ಕೊಪ್ಪಳ: ಸಾಲು ಮರಗಳನ್ನು ಬೆಳೆಸಿ ದೇಶದೆಲ್ಲೆಡೆ ಕೀರ್ತಿ ಪಡೆದಿರುವ ಸಾಲು ಮರದ ತಿಮ್ಮಕ್ಕನ ಹೆಸರಲ್ಲಿ ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ಉದ್ಯಾನವನ ನಿರ್ಮಿಸಿದೆ. ಆದರೆ, ಕೊಪ್ಪಳ ಜಿಲ್ಲೆಯ ರುದ್ರಾಪುರ ಬಳಿ ಇರುವ ಸಾಲುಮರದ ತಿಮ್ಮಕ್ಕನ ಉದ್ಯಾನವನ ಆರಂಭವಾದ 10 ತಿಂಗಳಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದೆ. ಅಲ್ಲಿನ ಗಿಡಗಳ ರಕ್ಷಣೆಗಾಗಿ ಟ್ಯಾಂಕರ್ ಮೂಲಕ ಪೂರೈಸುವಂತ ಸ್ಥಿತಿ ಬಂದಿದೆ.
ಬರಪೀಡಿತ ಪ್ರದೇಶದಲ್ಲಿ ಉತ್ತಮ ಉದ್ಯಾನವನ ನಿರ್ಮಿಸುವ ಕನಸು ಕಂಡಿದ್ದ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಬೇವಿನಹಳ್ಳಿ ಸಮೀಪದ ರುದ್ರಾಪುರ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 50 ಹೆಕ್ಟೇರ್ ಪ್ರದೇಶ ಆಯ್ಕೆ ಮಾಡಿ ಕಳೆದ 2018 ಆ. 15ರಂದು ಟ್ರೀ ಪಾರ್ಕ್ ಸ್ಥಾಪನೆ ಮಾಡಿದೆ. ಆಗ ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವರಾಗಿದ್ದ ಆರ್. ಶಂಕರ್ ಉದ್ಘಾಟನೆ ಮಾಡಿ ರಾಜ್ಯದಲ್ಲಿಯೇ ಮಾದರಿ ಪಾರ್ಕ್ ಮಾಡುವ ಕನಸು ಬಿತ್ತಿದ್ದರು. ಬರದ ನಾಡಿನಲ್ಲೊಂದು ಹಸಿರು ಉದ್ಯಾನವನ ನಿರ್ಮಾಣವಾಗಲಿದೆ.
ಈ ಭಾಗದ ಸಾವಿರಾರು ಜನರಿಗೆ ಸಂಜೆಯ ವೇಳೆ ವಿಶ್ರಾಂತಿಗೆ ರಜಾ ದಿನಗಳಲ್ಲಿ ವಿಹಾರಕ್ಕೆ ಅನುಕೂಲವಾಗಲಿದೆ ಎಂಬ ಕನಸು ಕಂಡಿದ್ದರು. ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಹಲವು ಗಿಡಗಳನ್ನು ನೆಟ್ಟು, ಕೆರೆ ನಿರ್ಮಿಸಿ ಸುಂದರ ತಾಣವನ್ನಾಗಿ ಮಾಡಿದ್ದರು. ಜೊತೆಗೆ ವಿವಿಧ ಪ್ರಾಣಿಗಳ ಆಕೃತಿಗಳನ್ನು ಇರಿಸಿ ಜನರ ಗಮನ ಸೆಳೆದಿದ್ದರು. ಪರಿಸರ ರಕ್ಷಣೆ ಹಾಗೂ ಸಸಿ ನೆಡುವ ಜಾಗೃತಿ ಸಂದೇಶಗಳ ಫಲಕ ಅಳವಡಿಸಿ, ಶುಲ್ಕ ನಿಗದಿ ಮಾಡಿ ಜನರ ಗಮನ ಸೆಳೆಯುವಂತೆ ಮಾಡಿದ್ದರು. ಆದರೆ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಆರಂಭಾದ ಹತ್ತೇ ತಿಂಗಳಲ್ಲೇ ನೀರಿನ ಅಭಾವ ಎದುರಿಸುತ್ತಿದೆ. ಈ ಪಾರ್ಕ್‌ಗೆ ಎಲ್ಲಿಯೂ ನೀರಿನ ಮೂಲಗಳಿಲ್ಲ. ಬೋರ್‌ವೆಲ್ ನೀರೇ ಇಲ್ಲಿ ಆಸರೆಯಾಗಿದೆ.
