Advertisement

ಕೈಗಾರಿಕೆಗೆ ನೀರು: ಅಂತರ್ಜಲ ಪ್ರಾಧಿಕಾರ ಎನ್‌ಒಸಿ ಕಡ್ಡಾಯ , ತಪ್ಪಿದಲ್ಲಿ ಒಂದು ಲಕ್ಷ ರೂ. ದಂಡ !

11:26 PM Dec 01, 2022 | Team Udayavani |

ಉಡುಪಿ : ಅಂತರ್ಜಲ ಸಂರಕ್ಷಣೆ ಮತ್ತು ಮಿತ ಬಳಕೆಗಾಗಿ ರಾಷ್ಟ್ರೀಯ ಹಸುರು ಪೀಠ  (ಎನ್‌ಜಿಟಿ) ದ ನಿರ್ದೇಶನ ಮೇರೆಗೆ ಕೇಂದ್ರ ಸರಕಾರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಅಂತರ್ಜಲ ಮಂಡಳಿ ಮಾರ್ಗಸೂಚಿಯನ್ನು ರೂಪಿಸಿದ್ದು, ಇದರನ್ವಯ ಕೈಗಾರಿಕೆ ನೀರು ಬಳಕೆಗಾಗಿ ಅಂತರ್ಜಲ ಪ್ರಾಧಿಕಾರದ ನಿರಾಪೇಕ್ಷಣ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯವಾಗಿದೆ.

Advertisement

ಅಂತರ್ಜಲ ಅಧಿನಿಯಮದ ಅಡಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಅಂತರ್ಜಲ ಪ್ರಾಧಿಕಾರ ರಚನೆಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ರಾಜ್ಯ ಮಟ್ಟದ ಸಮಿತಿಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ನಿತ್ಯ 10 ಸಾವಿರ ಲೀಟರ್‌ ಮೇಲ್ಪಟ್ಟು ನೀರಿನ ಬಳಕೆ ಮಾಡುತ್ತಿದ್ದರೆ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆ ಘಟಕಗಳಲ್ಲಿ ಎಷ್ಟೇ ಪ್ರಮಾಣದಲ್ಲಿ ಬಳಸುತ್ತಿದ್ದರೂ ಪ್ರಾಧಿಕಾರದಿಂದ ಎನ್‌ಒಸಿ ಕಡ್ಡಾಯ.

ನೀರನ್ನು ಕಚ್ಚಾ ವಸ್ತುವಾಗಿ ಬಳಸುವ ಘಟಕಗಳಾದ ಐಸ್‌ಪ್ಲಾಂಟ್‌ ಮತ್ತು ಮಿನರಲ್‌ ವಾಟರ್‌ ಘಟಕಗಳಿಗೂ ಇದು ಅನ್ವಯ.

ದಿನವಹಿ 25 ಸಾವಿರ ಲೀ. ನೀರು ಬಳಕೆಯಾಗುತ್ತಿದ್ದರೆ ಇದರ ಎನ್‌ಒಸಿಯನ್ನು ಜಿಲ್ಲಾ ಮಟ್ಟದ ಪ್ರಾಧಿಕಾರದಿಂದ ಪಡೆಯಬೇಕು. 25 ಸಾವಿರ ಲೀ. ಮೇಲ್ಪಟ್ಟು ಬಳಸುತ್ತಿದ್ದಲ್ಲಿ ರಾಜ್ಯ ಪ್ರಾಧಿಕಾರದಿಂದ ಪಡೆಯಬೇಕು ಮತ್ತು ಇದಕ್ಕಾಗಿ ಜಿಲ್ಲಾ ಪ್ರಾಧಿಕಾರದಿಂದ ಶಿಫಾರಸು ಪತ್ರ ಕಳುಹಿಸಬೇಕು.

ಎನ್‌ಒಸಿಗೆ ಅರ್ಜಿ ಸಲ್ಲಿಸಿದ ಅನಂತರ ಅಂತರ್ಜಲ ಮಂಡಳಿಯ ಹಿರಿಯ ಭೂ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸುತ್ತಾರೆ. ಅಂತರ್ಜಲ ಬಳಕೆ ಕಡಿಮೆ ಮಾಡುವ ವಿಧಾನ ಮತ್ತು ಜಲ ಮರುಪೂರಣ ವ್ಯವಸ್ಥೆ ಅಳವಡಿಸಿರವ ಬಗ್ಗೆ ವರದಿ ಮಾಡಿದ ಬಳಿಕ ಎನ್‌ಒಸಿ ನೀಡಲಾಗುತ್ತದೆ.

