Advertisement

ನೀರು-ಮೇವು ಕೊರತೆ ಆಗದಿರಲಿ

06:06 AM Feb 05, 2019 | Team Udayavani |

ದಾವಣಗೆರೆ: ಬರಪೀಡಿತ ಎಲ್ಲಾ ತಾಲೂಕಿನಲ್ಲಿ ಕುಡಿಯುವ ನೀರು, ಮೇವಿಗೆ ತೊಂದರೆ ಆಗದ ರೀತಿಯಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಸೂಚನೆ ನೀಡಿದ್ದಾರೆ.

Advertisement

ಸೋಮವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಬೇಸಿಗೆ ಹೆಚ್ಚಾದಂತೆ ಸಮಸ್ಯೆಯೂ ಹೆಚ್ಚಾಗಬಹುದು. ಹಾಗಾಗಿ ನೀರು, ಮೇವಿನ ಸಮಸ್ಯೆ ನಿವಾರಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾ ಪಂಚಾಯತಿಗೆ ಬರುವಂತಹ ಅನುದಾನ ಲೋಪವಾಗದಂತೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಉಮಾಶಂಕರ್‌ ಸೂಚಿಸಿದರು.

ಈ ಮುನ್ನಾ ಸಭೆಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌, ದಾವಣಗೆರೆ ತಾಲೂಕಿನ 9, ಜಗಳೂರು ತಾಲೂಕಿನ 27 ಗ್ರಾಮ ಒಳಗೊಂಡಂತೆ 36 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪ್ರತಿ ದಿನ 38 ಟ್ಯಾಂಕರ್‌ನಲ್ಲಿ 192 ಟ್ರಿಪ್‌ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಚಿವ ಸಂಪುಟ ಉಪ ಸಮಿತಿ ಸೂಚನೆಯಂತೆ 10-11 ಕಡೆಯಲ್ಲಿ 1,000-1,200 ಅಡಿಯವರೆಗೆ ಕೊಳವೆ ಬಾವಿ ಕೊರೆಸಲಾಗಿದೆ. 5-6 ಕಡೆ ಒಂದು, ಒಂದೂವರೆ ಇಂಚು ನೀರು ಲಭ್ಯವಾಗಿದೆ. ಮಳೆ ಬಂದರೆ ನೀರಿನ ಲಭ್ಯತೆ ಪ್ರಮಾಣ ಹೆಚ್ಚಾಗಬಹುದು ಎಂದು ಭೂಗರ್ಭಶಾಸ್ತ್ರಜ್ಞರು ತಿಳಿಸಿದ್ದಾರೆ ಎಂದರು.

ಒಂದು, ಒಂದೂವರೆ ಇಂಚಿನ ನೀರಿಗಾಗಿ 1,000-1,200 ಅಡಿಯಷ್ಟು ಕೊಳವೆ ಬಾವಿ ಕೊರೆಯುವುದು ವೆಚ್ಚದಾಯಕ. ಒಂದು, ಒಂದೂವರೆ ಇಂಚು ನೀರು ಮೇಲೆತ್ತಲು 3 ಫೇಸ್‌ ವಿದ್ಯುತ್‌ ಬೇಕಾಗುತ್ತದೆ. ಇನ್ನು ಕೆಲವೇ ವರ್ಷದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಗಳು ಕಾರ್ಯಗತವಾಗಲಿವೆ. ಹಾಗಾಗಿ ಅಷ್ಟೊಂದು ಕೆಳಗೆ ಬೋರ್‌ ಕೊರೆಯುವುದು ಸರಿ ಅಲ್ಲ ಎಂದೆನಿಸುತ್ತದೆ ಎಂದು ಎಸ್‌.ಆರ್‌. ಉಮಾಶಂಕರ್‌ ಅಭಿಪ್ರಾಯಪಟ್ಟರು.

