Advertisement
3.10 ಲಕ್ಷ ಕಂದಾಯ ಕಟ್ಟಲಾಗಿದೆ: ಪಟ್ಟಣದ ಹೇಮಾವತಿ ನಾಲೆ ಸಮೀಪದಲ್ಲಿ ಹೊಸದಾಗಿ ಅಗ್ನಿ ಶಾಮಕ ಠಾಣೆ ಹಾಗೂ ಸಿಬ್ಬಂದಿಯ ವಸತಿಗೃಹ ಉದ್ಘಾಟನೆಯಾಗಿ ಇಂದಿಗೆ 9 ವರ್ಷ ಕಳೆದಿದ್ದು ಅಲ್ಲಿಂದ ಇಲ್ಲಿಯವರೆಗೂ ಪ್ರತಿವರ್ಷ 34,500ರೂ. ನಂತೆ ಒಟ್ಟು 3.10 ಲಕ್ಷ ರೂ. ಕಂದಾಯವನ್ನು ಪುರಸಭೆಗೆ ನಿಗದಿತ ಸಮಯಕ್ಕೆ ಸಂದಾಯ ಮಾಡಲಾಗಿದೆ. ಆದರೆ ಪುರಸಭೆ ಮಾತ್ರ ಮೂಲಭೂತ ಸೌಲಭ್ಯ ನೀಡದೆ ಮಲತಾಯಿ ಧೋರಣೆ ಮಾಡುತ್ತಿದೆ.
Related Articles
Advertisement
•ಪ್ರತಿ ವರ್ಷ 34,500ರೂ. ನಂತೆ ಒಟ್ಟು 3.10 ಲಕ್ಷ ರೂ. ಕಂದಾಯ ಪುರಸಭೆಗೆ ಸಂದಾಯ
•ಸೌಜನ್ಯಕ್ಕಾದರೂ ಒಮ್ಮೆಯೂ ಅಗ್ನಿಶಾಮಕ ಠಾಣೆ ಒಳಗೆ ಪ್ರವೇಶಿಸದ ಪುರಸಭೆ ಅಧಿಕಾರಿಗಳು
ಪಟ್ಟಣದ ಯಾವುದೇ ಮೂಲೆಯಲ್ಲಿ ಅಗ್ನಿದುರಂತ ಸಂಭವಿಸಿದರೆ ತುರ್ತುಪರಿಸ್ಥಿತಿ ವೇಳೆ ಕರೆ ಮಾಡುವಾಗ ಏರುಧ್ವನಿಯಲ್ಲಿ ಮಾತನಾಡುವ ಪುರಸಭೆ ಸದಸ್ಯರು ಸೌಜನ್ಯಕ್ಕಾದರೂ ಒಮ್ಮೆಯೂ ಅಗ್ನಿಶಾಮಕ ಠಾಣೆ ಒಳಗೆ ಪ್ರವೇಶಿಸಿಲ್ಲ ಎನ್ನುವುದು ವಿಪರ್ಯಾಸವೇ ಸರಿ.
ಎನ್‌ಎಚ್ ಸಮೀಪವಿದ್ದರೂ ವಿದ್ಯುತ್ ದೀಪ ನೀಡಿಲ್ಲ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಅಗ್ನಿಶಾಮಕ ಸಿಬ್ಬಂದಿ ವಸತಿಗೃಹವಿದೆ ಆದರೂ ವಸತಿಗೃಹದ ಒಳಗೆ ಬೀದಿ ದೀಪ ಹಾಕುವಲ್ಲಿ ಪುರಸಭೆ ಅಧಿಕಾರಿಗಳು ಜಾಣ ಕುರುಡು ಅನುಸರಿಸುತ್ತಿದ್ದಾರೆ. ಯುಜಿಡಿ ವ್ಯವಸ್ಥೆ ನೀಡದೇ ಇರುವುದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಹೆದ್ದಾರಿಯಿಂದ ವಸತಿಗೃಹದ ಒಳಗೆ ಕೇವಲ 600 ಮೀ. ಮಾತ್ರ ಡಾಂಬರ್ ರಸ್ತೆ ಮಾಡಬೇಕು ಅದನ್ನು ಮಾಡು ವಲ್ಲಿಯೂ ಪುರಸಭೆ ವಿಫಲವಾಗಿದೆ.