Advertisement

ಅಂತರ್ಜಲ ಬಳಕೆಗೆ ಶುಲ್ಕ
50 ಸಾವಿರ ಲೀ. ವರೆಗೆ ಬಳಸುವ ಕೈಗಾರಿಕೆಗಳು ಪ್ರತೀ ಸಾವಿರ ಲೀ.ಗೆ 1 ರೂ. ಶುಲ್ಕ ಪಾವತಿಸಬೇಕು. 51 ಸಾವಿರ ಲೀ. ಮೇಲ್ಪಟ್ಟು 2 ಲಕ್ಷ ಲೀ. ವರೆಗೆ ಬಳಸಿದಲ್ಲಿ ಒಂದು ಸಾವಿರ ಲೀ.ಗೆ 3 ರೂ. ಶುಲ್ಕವನ್ನು ಅಂತರ್ಜಲ ಮಂಡಳಿಗೆ ಪಾವತಿಸಬೇಕು.

ಲಕ್ಷ ರೂ. ದಂಡ
ನೀರಿನ ಸಂರಕ್ಷಣೆ ಮತ್ತು ಜಲಮರುಪೂರಣ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ರೂಪಿಸಲು ಕೇಂದ್ರ ಸರಕಾರ ಈ ಮಾರ್ಗಸೂಚಿ ಜಾರಿಗೆ ತಂದಿದೆ. ಜಿಲ್ಲೆಯ 8 ಕೈಗಾರಿಕೆಗಳು ಎನ್‌ಒಸಿಗೆ ಅರ್ಜಿ ಸಲ್ಲಿಸಿವೆ. ಎಲ್ಲ ಕೈಗಾರಿಕೆ ಘಟಕಗಳಿಗೆ ನೋಟಿಸ್‌ ನೀಡುವ ಪ್ರಕ್ರಿಯೆ ನಡೆಯುತ್ತಿದೆ. 32 ಕೈಗಾರಿಕೆಗಳಿಗೆ ನೋಟಿಸ್‌ ನೀಡಲಾಗಿದೆ. ಎನ್‌ಒಸಿ ಪಡೆಯದೆ ನೀರಿನ ಬಳಕೆ ಆಗುತ್ತಿದ್ದಲ್ಲಿ ಕನಿಷ್ಠ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಅಂತರ್ಜಲ ಇಲಾಖೆಯ ಭೂ ವಿಜ್ಞಾನಿಗಳು ಮಾಹಿತಿ ನೀಡಿದರು.

ಎನ್‌ಜಿಟಿ ನಿರ್ದೇಶನದ ಮೇರೆಗೆ ಕೇಂದ್ರ ಸರಕಾರ ರೂಪಿಸಿದ ಮಾರ್ಗಸೂಚಿಯಂತೆ 10 ಸಾವಿರ ಲೀ. ವರೆಗೆ ಬಳಕೆ ಮಾಡುವ ಎಲ್ಲ ಕೈಗಾರಿಕೆ ಘಟಕಗಳು ಎನ್‌ಒಸಿ ಪಡೆಯುವುದು ಕಡ್ಡಾಯ. ಈ ಬಗ್ಗೆ ಸಣ್ಣ, ಮಧ್ಯಮ-ಬೃಹತ್‌ ಕೈಗಾರಿಕೆ ಘಟಕದ ಉದ್ಯಮಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅಂತರ್ಜಲ ಸಂರಕ್ಷಣೆ, ಮಿತ ಬಳಕೆ ಇದರ ಮೂಲ ಉದ್ದೇಶವಾಗಿದೆ.
– ಡಾ| ದಿನಕರ್‌ ಶೆಟ್ಟಿ, ಹಿರಿಯ ಭೂ ವಿಜ್ಞಾನಿ, ಅಂತರ್ಜಲ ಇಲಾಖೆ, ಉಡುಪಿ

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next