ಆದರೆ ಜಿಲ್ಲೆಯಲ್ಲಿ ಸತತ ಬರದ ಪರಿಸ್ಥಿತಿಯಿಂದ ಅಂತರ್ಜಲ ಮಟ್ಟ ಕುಸಿದಿದ್ದು ಜನರಿಗೆ ಕುಡಿಯುವ ನೀರಿನ ಅಭಾವ ತಲೆದೋರುತ್ತಿದೆ. ಉದ್ಯಾನವನ ಆರಂಭವಾದ ಕೆಲವು ದಿನಗಳಲ್ಲಿ ಅರಣ್ಯ ಇಲಾಖೆ 2-3 ಬೋರ್‌ವೆಲ್ ಕೊರೆಯಿಸಿದರೂ ನೀರು ಲಭ್ಯವಾಗಿಲ್ಲ. ಇರುವ ಒಂದೇ ಬೋರ್‌ವೆಲ್ನಲ್ಲಿಯೇ ಉದ್ಯಾನವನ ನಿರ್ವಹಣೆ ಮಾಡುವಂತ ಪರಿಸ್ಥಿತಿ ಬಂದಿದ್ದು, ಅದೂ ಈಗ ಬೇಸಿಗೆಯಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ಟ್ಯಾಂಕರ್ ನೀರು: ಅಲ್ಲಿನ ನೂರಾರು ಗಿಡಗಳ ರಕ್ಷಣೆಗೆ ಅರಣ್ಯ ಇಲಾಖೆ ಟ್ಯಾಂಕರ್ ನೀರು ಪೂರೈಸುವಂತಹ ಸ್ಥಿತಿ ಬಂದಿದೆ. ಈ ಹಿಂದೆ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಸಚಿವರಾಗಿದ್ದ ಆರ್. ಶಂಕರ್ ಅವರು ಈ ಉದ್ಯಾನವನಕ್ಕೆ ನೀರಿನ ವ್ಯವಸ್ಥೆಗೆ ವಿಶೇಷ ಪ್ರಸ್ತಾವನೆ ಸಿದ್ಧಗೊಳಿಸಿ ನೀರು ಪೂರೈಕೆ ಮಾಡುವ ಭರವಸೆ ನೀಡಿದ್ದರು. ಅಚ್ಚರಿಯೆಂದರೆ, ಉದ್ಯಾನವನದ ಗುಡ್ಡದ ಪಕ್ಕದಲ್ಲೇ ತುಂಗಭದ್ರಾ ಡ್ಯಾಂ ಹಿನ್ನೀರಿನ ವ್ಯವಸ್ಥೆಯಿದೆ. ಆದರೆ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯೋ ಅಥವಾ ಅರಣ್ಯ ಇಲಾಖೆಯ ನಿರ್ಲಕ್ಷ ್ಯವೋ ಉದ್ಯಾನವನಕ್ಕೆ ನೀರಿನ ಮೂಲ ಕಂಡುಕೊಳ್ಳಲಾಗಿಲ್ಲ. ಹಾಗಾಗಿ 10 ತಿಂಗಳ ಹಿಂದೆ ನೆಟ್ಟ ಗಿಡಗಳು ನೀರಿಲ್ಲದೆ ಬಾಡುತ್ತಿವೆ. ಸ್ಥಳೀಯ ವಾಚರ್‌ಗಳು 2-3 ದಿನಕ್ಕೊಮ್ಮೆ ಅಲ್ಪ ನೀರನ್ನೇ ಎಲ್ಲ ಗಿಡಗಳಿಗೂ ಪೂರೈಕೆ ಮಾಡುವಂತಹ ಸ್ಥಿತಿ ಎದುರಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಉದ್ಯಾನವನ ಸಂಪೂರ್ಣ ಮುಚ್ಚಿ ಹೋಗುವಂತಹ ಸ್ಥಿತಿ ಎದುರಾಗಲಿದೆ. ಜಿಲ್ಲಾಡಳಿತ, ಸರ್ಕಾರ, ಶಾಸಕರು ಸೇರಿ ಅರಣ್ಯ ಇಲಾಖೆ ಉದ್ಯಾನವನದ ರಕ್ಷಣೆಗೆ ಈಗಲೇ ಕಾರ್ಯಪ್ರವೃತ್ತರಾಗುವ ಅವಶ್ಯಕತೆಯಿದೆ.
