Advertisement

ನೀರು ಇಟ್ಟರು…ಪಕ್ಷಿಗಳ ನೀರಗಂಟಿ

12:19 PM Jul 28, 2018 | |

 ಬೇಸಿಗೆ ಬಂದರೆ ಶಿವಮೊಗ್ಗದ ಚಟ್ನಳ್ಳಿಯ ನಾಗರಾಜರಿಗೆ ಖುಷಿ. ಕಾರಣ, ಇವರು ಪಕ್ಷಿಗಳಿಗೆ ಗೂಡು ನಿರ್ಮಿಸೋದಿಲ್ಲ. ಬದಲಿಗೆ ನೀರನ್ನು, ಕೊಡುತ್ತಾರೆ.  ಇದೆಂಥ ಮಾತು? ಪಕ್ಷಿಗಳಿಗೆ ನೀರು ಕುಡಿಸೋದು, ಆನೆಗೆ ಸ್ನಾನ ಮಾಡಿಸೋದು ಎರಡೂ ಒಂದೇ ಅನ್ನಬೇಡಿ. 

Advertisement

ಇದು ಸಾಧ್ಯ ಇದು ಸಾಧ್ಯವಯ್ಯಾ.. ಅಂತ ಇವರು ತೋರಿಸಿದ್ದಾರೆ. ಸುಡು ಬೇಸಿಗೆ ಬಂದರೆ, ಹೆಗಲಿಗೆ ಕ್ಯಾಮರ ಏರಿಸಿಕೊಂಡು, ಕೈಯಲ್ಲಿ ತಟ್ಟೆ, ನೀರಿನ ಬಾಟಲಿ ಹಿಡಿದು ನಾಗರಾಜ್‌ ಶೆಟ್ಟಹಳ್ಳಿ ಕಾಡಿನ ಕಡೆಗೆ ಹೊರಟೇ ಬಿಡುತ್ತಾರೆ. ಅಲ್ಲಿ ಪಕ್ಷಿಗಳು ಓಡಾಡುವ ಒಂದಷ್ಟು ಜಾಗವನ್ನು ಗುರುತಿಸಿ,  ಒಂದಷ್ಟು ಮರಗಳಿಗೆ ಬಾಟಲಿ, ತಟ್ಟೆಯನ್ನು ನೇತು ಹಾಕಿ ಬರುತ್ತಾರೆ. ಒಂದೆರಡು ದಿನ  ಬಿಟ್ಟು ಮತ್ತೆ ಹೋಗಿ ನೀರು ಹೋಯ್ದು ಬರುವುದನ್ನು ಮರೆಯುವುದಿಲ್ಲ.  ತಟ್ಟೆಯ ಒಂದು ಭಾಗದಲ್ಲಿ ಸಣ್ಣ ಕಲ್ಲು ಇಟ್ಟು ಬಂದಿರುತ್ತಾರೆ. ಅದರ ಮೇಲೆ  ಹಿಕ್ಕೆ ಏನಾದರೂ ಬಿದ್ದಿದ್ದರೆ ಪಕ್ಷಿ ನೀರು ಕುಡಿದು ಹೋಗಿದೆ ಅನ್ನೋ ಕುರುಹು ಸಿಕ್ಕಿ, ಮತ್ತಷ್ಟು ಸಂತಸಗೊಳ್ಳುತ್ತಾರೆ. 