Advertisement

ದಾವಣಗೆರೆ ನಗರಕ್ಕೆ ಕುಡಿಯುವ ನೀರಿನ ಕೆಲಸಗಳಿಗೆ ಸಂಬಂಧಿಸಿದಂತೆ 1.6 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಯಾವುದೇ ನಗರ, ಪಟ್ಟಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಇಲ್ಲ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟಾರೆ 90 ಲಕ್ಷ ಅನುದಾನ ನೀಡಲಾಗಿದೆ. 250 ಲಕ್ಷ ರೂ. ಅನುದಾನದಲ್ಲಿ 122 ಕಾಮಗಾರಿ ಕೈಗೊಳ್ಳಲಾಗಿದೆ. ಮಳೆಗಾಲದವರೆಗೆ ಕುಡಿಯುವ ನೀರು ಸಂಬಂಧಿತ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು.

ತಾಂತ್ರಿಕ ಸಮಸ್ಯೆಯ ಕಾರಣ 2016-17ನೇ ಸಾಲಿನಿಂದ 3.5 ಕೋಟಿ ಬೆಳೆ ಪರಿಹಾರ ಬಾಕಿ ಇದೆ. ಆದಷ್ಟು ಬೇಗ ಆ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಹೇಳಿದರು. ಆ ಸಮಸ್ಯೆ ಈವರೆಗೆ ಬಗೆಹರಿದಿಲ್ಲವೇ ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌, ಮಂಗಳವಾರ ಬೆಂಗಳೂರಿನಲ್ಲಿ ನಡೆಯುವ ಕೃಷಿ ಸಚಿವರ ಸಭೆಗೆ ಮುನ್ನ ಎಲ್ಲಾ ಮಾಹಿತಿ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ 24 ಗೋಶಾಲೆ, 42 ಮೇವಿನ ಬ್ಯಾಂಕ್‌ ಪ್ರಾರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆಯಾಗಿ 18 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ. ಹಾಗಾಗಿ ಏಪ್ರಿಲ್‌ ತಿಂಗಳಲ್ಲಿ ಗೋಶಾಲೆ ಪ್ರಾರಂಭಿಸಿದರೆ ಅನುಕೂಲ ಆಗುತ್ತದೆ ಎಂದು ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ ಡಾ| ಸದಾಶಿವ ತಿಳಿಸಿದರು. ಸಮಸ್ಯೆ ತೀವ್ರವಾದಾಗ ತುರ್ತಾಗಿ ಮೇವು ಸಿಗದೇ ಹೋಗಬಹುದು. ಈಗಲೇ ಮೇವಿನ ಲಭ್ಯತೆ ಮತ್ತು ಶೇಖರಣೆ ಬಗ್ಗೆ ಯೋಜನೆ ಸಿದ್ಧಪಡಿಸಿಕೊಳ್ಳಬೇಕು ಎಂದು ಎಸ್‌.ಆರ್‌. ಉಮಾಶಂಕರ್‌ ಸೂಚಿಸಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಚನ್ನಗಿರಿ, ದಾವಣಗೆರೆ, ಹರಿಹರ ತಾಲೂಕಿನಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಅನುದಾನ ಸಮಾನವಾಗಿ ಹಂಚಿಕೆ ಆಗಬೇಕು ಎಂದು ಉಮಾಶಂಕರ್‌ ತಿಳಿಸಿದರು. 26 ಕೋಟಿಯಷ್ಟು ಮೆಟೇರಿಯಲ್‌ ಕಾಂಪೋನೆಂಟ್ ಬಾಕಿ ಇದೆ. ಆ ತಾಲೂಕುನಲ್ಲಿ ಸರಿಯಾದ ಸಮಯಕ್ಕೆ ಕೂಲಿ ಪಾವತಿ ಮಾಡದೇ ಇದ್ದರೆ ಜನರು ಕೆಲಸಕ್ಕೆ ಬರುವುದೇ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಖಾತರಿ ಯೋಜನೆಯಲ್ಲಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಉಮಾಶಂಕರ್‌ ಸೂಚಿಸಿದರು. 300 ಶಾಲೆಯಲ್ಲಿ ಕಾಂಪೌಂಡ್‌, 265 ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಮಾಹಿತಿ ನೀಡಿದರು.

