Advertisement

ಎಲ್ಲೆಡೆ ನೀರಿಗೆ ತತ್ವಾರ; ಕಿಂಡಿ ಅಣೆಕಟ್ಟೇ ಪರಿಹಾರ

12:55 AM May 20, 2019 | Sriram |

ಕಾರ್ಕಳ: ನೀರಿನ ಸಮಸ್ಯೆ ಇನ್ನಿಲ್ಲದಷ್ಟು ಬಿಗಡಾಯಿಸಿದೆ. ಬೋರ್‌ವೆಲ್‌, ಕೆರೆಗಳು ಬತ್ತಿ ಹೋಗಿದ್ದು ಹನಿ ನೀರಿಗೂ ಬವಣೆಪಡುವಂಥ ಪರಿಸ್ಥಿತಿ. ಇದಕ್ಕೆಲ್ಲ ತಕ್ಕ ಮಟ್ಟಿನ ಪರಿಹಾರವೆಂದರೆ ನದಿ, ಹೊಳೆಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣ. ಸೂಕ್ತ ಪ್ರದೇಶಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದರೆ, ಹೊಳೆಯಲ್ಲಿ ಹರಿದು ಸಮುದ್ರ ಸೇರುವ ನೀರು ಶೇಖರಣೆಯಾಗಿ ಸಮಸ್ಯೆ ಬಗೆಹರಿಯಬಹುದು.

Advertisement

ಪಶ್ಚಿಮ ವಾಹಿನಿ ಯೋಜನೆಗೇನಾಯಿತು ?
ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಪಶ್ಚಿಮ ವಾಹಿನಿ ಯೋಜನೆಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಸರಕಾರ ಹೊರತಂದಿತ್ತು. ಎತ್ತಿನ ಹೊಳೆ ಯೋಜನೆಗೆ ಪರ್ಯಾಯವಾಗಿ ಕರಾವಳಿಯಲ್ಲಿ ಹರಿಯುವ ನದಿ, ಹೊಳೆಗಳಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಇದರ ಯೋಜನೆಯಾಗಿತ್ತು. ಆದರೆ ಅನಂತರದ ಸರಕಾರಗಳ ಅವಧಿಯಲ್ಲಿ ಯೋಜನೆ ವೇಗ ಪಡೆದುಕೊಂಡಿಲ್ಲ.

ಎಂವಿಎಸ್‌ಗೂ ಪೂರಕ
ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ನದಿಯಿಂದ ನೀರೆತ್ತಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ನೀರು ಪೂರೈಸಬಹುದು. ಕುಡಿಯುವ ನೀರು ಕೊರತೆ ಇರುವ ಎಲ್ಲ ಪ್ರದೇಶಗಳಿಗೂ ನೀರು ಪೂರೈಕೆಗೆ ನೆರವಾಗುತ್ತದೆ.

ಎಲ್ಲೆಲ್ಲಿ ಯೋಜನೆ ಸಾಧ್ಯ?
ಕಾರ್ಕಳದಲ್ಲಿ ಹರಿಯುವ ಪ್ರಮುಖ ನದಿಗಳಾದ ಸುವರ್ಣ ನದಿ, ಕಡಾರಿನದಿ, ಸೀತಾನದಿ, ಶಾಂಭವಿ ನದಿ, ಚೌಕಿ ಹೊಳೆ, ಕೆರ್ವಾಸೆ ಹೊಳೆ, ದುರ್ಗ ಹೊಳೆ, ಕಡ್ತಲ ಹೊಳೆ, ಕಾಡು ಹೊಳೆ, ದೆಪ್ಪುತ್ತೆ ಹೊಳೆಗಳಿಗೆ ಕಿಂಡಿ ಅಣೆಕಟ್ಟು ಕಟ್ಟಬಹುದಾಗಿದೆ. ಇದರಿಂದ ಅಂತರ್ಜಲ ವೃದ್ಧಿ, ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗುವುದ ರೊಂದಿಗೆ ನದಿ ಇಕ್ಕೆಲಗಳ ತೋಟ, ಗದ್ದೆಗಳಿಗೆ ನೀರು ಒದಗಿಸಲು ಸಹಕಾರಿಯಾಗಲಿದೆ.