ಈ ಐಡಿಯಾ ಏಕೆ ಬಂತು?
ಇದಕ್ಕೆ ಉತ್ತರ ನಾಗರಾಜ ಚಟ್ನಳ್ಳಿ ಹೇಳುತ್ತಾರೆ ಕೇಳಿ; ಒಂದು ಸಲ ದಾಂಡೇಲಿಯ ಗಣೇಶ ಗುಡಿಯಲ್ಲಿ  ಫೋಟೋ ಶೂಟ್‌ ಮಾಡೋಕೆ ಹೋಗಿದ್ವಿ. ಅಲ್ಲಿ ಬೌಲ್‌ನಲ್ಲಿ ಪಕ್ಷಿಗಳಿಗೆ ನೀರು ಇಟ್ಟಿದ್ದರು. ಅವು ಬೆಳಗ್ಗೆಯಿಂದ  ಸಂಜೆ ತನಕ ಬರೋದು, ಆಟ ಆಡೋದು, ನೀರು ಕುಡಿಯೋದು ಹೀಗೆ ಮಾಡುತ್ತಲೇ ಇದ್ದವು. ಹೀಗೆ ನೀರಿಗೆ ಅಂಟಿಕೊಂಡಿದ್ದ ಪಕ್ಷಿಗಳನ್ನು ನೋಡಿ ಖುಷಿಯಾಯಿತು.  ನಂತರ ಬೇಸಿಗೆ ಬಂತು. ಮತ್ತೆ ಫೋಟೋ ತೆಗೆಯಲು ನಮ್ಮ ಶೆಟ್ಟಿಹಳ್ಳಿ ಅರಣ್ಯಕ್ಕೆ ಹೋದರೆ ಪಕ್ಷಿಗಳು ಬಾಯಾರಿ ಒದ್ದಾಡುತ್ತಿದ್ದವು. ಅದನ್ನು ನೋಡಿ ದಾಂಡೇಲಿಯಲ್ಲಿ ನೀರು ಇಟ್ಟಿದ್ದ ಬೌಲ್‌ಗ‌ಳು ನೆನಪಿಗೆ ಬಂದವು. ಬೌಲ್‌ನಲ್ಲಿ ನೀರು ತುಂಬಿಸಿ ಇಟ್ಟರೆ ಪಕ್ಷಿಗಳು ಬಾಯಾರಿಕೆ ತಣಿಸಬಹುದು ಅನ್ನಿಸಿತು.  ಮೊದಲು ನಮ್ಮ ತಾವರೆ ಚಟ್ನಳ್ಳಿ ಮನೆಯ ಹಿಂದೆ ಅರಳೀ ಮರ ಇದೆ. ಅದರ ಮೇಲೆ ತಟ್ಟೆಯಲ್ಲಿ ನೀರು ಹಾಕಿ ಇಟ್ಟೆ.  ಅದು ಗಾಳಿಗೆ ಆ ಕಡೆ ಈಕಡೆ ಓಲಾಡುತ್ತಾ ನೀರು ಪೋಲಾಯಿತು. ಆಮೇಲೆ ಮಾಡಿದ್ದೇ ಬಾಟಲಿ ಐಡಿಯಾ. ತಟ್ಟೆಯ ಮಧ್ಯೆ ಬಾಟಲಿಯನ್ನು ಇಟ್ಟು ಅದಕ್ಕೆ ನಾಲ್ಕು ದಿಕ್ಕಿನಿಂದ ಕಂಬಿಯಲ್ಲಿ ಕಟ್ಟಬೇಕು.  ಬಾಟಲ ಕ್ಯಾಪ್‌ ನೀರಲ್ಲಿ ಮುಳುಗಿರುತ್ತದೆ. ಅಲ್ಲಿ ಸಣ್ಣ ತೂತು ಮಾಡಿರ್ತೀವಿ. ವೋಲಿಂಗ್‌ ಮೇಲೆ ನೀರು ಇದ್ದರೆ ತಟ್ಟೆಗೆ ನೀರು ಬೀಳ್ಳೋದಿಲ್ಲ. ಕಡಿಮೆ ಇದ್ದರೆ ನೀರು ಸರಬರಾಜಾಗುತ್ತದೆ. ಹೀಗೆ ಮಾಡಿ ಶೆಟ್ಟಿ ಹಳ್ಳಿಯ ಒಂದಷ್ಟು ಕಡೆ ಪಕ್ಷಿಗಳಿಗೆ ನೀರುಣಿಸಿದ ಹೆಮ್ಮೆ ನನ್ನದು’ ಅಂತಾರೆ ನಾಗರಾಜ್‌.

ಈ ವಿಚಾರವನ್ನು ಫೇಸ್‌ಬುಕ್ಕಿನಲ್ಲಿ ಹಾಕಿದರು. “ಅಯ್ಯೋ ರಾಮಾ, ನಾವೂ ಈ ಕೆಲಸ ಮಾಡಬಹುದಲ್ಲಾ’ ಅಂತ ಯೋಚಿಸಿ, ಒಂದಷ್ಟು ಜನ ಓಡಿ ಬಂದು, ನಾಗರಾಜರ ಜೊತೆ ಸೇರಿ, ಕಾಡಲ್ಲಿ ತಟ್ಟೆ ಬಾಟಲು ಇಟ್ಟು, ನೀರು ಹಾಕಿದ್ದು ಉಂಟು. 

 ಕಟ್ಟೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next