಲಿದ್ದು, ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಆದ್ದರಿಂದ ಯೋಜನೆಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾದರೆ ಹೊಳೆ ಅಭಿವೃದ್ಧಿ ಅಗತ್ಯವಿದೆ. ಮನವಿ ಸಲ್ಲಿಕೆ ಹೊಳೆ ಹೂಳಿನ ಸಮಸ್ಯೆಗೆ ಸಣ್ಣ ನೀರಾವರಿ ಇಲಾಖೆಯ ಅನುದಾನ ಅಗತ್ಯವಿದೆ.

ಮನವಿ ಸಲ್ಲಿಕೆ: ಹೊಳೆ ಹೂಳಿನ ಸಮಸ್ಯೆಗೆ ಸಣ್ಣ ನೀರಾವರಿ ಇಲಾಖೆಯ ಅನುದಾನ ಅಗತ್ಯವಿದೆ. ಹೀಗಾಗಿ ಅ. 10ರಂದು ಆಗಮಿಸುವ ಸಚಿವ ಜೆ.ಸಿ. ಮಾಧುಸ್ವಾಮಿಯವರಿಗೆ ಮನವಿ ಸಲ್ಲಿಸಲಿದ್ದೇವೆ. ಸಮಸ್ಯೆ ಬಗೆಹರಿಯದಿದ್ದರೆ ಬಹುತೇಕ ರೈತರು ಕೃಷಿಯಿಂದ ದೂರವಾಗುವುದು ಖಂಡಿತ. –ರಾಘವೇಂದ್ರ ಶೆಟ್ಟಿ ಹಂಡಿಕೆರೆ, ರೈತರು

Advertisement

Udayavani is now on Telegram. Click here to join our channel and stay updated with the latest news.

Next