ಸರಕಾರದ ಮೇಲೆ ಒತ್ತಡ ಹೇರಬೇಕು
ಹಲವಾರು ವರ್ಷಗಳ ಹಿಂದೆ ಯೋಜನೆಗೆ ಅನುದಾನ ಬಿಡುಗಡೆ ಮಾಡುವಂತೆ ಸಣ್ಣ ನೀರಾವರಿ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಯೋಜನೆ ಅನುಷ್ಠಾನ ಮಾಡುವತ್ತ ಸರಕಾರ ಮುಂದಾಗದೇ ಮೀನಮೇಷ ಎಣಿಸುತ್ತಲೇ ಬಂದಿದೆ. ಸರಕಾರಗಳು ಕೂಡ ಪಶ್ಚಿಮ ವಾಹಿನಿ ಯೋಜನೆಗೆ ಸಾಕಷ್ಟು ಅನುದಾನ ಒದಗಿಸುವತ್ತ ಮುಂದಾಗಿಲ್ಲ.

Advertisement

ಸರಕಾರ ಮನಸ್ಸು ಮಾಡುತ್ತಿಲ್ಲ
2014-18ರ ಅವಧಿಯಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಕಾರ್ಕಳದಲ್ಲಿ ಸುಮಾರು 57 ಕಿಂಡಿ ಅಣೆಕಟ್ಟುಗಳು ರಚನೆಯಾಗಿವೆ. ಪಶ್ಚಿಮ ವಾಹಿನಿ ಯೋಜನೆಗೆ ಕುಮಾರಸ್ವಾಮಿ ಸರಕಾರ ಅನುದಾನ ನೀಡುತ್ತಿಲ್ಲ. ಈ ಹಿಂದಿನ ಸರಕಾರ ಆಡಳಿತದ ಕೊನೆ ಅವಧಿಯಲ್ಲಿ ಒದಗಿಸಿಕೊಟ್ಟ ಅನುದಾನದಲ್ಲಿ ತಾಲೂಕಿನ ಇನ್ನಾ, ಮಾಳ, ಬೋಳದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಸರಕಾರ ಬಯಲು ಸೀಮೆಯ ನೀರಿನ ಸಮಸ್ಯೆ ಹೋಗಲಾಡಿಸುವಲ್ಲಿ ವಹಿಸುತ್ತಿರುವ ಆಸಕ್ತಿಯನ್ನು ಕರಾವಳಿಯತ್ತ ತೋರುತ್ತಿಲ್ಲ.
-ವಿ. ಸುನಿಲ್‌ ಕುಮಾರ್‌,
ಶಾಸಕರು ಕಾರ್ಕಳ

ಅನುದಾನ ನೀಡಲಿ
ಕಿಂಡಿ ಅಣೆಕಟ್ಟಿನ ಮಹತ್ವ ತಿಳಿದು ಸರಕಾರ ಕರಾವಳಿ ಭಾಗಕ್ಕೆ ಸಾಕಷ್ಟು ಅನುದಾನ ನೀಡಬೇಕು. ಪಶ್ಚಿಮ ವಾಹಿನಿ ಯೋಜನೆ ಮೂಲಕ ಸಮುದ್ರಕ್ಕೆ ಹರಿಯುವ ನೀರನ್ನು ಶೇಖರಣೆ ಮಾಡಿ ಕುಡಿಯುವ ಯೋಜನೆಗೆ, ಕೃಷಿ ಕಾರ್ಯಕ್ಕೆ ಬಳಸುವಂತಾಗಬೇಕು.
-ರಾಜೇಶ್‌ ರಾವ್‌,
ಉಪಾಧ್ಯಕ್ಷರು, ಕುಕ್ಕುಂದೂರು ಗ್ರಾ.ಪಂ.

ಎಣ್ಣೆಹೊಳೆಗೆ 40 ಕೋ. ರೂ.
ಸುವರ್ಣ ನದಿಗೆ ಅಡ್ಡಲಾಗಿ ಎಣ್ಣೆಹೊಳೆ ಎಂಬಲ್ಲಿ ಅಣೆಕಟ್ಟು ನಿರ್ಮಾಣಕ್ಕಾಗಿ ಕಳೆದ ಬಜೆಟ್‌ನಲ್ಲಿ ರಾಜ್ಯ ಸರಕಾರ 40 ಕೋಟಿ ರೂ. ಮೀಸಲಿರಿಸಿದೆ. ಯೋಜನೆ ಅನುಷ್ಠಾನಗೊಂಡಲ್ಲಿ ಮರ್ಣೆ ಹಾಗೂ ಹಿರ್ಗಾನ ಪಂಚಾಯತ್‌ ವ್ಯಾಪ್ತಿಯ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ. ಕುಡಿಯುವ ನೀರಿನ ಯೋಜನೆ ಹಾಗೂ ಕೃಷಿ ಕಾರ್ಯಕ್ಕೂ ಯಥೇತ್ಛ ನೀರು ಲಭ್ಯವಾಗಲಿದೆ.

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next