• ಗಿಡಮರಗಳ ರಕ್ಷಣೆಗೆ ಟ್ಯಾಂಕರ್ ನೀರು
• ನೀರಿನ ಮೂಲ ಕಂಡುಕೊಳ್ಳದ ಇಲಾಖೆ
• ಬಣಗುಡುತ್ತಿವೆ ಐವತ್ತು ಹೆಕ್ಟೇರ್‌ನಲ್ಲಿರುವ ಗಿಡಗಳು
ತಿಮ್ಮಕ್ಕನ ಉದ್ಯಾನವನಕ್ಕೆ ನೀರಿನ ಬರ!
ಸಾಲು ಮರದ ತಿಮ್ಮಕ್ಕನ ಹೆಸರಿನ ಟ್ರಿಪಾರ್ಕ್‌ಗೆ ನೀರಿನ ಮೂಲಗಳು ಇಲ್ಲ. ಸದ್ಯಕ್ಕೆ ಇರುವ ಒಂದು ಬೋರ್‌ವೆಲ್ನಲ್ಲೇ ವ್ಯವಸ್ಥೆ ಮಾಡುತ್ತಿದ್ದೇವೆ. ಗಿಡಗಳ ರಕ್ಷಣೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದು, ಈ ಹಿಂದೆ ಉದ್ಯಾನವನಕ್ಕೆ ನೀರಿನ ವ್ಯವಸ್ಥೆಗೆ ಚರ್ಚೆ ನಡೆದಿತ್ತು. ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮತ್ತೂಮ್ಮೆ ಚರ್ಚೆ ನಡೆಸಿ ಪರ್ಯಾಯ ವ್ಯವಸ್ಥೆ ಮಾಡಲಿದ್ದೇವೆ.
•ಯಶಪಾಲ್ ಕ್ಷೀರಸಾಗರ, ಡಿಎಫ್‌ಒ
ಉದ್ಯಾನವನಕ್ಕೆ ಈ ಹಿಂದೆ ನೀರಿನ ವ್ಯವಸ್ಥೆಯ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಿದ್ದೆವು. ಅದು ಇನ್ನೂ ಅಂತಿಮವಾಗಿಲ್ಲ. ಎಚ್ಕೆಆರ್‌ಡಿಬಿ ಅನುದಾನ ಅಥವಾ ಬೇರೆ ಯೋಜನೆಯಲ್ಲಿ ಅಲ್ಲಿ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಸದ್ಯ ಬೇಸಿಗೆಯಲ್ಲಿ ಏನು ಮಾಡಬೇಕು? ಮುಂದೆ ಅಲ್ಲಿ ಶಾಶ್ವತ ಪರ್ಯಾಯ ವ್ಯವಸ್ಥೆ ಹೇಗೆ ಕೈಗೊಳ್ಳಬಹುದು ಎನ್ನುವ ಕುರಿತು ಚರ್ಚೆ ಮಾಡಲಾಗುವುದು.
•ಪಿ. ಸುನೀಲ್ ಕುಮಾರ, ಜಿಲ್ಲಾಧಿಕಾರಿ
ದತ್ತು ಕಮ್ಮಾರ