ಹೊನ್ನಾಳಿ: ತಮ್ಮ ಸ್ವಂತ ಹಣ ಖರ್ಚು ಮಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಬತ್ತಿ ಹೋಗಿದ್ದ ಕೆರೆಯೊಂದನ್ನು ತುಂಬಿಸುವ ಮೂಲಕ ನಿವೃತ್ತ ಕಂದಾಯಾಧಿ ಕಾರಿಯೊಬ್ಬರು ಆಧುನಿಕ ಭಗೀರಥರೆನಿಸಿಕೊಂಡಿದ್ದಾರೆ. ತಾಲೂಕಿನ ಕುಂಕುವ ಗ್ರಾಮದ ಗೌಡನ ಕೆರೆಗೆ ಸುಮಾರು ಮೂರು ಕಿಮಿ ಪೈಪ್‌ಲೈನ್ ಅಳವಡಿಸಿ ನೀರು ತುಂಬಿಸಿದ ನಿವೃತ್ತ ಕಂದಾಯಾಧಿಕಾರಿ ಚಂದ್ರನಾಯ್ಕ ಕಾರ್ಯದ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಂಕುವ ಗ್ರಾಮದ ಗೌಡನ ಕೆರೆ ಬತ್ತಿ ಹೋಗಿದ್ದರಿಂದ ಕೆರೆ ವ್ಯಾಪ್ತಿಯ ಒಡೆಯರ ಹತ್ತೂರು ತಾಂಡಾ, ಕುಂಕುವ, ಕೂಗನಹಳ್ಳಿ ತಾಂಡಾ, ಒಡೆಯರ ಹತ್ತೂರು ಹಾಗೂ ಗಡೆಕಟ್ಟೆ ಗ್ರಾಮಗಳ ಜನ, ಜಾನುವಾರುಗಳು ನೀರಿನ ಸಮಸ್ಯೆ ಎದುರಿಸಬೇಕಾಗಿತ್ತು.
ಅಂತರ್ಜಲ ಮಟ್ಟ ಕುಸಿದು ಕೃಷಿ ನೆಲಕಚ್ಚಿತ್ತು. ಇಂತಹ ಸಂದರ್ಭದಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಕಂದಾಯಾಧಿಕಾರಿ ಚಂದ್ರನಾಯ್ಕ ತಮ್ಮ ಗ್ರಾಮದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಛಲ ತೊಟ್ಟರು.
ಗೌಡನ ಕೆರೆಗೆ ನೀರು ತುಂಬಿಸುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದಾಗ ಎಲ್ಲರೂ ಸಹಕರಿಸುವ ಭರವಸೆ ನೀಡಿದರು. ಆದರೆ ಕಾರ್ಯರೂಪಕ್ಕೆ ತರಲು ಮುಂದಾದಾಗ ನಿರೀಕ್ಷಿತ ಸಹಕಾರ ಸಿಗಲೇ ಇಲ್ಲ. ಆದರೂ ಎದೆಗುಂದದೆ ಕುಟುಂಬ ಸದಸ್ಯರು, ಕೆಲವು ಗ್ರಾಮಸ್ಥರ ಜತೆಗೂಡಿ 48 ಎಕರೆ ವಿಸ್ತೀರ್ಣದ ಗೌಡನ ಕೆರೆ ಹಾಗೂ 12 ಎಕರೆ ವಿಸ್ತೀರ್ಣದ ಪರಸಪ್ಪನ ಕೆರೆಗೆ ನೀರು ತುಂಬಿಸಲು ಮುಂದಾದರು.
