ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ-ಗೋವನಾಳ ರಸ್ತೆ ಪಕ್ಕದಲ್ಲಿನ ಜಿಪಂ ಇಲಾಖೆಯ ವ್ಯಾಪ್ತಿಗೊಳಪಡುವ ಸುಮಾರು 10 ಎಕರೆಯಷ್ಟು ವಿಸ್ತಾರದ ಕೆರೆಯ ನೀರು ತಡೆಗಾಗಿ ನಿರ್ಮಿಸಿದ್ದ ಬಾಂದಾರ ಕೊಚ್ಚಿಕೊಂಡು ಹೋಗಿ ಕೆರೆಯಲ್ಲಿ ಹನಿ ನೀರೂ ನಿಲ್ಲದಂತಾಗಿದೆ. ಇದಾಗಿ ವರ್ಷಗಳೇ ಕಳೆದಿದ್ದರು ಈ ಬಗ್ಗೆ ಯಾರೊಬ್ಬರೂ ಗಮನ ಹರಿಸದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಬರಗಾಲದ ಸಂದರ್ಭದಲ್ಲಿ ಈ ಕೆರೆ ಕೇವಲ ಹೂಳೆತ್ತಲು ಮಾತ್ರ ಸೀಮಿತವಾಗಿದೆ. ಆದರೆ ಈ ಕೆರೆ ತುಂಬಿ ಕೋಡಿ ಬೀಳುವ ಪ್ರದೇಶದಲ್ಲಿ ನಿರ್ಮಿಸಿದ್ದ ತಡೆ ಗೋಡೆ ಕಿತ್ತು ಕಿನಾರೆ ಸೇರಿದ್ದರೂ ತಡೆಗೋಡೆ ಮರು ನಿರ್ಮಾಣ ಮಾಡಿ ನೀರು ನಿಲ್ಲಿಸುವ ಪ್ರಯತ್ನಕ್ಕೆ ಯಾರೊಬ್ಬರೂ ಮುಂದಾಗಿಲ್ಲ. ಇದರಿಂದ ಪ್ರತಿವರ್ಷ ಎನ್‌ಆರ್‌ಇಜಿ ಯೋಜನೆಯಡಿ ಲಕ್ಷಾಂತರ ರೂ. ಅನುದಾನದಲ್ಲಿ ಕೈಗೊಳ್ಳುತ್ತಿರುವ ಕೆರೆ ಹೂಳೆತ್ತುವ ಕಾರ್ಯ ಹೊಳೆಯಲ್ಲಿ ಹೋಮ ಮಾಡಿದಂತಾಗುತ್ತಿದೆ.
ಮೂರ್‍ನಾಲ್ಕು ವರ್ಷಗಳ ಹಿಂದೆ ಶಿಗ್ಲಿ ಗ್ರಾಪಂನವರು 2.5 ಲಕ್ಷ ರೂ. ಅನುದಾನ ವಿನಿಯೋಗಿಸಿ ಹೂಳೆತ್ತಿದ್ದರೆ ಗೋವನಾಳ ಗ್ರಾಪಂನವರು ಕಳೆದ 2 ವರ್ಷಗಳಿಂದ 20 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾರ್ಯ ಮಾಡಿದ್ದಾರೆ. ಇದೇ ವರ್ಷ ಜ. 7ರಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರ ನೇತೃತ್ವದ ಬರ ಅಧ್ಯಯನ ಸಮಿತಿ ಈ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ ಮಾಡಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿಯೇ ಗ್ರಾಮಸ್ಥರು ಮೊದಲು ಕೆರೆಯ ಕೋಡಿಯನ್ನು ನಿರ್ಮಿಸುವಂತೆ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಆದರೆ ಕಂದಾಯ ಸಚಿವರು ಭೇಟಿ ನೀಡಿ 7 ತಿಂಗಳು ಗತಿಸಿದ್ದರು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಲಿ, ಜಿಪಂರಾಇಯ ಕಾರ್ಯ ನಿರ್ವಾಹಕ ಅಭಿಯಂತರರಾಗಲಿ, ಜಿಪಂನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಲಿ ಇತ್ತ ಕಣ್ಣೆತ್ತಿಯೂ ಕೂಡ ನೋಡಿಲ್ಲ ಎಂಬುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ. ಈ ಕೆರೆ ತುಂಬಿದರೆ ಸುತ್ತಲಿನ ಗೋವನಾಳ, ಶಿಗ್ಲಿ, ಉಳ್ಳಟ್ಟಿ ಗ್ರಾಮಗಳ ರೈತರಿಗೆ, ಜನಜಾನುವಾರುಗಳಿಗೆ ಅನಕೂಲವಾಗುತ್ತದೆ. ಕೆರೆಯಲ್ಲಿ ನೀರು ನಿಲ್ಲದಿದ್ದರಿಂದ ಸುತ್ತಲಿನ ಭಾಗದ ಬೋರ್‌ವೆಲ್ಗಳ ಅಂತರ್ಜಲಕ್ಕೂ ಕುತ್ತು ಬಂದಿದೆ. ಆದ್ದರಿಂದ ಈ ಭಾಗದ ಜನಪ್ರತಿನಿಧಿಗಳು ಮುತುವರ್ಜಿವಹಿಸಿ ಕೆರೆಯ ಕೋಡಿಯನ್ನು ನಿರ್ಮಿಸಬೇಕು ಎಂದು ಸ್ಥಳೀಯ ರೈತರು ಮತ್ತು ಕುರಿಗಾಯಿಗಳಾದ ಪರಸಪ್ಪ ಡಂಬರ, ರವಿ ಕಳ್ಳಳ್ಳಿ, ಮಹೇಶ ಕಲಾಲ್ ಮತ್ತಿತರರು ಆಗ್ರಹಿಸಿದ್ದಾರೆ.