Advertisement

ನದಿಗೆ ನೀರು; ಕುಡಿವ ನೀರಿಗಿಲ್ಲ ಆತಂಕ

03:12 PM Mar 26, 2019 | Team Udayavani |
ಹರಿಹರ: ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿರುವುದರಿಂದ ಪ್ರಸಕ್ತ ಬೇಸಿಗೆಯಲ್ಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಯೋಜನೆಗಳಿಗೆ ಆತಂಕ ಸದ್ಯಮಟ್ಟಿಗೆ ದೂರವಾಗಿದೆ. ಮಾ. 19ರಿಂದ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಶುಕ್ರವಾರ ತಾಲೂಕಿನ ಗಡಿ ಪ್ರವೇಶಿರುವ ನೀರು ನದಿ ಮಟ್ಟವನ್ನು ಹೆಚ್ಚಿಸಿದೆ. ನಗರ ವ್ಯಾಪ್ತಿಯಲ್ಲಿ ನದಿ ನೀರಿನ ಹರಿವು ಮುಂಚೆಗಿಂತ ಎರಡೂವರೆ ಅಡಿಯಷ್ಟು ಎತ್ತರಕ್ಕೆ ಹರಿಯುತ್ತಿದೆ.
ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ನಾಲ್ಕು ಹಾಗೂ ನಗರ ಪ್ರದೇಶಕ್ಕೆ ನೀರು ಪೂರೈಸುವ
ಯೋಜನೆಗಳಿಗೆ ನದಿ ನೀರೆ ಆಧಾರವಾಗಿದೆ. ಕೃಷಿಗಾಗಿ ಚಾನಲ್‌ನಲ್ಲಿ ಹರಿಸಿರುವ ಸೀಪೇಜ್‌ ನೀರು ಸಣ್ಣಗೆ ನದಿಗೆ
ಸೇರುತ್ತಿದ್ದದ್ದೆ ಈ ಯೋಜನೆಗಳಿಗೆ ಇಷ್ಟು ದಿನ ನೀರು ಪೂರೈಸಿತು. ಇನ್ನೂ ಕೆಲ ದಿನ ಪರಿಸ್ಥಿತಿ ಹೀಗೆ ಇದ್ದಿದ್ದರೆ ಈ
ಯೋಜನೆಗಳಿಗೆ ನೀರು ಸಿಗುವುದು ಕಷ್ಟವಾಗುತ್ತಿತ್ತು. ಈಗ ನೀರು ಹರಿದಿರುವುದು ಗ್ರಾಮೀಣ ಹಾಗೂ ನಗರ ನೀರು
ಸರಬರಾಜಿನ ಹೊಣೆ ಹೊತ್ತ ಅಧಿ ಕಾರಿಗಳಿಗೆ ಹಾಗೂ ಜನತೆಯಲ್ಲಿ ಸಂತಸ ಮೂಡಿಸಿದೆ.
ಹಿಂದೆಲ್ಲಾ ಬೇಸಿಗೆಯಲ್ಲಿ ಮೈಲಾರ ಲಿಂಗೇಶ್ವರ ಜಾತ್ರೆಗೆ ಕೊನೆಯದಾಗಿ ಜಲಾಶಯದಿಂದ ನೀರು ಬಿಡುತ್ತಿದ್ದು, ನಂತರ
ಮಳೆ ಸುರಿದರೆ ಮಾತ್ರ ನೀರು ಕಾಣುವಂತಿತ್ತು. ಆದರೆ, ಭದ್ರಾ ಜಲಾಶಯದಲ್ಲಿ ನೀರು ಲಭ್ಯವಿರುವುದರಿಂದ ಮುಂದಿನ
ಎರಡು ತಿಂಗಳ ಬೇಸಿಗೆಲ್ಲಿ ನೀರಿನ ಬವಣೆ ಎದುರಿಸುವುದು ತಪ್ಪಿದಂತಾಗಿದೆ. ತಾಲೂಕಿನ ನದಿಗುಂಟ ಪಂಪ್‌ಸೆಟ್‌
ಮೂಲಕ ನೀರು ಹಾಯಿಸಿಕೊಳ್ಳುವ ರೈತರು ನದಿ ನೀರು ಕ್ಷೀಣಿಸಿದಂತೆ ಮೋಟರ್‌ ಪಂಪ್‌ಗ್ಳನ್ನು ಸ್ಥಳಾಂತರಿಸಬೇಕಿತ್ತು.
ದೊಡ್ಡ ಗುಂಡಿಗಳನ್ನು ತೆಗೆದು ವರ್ತಿ ನೀರು ಬರುವಂತೆ ಮಾಡಿ ಪಂಪ್‌ನ ಪುಟ್‌ಬಾಲ್‌ಗೆ ನೀರುಣಿಸಬೇಕಿತ್ತು. ಪ್ರಸಕ್ತ
ಬೇಸಿಗೆಯಲ್ಲಿ ಆ ಸಮಸ್ಯೆ ಇಲ್ಲದಾಗಿದೆ.
ಏ. 5ರವರೆಗೆ ನದಿಗೆ ನೀರು
ಏ. 5ರವರೆಗೆ ನೀರು ಜಲಾಶಯದಿಂದ ಹರಿಯಲಿದೆ. ಕೃಷಿ ಕಾಲುವೆಗಳಿಗೆ ಮೇ ಮೊದಲ ವಾರದವರೆಗೆ ಹರಿಯಲಿದೆ. ಮೇ ತಿಂಗಳಲ್ಲಿ ಒಮ್ಮೆ ಜಲಾಶಯದಿಮದ ನೀರು ಹರಿಸಿದರೆ ಈ ಬೇಸಿಗೆಯಲ್ಲಿ ನೀರಿನ ತೊಂದರೆಯಾಗುವುದು ತಪ್ಪುತ್ತದೆ. ತಾಲೂಕಿನ ಗ್ರಾಮೀಣ ಭಾಗಕ್ಕೆ ನೀರು ಹರಿಸಲು ನಾಲ್ಕು ಯೋಜನೆಗಳಿವೆ.
 ಕೃಷ್ಣಪ್ಪ ಜಾಡರ್‌, ಎಇಇ, ಗ್ರಾಮೀಣ ನೀರು ಸರಬರಾಜು ಇಲಾಖೆ.
ಗ್ರಾಮದೇವತೆ ಉತ್ಸವಕ್ಕೂ ಅನುಕೂಲ
ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಡಿಯುವ ನೀರು ಸರಬರಾಜು ಯೋಜನೆಗೆ ಅನುಕೂಲವಾಗಿದೆ. ಕಾಲುವೆಗಳ ಸೀಪೇಜ್‌ ನೀರಿನೊಂದಿಗೆ ಈ ನೀರು ಹರಿದಿರುವುದು ಸದ್ಯಕ್ಕೆ 15 ದಿನಗಳವರೆಗಿನ ತೊಂದರೆ ನಿವಾರಿಸಿದೆ. ಇದು ನಗರದ ಗ್ರಾಮದೇವತೆ ಉತ್ಸವಕ್ಕೂ ಅನುಕೂಲವಾಯಿತು.
 ಎಸ್‌.ಲಕ್ಷ್ಮೀ, ನಗರಸಭೆ ಪೌರಾಯುಕ್ತರು
Advertisement

Udayavani is now on Telegram. Click here to join our channel and stay updated with the latest news.

Next