ತಾವೇ ಸುಮಾರು ರೂ. 15 ಲಕ್ಷ ರೂ. ಖರ್ಚು ಮಾಡಿ, ಸುಮಾರು ಮೂರು ಕಿ.ಮೀ ದೂರದ ತುಂಗಾ ಕೆನಾಲ್‌ವರೆಗೆ ಪೈಪ್‌ಲೈನ್ ಅಳವಡಿಸಿದರು. 26 ಎಚ್‌ಪಿ ಮೋಟಾರ್ ಅಳವಡಿಸಿ ಕೆರೆಗಳನ್ನು ತುಂಬಿಸಿದರು. ಇಂದು ಎರಡೂ ಕೆರೆಗಳಲ್ಲಿ ನೀರು ತುಂಬಿರುವುದರಿಂದ ಸುತ್ತಮುತ್ತಲಿನ ಐದು ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಿದೆ. ಅಷ್ಟೆ ಅಲ್ಲ, ಈ ಗ್ರಾಮಗಳ ವ್ಯಾಪ್ತಿಯ ಸುಮಾರು 600 ಎಕರೆ ಅಡಕೆ ಹಾಗೂ ತೆಂಗು ಬೆಳೆಗಳು ಕಂಗೊಳಿಸುತ್ತಿವೆ.
ಕೇವಲ ದುಡಿದು ನನ್ನ ಕುಟುಂಬದ ನಿರ್ವಹಣೆ ಮಾಡಿ ಹೋದರೆ ಪರಮಾತ್ಮ ಮೆಚ್ಚಲಾರ. ದುಡಿದ ಒಂದು ಭಾಗದಲ್ಲಿ ಸಮಾಜ ಸೇವೆ ಮಾಡಬೇಕು ಎನ್ನಿಸಿತು. ಆಗ ನನಗೆ ಕಾಣಿಸಿದ್ದು ನನ್ನೂರು. ಇಲ್ಲಿ ಜಾನುವಾರುಗಳಿಗೆ ಕುಡಿಯುವುದಕ್ಕೆ ನೀರಿಲ್ಲದ್ದನ್ನು ಕಂಡೆ. ಕೆರೆ ಬತ್ತಿರುವುದನ್ನು ಗಮನಿಸಿ, ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಈಗ ಕೆರೆ ತುಂಬಿದೆ. ಜಾನುವಾರುಗಳು ಕೆರೆಗೆ ಬಂದು ನೀರು ಕುಡಿದು ಹೋಗುತ್ತಿರುವುದನ್ನು ಕಂಡರೆ ಸಂತಸವಾಗುತ್ತದೆ.
ಚಂದ್ರನಾಯ್ಕ, ನಿವೃತ್ತ ಕಂದಾಯಾಧಿಕಾರಿ
ಬಯಲು ಸೀಮೆಯಂತಿರುವ ಈ ಭಾಗದಲ್ಲಿ ಚಂದ್ರನಾಯ್ಕ ಅವರು ಕೆರೆ ತುಂಬಿಸಿ ಜನ ಜಾನುವಾರುಗಳಿಗೆ ನೀರೊದಗಿಸಿ ಪುಣ್ಯದ ಕಾರ್ಯ ಮಾಡಿದ್ದಾರೆ.
ಡಿ.ರುದ್ರೇಶ್, ಗ್ರಾ.ಪಂ ಅಧ್ಯಕ್ಷ, ಕುಂಕುವ ಗ್ರಾ.ಪಂ.
ಎಷ್ಟೇ ಹಣವಿದ್ದರೂ ಸ್ವಂತಕ್ಕೆ ಇರಲಿ ಎನ್ನುವ ಈ ಕಾಲದಲ್ಲಿ ಕೆರೆ ತುಂಬಿಸುವ ಕಾರ್ಯ ಮಾಡಿ ಚಂದ್ರನಾಯ್ಕ ದೊಡ್ಡ ಸಾಧನೆ ಮಾಡಿದ್ದಾರೆ.
ಎಂ.ಪಿ. ರೇಣುಕಾಚಾರ್ಯ, ಶಾಸಕರು.
ಎಂ.ಪಿ.ಎಂ. ವಿಜಯಾನಂದಸ್ವಾಮಿ