ದಾವಣಗೆರೆ: ತುಂಗಭದ್ರಾ ನದಿಯಿಂದ 22 ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಅವೈಜ್ಞಾನಿಕವಾಗಿದ್ದರಿಂದ ನಿಗದಿತ ಸಮಯದಲ್ಲಿ ಯೋಜನೆ ಅನುಷ್ಠಾನವಾಗಲಿಲ್ಲ. ಇದೀಗ ಶಾಶ್ವತ ಕಾಮಗಾರಿ ಪ್ರಗತಿಯಲ್ಲಿದ್ದು, 2 ವಾರದಲ್ಲಿ ಕೆರೆಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.
ಸಿರಿಗೆರೆ ತರಳಬಾಳು ಬೃಹನ್ಮಠದ ಡಾ|ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರೊಂದಿಗೆ ರಾಜನಹಳ್ಳಿ ಜಾಕ್‌ವೆಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ದಾವಣಗೆರೆ ಮತ್ತು ಜಗಳೂರು ತಾಲೂಕಿನ 22 ಕೆರೆಗಳಿಗೆ ನೀರು ಹರಿಸುವ ಮಹಾತ್ವಾಕಾಂಕ್ಷೆಯ ಈ ಯೋಜನೆ ಪ್ರಾರಂಭದಲ್ಲೇ ದೋಷದಿಂದ ಕೂಡಿದ ಕಾಮಗಾರಿಯಿಂದಾಗಿ ರೈತರು ತೊಂದರೆ ಅನುಭವಿಸುವಂತಾಯಿತು ಎಂದರು.
ಕಳೆದ ವರುಷ ಸ್ವಂತ ವೆಚ್ಚದಲ್ಲಿ ಪಂಪ್‌ಸೆಟ್ ಅಳವಡಿಸಿ ನೀರು ಸರಬರಾಜು ಮಾಡಲಾಯಿತು. ಆದರೆ ಮಳೆ ಇಲ್ಲದ ಕಾರಣ ನದಿಪಾತ್ರದಲ್ಲಿ ನೀರು ದೊರೆಯದೇ ಸಮಸ್ಯೆ ಉಂಟಾಯಿತು. ಈ ಬಾರಿಯೂ ಸಹ ಮುಂಗಾರು ಮಳೆ ಸಕಾಲದಲ್ಲಿ ಬಾರದೇ ನೀರು ಸರಬರಾಜಿಗೆ ಅಡ್ಡಿಯಾಯಿತು. ಇದೀಗ ಶಾಶ್ವತ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೇ ದಿನದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ನೀರು ಹರಿಸಲಾಗುವುದು ಎಂದರು.
ನೀರು ಹರಿಸುವ ಮುನ್ನ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಎಲ್ ಅಂಡ್ ಟಿ ಕಂಪನಿಯೂ ಸಹ ನೀರು ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಲು ಸಚಿವರು ಸಂಬಂಧಿತರಿಗೆ ಸೂಚಿಸಿದರು. ತರಳಬಾಳು ಶ್ರೀಗಳು ಮಾತನಾಡಿ, ಸಚಿವರು ಇನ್ನು 10 ದಿನದಲ್ಲಿ ನೀರು ಹರಿಸುವ ಭರವಸೆ ನೀಡಿದ್ದಾರೆ. ಈ ಹಿಂದೆ ಕೆಲವರ ತಪ್ಪಿನಿಂದಾಗಿ ಸಮಸ್ಯೆ ಉದ್ಭವಿಸಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ನಡೆದಿದೆ ಎಂದರು.
ಚನ್ನಗಿರಿಯ ಉಬ್ರಾಣಿ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಒಂದು ಕೆರೆ ತುಂಬಿದ ನಂತರ ಮತ್ತೂಂದು ಕೆರೆಗೆ ನೀರು ಹರಿಸಬೇಕಿದೆ. ಈ ಬಾರಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವ ಕಾರಣ ಒಂದು ಕೆರೆ ತುಂಬುವ ತನಕ ಕಾಯದೇ ಕೆರೆ ಕೊಡಿ ಬಳಿ ತಾತ್ಕಾಲಿಕ ತೂಬು ನಿರ್ಮಿಸಿ ಒಂದು ಕೆರೆ ಅರ್ಧ ಆದ ತಕ್ಷಣ ಮತ್ತೂಂದು ಕೆರೆಗೆ ನೀರು ಹರಿಸಲು ಕ್ರಮ ವಹಿಸಲಿದ್ದಾರೆ ಎಂದರು.
ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಬಸವಂತಪ್ಪ, ಮಾಜಿ ಸದಸ್ಯರಾದ ಬೇತೂರು ಕರಿಬಸಪ್ಪ, ನಾಗೇಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗಂಗನಕಟ್ಟೆ ಗುರುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪಾಟೀಲ್, ಸಹಾಯಕ ಕಾರ್ಯಪಾಲಕ ಅಭಿಯಂತರ ಕೊಟ್ರೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.