ಚಿಕ್ಕಮಗಳೂರು: ನಗರದಲ್ಲಿ ಅಮೃತ್ ಯೋಜನೆಯಡಿ ಮನೆಗಳಿಗೆ ನೀರಿನ ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿಕಚೇರಿ ಸಭಾಂಗಣದಲ್ಲಿ ನಡೆದ ನಗರಸಭೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದಲ್ಲಿ ಒಳಚರಂಡಿ ಕಾಮಗಾರಿ ಯಲ್ಲಿ ನಿರ್ಮಿಸಿರುವ ಮ್ಯಾನ್‌ಹೋಲ್ ಗಳ ದುರಸ್ತಿ, ಒಡೆದು ಹೋಗಿರುವ ಮ್ಯಾನ್‌ಹೋಲ್ ಕ್ಯಾಪ್‌ಗ್ಳು ಹಾಗೂ ಅವೈಜ್ಞಾನಿಕವಾಗಿ ಅಳವಡಿಸಿರುವ ರಿಸೀವಿಂಗ್ ಚೇಂಬರ್ ಮುಚ್ಚಳಗಳನ್ನು
ಬದಲಾಯಿಸಲು ಈ ಹಿಂದೆ ಸಭೆಯಲ್ಲಿ ತಿಳಿಸಲಾಗಿದ್ದು, ಈವರೆಗೂ ಕಾಮಗಾರಿಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಳಚರಂಡಿ ಪೂರ್ಣಗೊಂಡಿರುವ ಕಡೆಗಳಲ್ಲಿ ಫ್ಲೋ ಟೆಸ್ಟ್ ಮಾಡಿ, ಮನೆ ಮನೆಗೆ ಸಂಪರ್ಕ ಕಲ್ಪಿಸಬೇಕು. ಡಿಐ ರೈಸಿಂಗ್ ಮೈನ್ ಅಳವಡಿಸುವ ಕಾಮಗಾರಿ ಹಾಗೂ ವೆಟ್ ವೆಲ್‌ಗೆ ಬೇಲಿ ಅಳವಡಿಸುವ ಕಾಮಗಾರಿ ಇದುವರೆಗೂ ಪ್ರಾರಂಭವಾಗದಿರುವ ಬಗ್ಗೆ ಅಧಿಕಾರಿಗಳು ಗಮನ
ಹರಿಸಬೇಕು ಎಂದು ಹೇಳಿದರು. ಅಮೃತ್ ಯೋಜನೆಯಡಿ ಮನೆಗಳಿಗೆ ಸಂಪರ್ಕ ನೀಡುವ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಕನಿಷ್ಠ ದಿನಕ್ಕೆ 200 ಕನೆಕ್ಷನ್‌ನಂತೆ ಮನೆಗಳಿಗೆ ಸಂಪರ್ಕ ನೀಡಲು ಕ್ರಮ ವಹಿಸಬೇಕು. ಅಧಿಕಾರಿ ಗಳು ಈ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆ ದಾರರಿಗೆ ವರ್ಕ್ ಚಾಟ್ ನೀಡಿ ಕೆಲಸ ನಿರ್ವಹಿಸುವಂತೆ ಸೂಚಿಸಬೇಕೆಂದರು. ನಗರಸಭೆ ಖಾತೆ ಇರುವ ಆಸ್ತಿಗಳು ಹಾಗೂ ಖಾತೆ ಇಲ್ಲದ ಆಸ್ತಿಗಳ ಪಟ್ಟಿ ಮಾಡಬೇಕು. ಹೆಚ್ಚು ಕಂದಾಯ ಉಳಿಸಿಕೊಂಡಿರುವ ನಗರಸಭೆ ಮಳಿಗೆ ಗಳು, ಶಾಲೆಗಳು ಹಾಗೂ ಸರ್ಕಾರಿ ಕಟ್ಟಡಗಳ ಕಂದಾಯ ವಸೂಲಿಗೆ ಕ್ರಮ ವಹಿಸಬೇಕೆಂದು ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ಸುಕುಮಾರ್, ಸಿಡಿಎ ಆಯುಕ್ತ ಭೀಮನಿಧಿ, ಕರ್ನಾಟಕ ನಗರ ನೀರು ಸರಬರಾಜು ನಿಗಮದ ಕಾರ್ಯಪಾಲಕ ಇಂಜಿನಿಯರ್ ಕರಿಯಪ್ಪ, ಮಲ್ಲೇಶ ನಾಯಕ, ಶಿಲ್ಪಾ ಇತರರಿದ್ದರು.