Advertisement

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವರ್ಷದಲ್ಲಿ ಕಾಲುವೆಗಳಿಗೆ ನೀರು

02:53 PM Feb 03, 2018 | |

ತಾಳಿಕೋಟೆ: ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿಸಿ ಕೊಣ್ಣೂರ ಭಾಗದ ಕಾಲುವೆಗಳಿಗೆ ಒಂದೇ ವರ್ಷದಲ್ಲಿ ನೀರು ಹರಿಸುವುದಾಗಿ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜೆಡಿಎಸ್‌ ಯುವ ಧುರೀಣ ಸಿ.ಬಿ. ಅಸ್ಕಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆಲಮಟ್ಟಿ, ನಾರಾಯಣಪುರ ಜಲಾಶಯಕ್ಕೆ ಈ ಭಾಗದ ರೈತರು ಜಮೀನು ಕಳೆದುಕೊಂಡಿದ್ದು ಅವರ ಅಳಿದುಳಿದ ಜಮೀನುಗಳಿಗೆ ನೀರು ಹರಿಸುವ ಕೆಲಸ ಇನ್ನೂವೆಗೆ ರಾಜ್ಯ ಸರಕಾರದಿಂದ ಆಗಿಲ್ಲ ಎಂದು ಹರಿಹಾಯ್ದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರಕಾರದಿಂದ ಆಗುವುದಿಲ್ಲ. ಆದರೆ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ, ಉದ್ಯಮಿಗಳ ಕೋಟ್ಯಂತರ ರೂ. ಸಾಲ ಮನ್ನಾ ಮಾಡಲು ಮುಂದಾಗುತ್ತಿದ್ದಾರೆ. ಇದು ಸರಕಾರಗಳು ರೈತರ ಮೇಲಿಟ್ಟಿರುವ ಕಾಳಜಿಯೇ ಎಂದು ಪ್ರಶ್ನಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಲ್ಲಿ 181 ಪ್ರಥಮ ದರ್ಜೆ ಕಾಜೇಜು ಮಂಜೂರು ಮಾಡಿದ್ದೇನೆ. 160 ಜ್ಯೂನಿಯರ್‌ ಕಾಲೇಜು ತೆರೆಯಲು ಅನುಮತಿ, 500ಕ್ಕೂ ಹೆಚ್ಚು ಪ್ರೌಢಶಾಲೆಗೆ ಮಂಜೂರಾತಿ ನೀಡಿದ್ದು 55 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ರಾಜ್ಯದ ಕಾಂಗ್ರೆಸ್‌ ಸರಕಾರದಲ್ಲಿ ಕಳೆದ 10 ವರ್ಷದಲ್ಲಿ ಒಬ್ಬ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು. ಜೆಡಿಎಸ್‌ ಯುವ ಧುರೀಣ ಸಿ.ಬಿ. ಅಸ್ಕಿ ಮಾತನಾಡಿ, ನಮಗೆ ಯಾರನ್ನೂ ಟೀಕಿಸುವ ಅವಶ್ಯಕತೆ ಇಲ್ಲ. ಕೊಣ್ಣೂರ ಭಾಗದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಈಗ ನಡೆದಿರುವ ಕಾಲುವೆ ಕಾಮಗಾರಿ ಬೇಗನೆ ಮುಗಿಯಬೇಕಾಗಿದೆ.
 
ಈ ಭಾಗದಲ್ಲಿ ಪಪೂ ಕಾಲೇಜು, ಪಾಲಿಟೆಕ್ನಿಕ್‌ ಕಾಲೇಜುಗಳಿಲ್ಲ. ಚಿಮ್ಮಲಗಿ ಬಿಸ್ಕಿಂ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಮುಖ್ಯ ಕಾಲುವೆ ಕಾಮಗಾರಿ ನಡೆದಿದ್ದು ಆದಷ್ಟು ಬೇಗನೆ ವಿತರಣಾ ಕಾಲುವೆ, ಸೀಳು ಗಾಲುವೆ ಮತ್ತು ವಲಗಾಲುವೆ ಕಾಮಗಾರಿಗಳು ಶೀಘ್ರ ಟೆಂಡರ್‌ ಕರೆದು ರೈತರ ಜಮೀನುಗಳಿಗೆ ನೀರು ಹರಿಸುವಂತಹ ಕಾರ್ಯವಾಗಬೇಕೆಂದರು. ಇದೇ ವೇಳೆ ಸಿ.ಬಿ. ಅಸ್ಕಿ ಹಾಗೂ ಅಭಿಮಾನಿಗಳು ಮಾಜಿ ಸಿಎಂ ಎಚಿxಕೆ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಶಾಂತಗೌಡ ಪಾಟೀಲ ನಡಹಳ್ಳಿ, ಗುರುನಾಥಗೌಡ ಬಿರಾದಾರ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ, ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ಶಿವನಗೌಡ ತಾಳಿಕೋಟಿ, ದಯಾನಂದ ಕುಪ್ಪಿ, ಮಹ್ಮದ್‌ ವಾಲೀಕಾರ, ಬಂದು ಮಡಿಕೇಶ್ವರ, ಶರಣಗೌಡ ಅಸ್ಕಿ, ಚಿದಾನಂದ ಕೆಸರಭಾವಿ, ಸೋಮರಾಯ ಪೂಜಾರಿ, ಜಟ್ಟೆಪ್ಪ ಕೋಟಿ, ಮರೇಪ್ಪ ಮಾದರ, ಶಿವಶರಣ ಹಡಪದ, ಗಣಪತಿ ಮುದ್ದಾಪೂರ, ಶಿವಪ್ಪ ತಿರಕನಹಳ್ಳಿ, ಸಿದ್ದನಗೌಡ ಪಾಟೀಲ, ಸಂಗಮೇಶ ಪಾಟೀಲ, ಸೋಮನಗೌಡ ಮೇಟಿ ಇದ್ದರು.

Advertisement

ಕಳೆದ ಇಪ್ಪತ್ತೈದು ವರ್ಷದಿಂದ ಜನರ ಸೇವೆ ಮಾಡಿರುವ ನಿಮ್ಮ ಧಣಿಯವ್ರನ್ನು ಈ ಸಲ ಮನೆಯಲ್ಲಿ ಕೂರಿಸಿ ರೆಸ್ಟ್‌ ಮಾಡಲು ಬಿಡಿ. ಜನತೆ ಸೇವೆ ಮಾಡಿ ಅವರು ಸುಸ್ತಾಗಿದ್ದು ವಿಶ್ರಾಂತಿ ಅಗತ್ಯವಾಗಿದೆ.
 ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next