ಅಕ್ರಮ ಪಂಪ್‌ಸೆಟ್ ತೆರವುಗೊಳಿಸಿ
ಭದ್ರಾ ನಾಲೆಯಲ್ಲಿ ಅಕ್ರಮ ಪಂಪ್‌ಸೆಟ್ ಸಮಸ್ಯೆ ಗಂಭೀರವಾಗಿದೆ. ನಾಲೆಯ ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್ ಹಾಕಿ ನೀರು ಎತ್ತುವುದರಿಂದ ಕೊನೆಯ ಭಾಗಕ್ಕೆ ನೀರು ದೊರೆಯುವುದೇ ಇಲ್ಲ ಎಂಬ ದೂರುಗಳು ಇವೆ. ನಾಲೆ ನೀರು ಕೃಷಿಗೆ ಮಾತ್ರವಲ್ಲ ಕುಡಿಯುವುದಕ್ಕೂ ಬೇಕಾಗುತ್ತಿರುವುದರಿಂದ ಜಿಲ್ಲಾಡಳಿತ ಅಕ್ರಮ ಪಂಪ್‌ಸೆಟ್ ತೆರವಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ತೀಕ್ಷ್ಣ ಬರ
ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ.8 ಒಳಗೊಂಡಂತೆ ಒಟ್ಟಾರೆ ಶೇ.27 ರಷ್ಟು ಮಳೆಯ ಕೊರತೆ ಆಗಿದ್ದರ ಪರಿಣಾಮ 6 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ. ಹಿಂಗಾರು ಹಂಗಾಮಿನಲ್ಲಿ 17 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದ 11 ಸಾವಿರ ಹೆಕ್ಟೇರ್‌ನಲ್ಲಿ 9.5 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಇಡೀ ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬೆಳೆ ಇದೆ. ಕಳೆದ ಮೂರು ತಿಂಗಳಲ್ಲಿ ಒಂದೇ ಒಂದು ಹನಿ ಮಳೆಯಾಗಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ತಿಳಿಸಿದರು. ಕಳೆದ 3 ತಿಂಗಳಲ್ಲಿ ಮಳೆಯೇ ಆಗಿಲ್ಲ. ಹಿಂಗಾರಿನಲ್ಲಿ ಬೆಳೆಯೇ ಇಲ್ಲದೇ ಇರುವುದು ಗಮನಿಸದರೆ ದಾವಣಗೆರೆ ಜಿಲ್ಲೆಯಲ್ಲಿ ತೀಕ್ಷ ¡ ಬರದ ಸ್ಥಿತಿ ಇದೆ ಎಂದಾಯಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಹೇಳಿದರು.

96,625 ರೈತರು ಮನ್ನಾಕ್ಕೆ ಅರ್ಹರು
ಜಿಲ್ಲೆಯಲ್ಲಿ 96,625 ರೈತರು ಸಾಲ ಮನ್ನಾ ಯೋಜನೆಗೆ ಅರ್ಹರಾಗಿದ್ದಾರೆ. ಅವರಲ್ಲಿ ಶೇ. 88 ರಷ್ಟು ರೈತರು ದಾಖಲೆ ಸಲ್ಲಿಸಿದ್ದಾರೆ. ಸಾಲ ಮನ್ನಾ ಯೋಜನೆಯಡಿ 9 ಸಾವಿರದಷ್ಟು ರೈತರ ಖಾತೆಗೆ 38 ಕೋಟಿ ಜಮೆ ಆಗಿದೆ. 1,800 ಕೋಟಿ ಕೃಷಿ ಸಾಲ ಮೊತ್ತದಲ್ಲಿ 850 ಕೋಟಿಯಷ್ಟು ಸಾಲ ನವೀಕರಣ, ಮರುಪಾವತಿ ಅವಧಿ ವಿಸ್ತರಣೆ ಮಾಡಲಾಗಿದೆ. 2019ರ ಜುಲೈವರೆಗೆ ಸಾಲ ವಸೂಲಾತಿ ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ಸುತ್ತೋಲೆ ಕಳಿಸಲಾಗಿದೆ. 70 ಸಾವಿರದಷ್ಟು ವಿದ್ಯಾರ್ಥಿಗಳಲ್ಲಿ 21 ಸಾವಿರದಷ್ಟು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡಬೇಕಿದೆ ಎಂದು ಲೀಡ್‌ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಎನ್‌.ಟಿ. ಎರ್ರಿಸ್ವಾಮಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next