ಅಗ್ನಿಶಾಮಕಕ್ಕೂ ನೀರು ಬೇಡುವ ಸ್ಥಿತಿ: ಕೇವಲ ವಸತಿಗೃಹಕ್ಕೆ ಮಾತ್ರ ನೀರಿನ ಸಮಸ್ಯೆ ಇಲ್ಲ ತುರ್ತು ಸೇವೆಗೂ ನೀರು ಬೇಡುವ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಶಾಸಕ ಸಿ.ಎನ್. ಬಾಲಕೃಷ್ಣ ಕೊಳವೆ ಬಾವಿ ಕೊರೆಸಿದ್ದಾರೆ.ಅಂದಿನಿಂದ ತಕ್ಕ ಮಟ್ಟಿಗೆ ನೀರಿನ ಸಮಸ್ಯೆ ಕಡಿಮೆ ಯಾಗಿದೆ. ಇಲ್ಲದೇ ಹೋಗಿದ್ದರೆ ಅಗ್ನಿಶಾಮಕಕ್ಕೂ ನೀರು ಬೇಡುವ ಸ್ಥಿತಿ ನಿರ್ಮಾಣವಾಗಿತ್ತು.
ನಾಲ್ಕು ತಿಂಗಳಿಗೆ 159 ಕರೆ: ಜನವರಿಯಿಂದ ಏಪ್ರಿಲ್ ತಿಂಗಳ ಅಂತ್ಯದವರೆಗೆ ಸುಮಾರು 159 ತುರ್ತು ಕರೆ ಗಳು ಬಂದಿದ್ದು, ಎಲ್ಲವನ್ನೂ ಸ್ವೀಕರಿಸಲಾಗಿದೆ. ನುಗ್ಗೇಹಳ್ಳಿ ಹಾಗೂ ಹಿರೀಸಾವೆ ಹೋಬಳಿಯ ಗ್ರಾಮಗಳಿಂದ ಹೆಚ್ಚು ಕರೆಗಳು ಬಂದಿವೆ. ತಾಲೂಕಿನಲ್ಲಿ ಹೆಚ್ಚಿನ ಕರೆಗಳು ತೆಂಗಿನತೋಟದ ಅಗ್ನಿ ಅವಘಡ ಹಾಗೂ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿವೆ.
ಸಿಬ್ಬಂದಿ ಕೊರತೆ: ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಶರವೇಗದಲ್ಲಿ ಬೆಳೆಯುತ್ತಿರುವ ತಾಲೂಕು ಎಂಬ ಕೀರ್ತಿ ಚನ್ನರಾಯಪಟ್ಟಣಕ್ಕೆ ಸಲ್ಲುತ್ತದೆ. ಆದರೆ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು 10 ಮಂದಿ ಸಿಬ್ಬಂದಿ ಕೊರತೆ ಇದೆ. ಗಡಿ ಭಾಗದಲ್ಲಿ ಅವಘಡ ಸಂಭವಿಸಿದಾಗ ಒಂದು ತುರ್ತು ಲಾರಿ ಹಾಗೂ ಅಲ್ಲಿಗೆ ಅಗತ್ಯ ಸಿಬ್ಬಂದಿ ತೆರಳಿದ ವೇಳೆ ಮತ್ತೂಂದು ಕಡೆ ಅವಘಡ ಸಂಭವಿಸಿ ಕರೆ ಬಂದರೆ ಅಲ್ಲಿಗೆ ಸಿಬ್ಬಂದಿ ಕಳುಹಿಸಲಾಗುತ್ತಿಲ್ಲ. ಸರ್ಕಾರ ತಕ್ಷಣ ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಬೇಕಿದೆ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