Advertisement

ತುಮರಿಕೊಪ್ಪ ಗ್ರಾಮಸ್ಥರಿಗೆ ಜಲಬೇನೆ

09:08 AM Aug 02, 2019 | Team Udayavani |

ಕಲಘಟಗಿ: ನೀರಿನ ಟ್ಯಾಂಕ್‌ಗಳ ಅಸ್ವಚ್ಛತೆಯಿಂದ ಜನರು ಹಲವು ರೋಗಗಳಿಂದ ನರಳುವಂತಾಗಿದೆ. ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಇಂತಹದೆ ಪರಿಸ್ಥಿತಿ ನಿರ್ಮಾಣಗೊಂಡಿದ್ದು ತುಮರಿಕೊಪ್ಪ ತಾಜಾ ಉದಾಹರಣೆಯಾಗಿದೆ. ಕುಡಿಯುವ ನೀರಿನ ಅವ್ಯವಸ್ಥೆ, ಅಸಮರ್ಪಕ ನೀರಿನ ಟ್ಯಾಂಕ್‌ಗಳ ವ್ಯವಸ್ಥೆಯಿಂದಾಗಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗಿವೆ.

Advertisement

ತಾಲೂಕಾಸ್ಪತ್ರೆ ಈಗ ತುಮರಿಕೊಪ್ಪ ಜನತೆಯ ತವರುಮನೆಯಂತಾಗಿದೆ. ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಲಿಸಿದರೆ ತುಮರಿಕೊಪ್ಪದ ಜನರೇ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಹಾಗೂ ಮಲೇರಿಯಾ ರೋಗದಿಂದ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಎಲ್ಲ ಕಾಯಿಲೆಗಳಿಗೆ ಮುಖ್ಯ ಕಾರಣ ಗ್ರಾಮಕ್ಕೆ ಬಿಡುತ್ತಿರುವ ನೀರು ಎಂಬ ದೂರು ಜನರಿಂದ ಕೇಳಿಬರುತ್ತಿದೆ.

ಈ ಗ್ರಾಮದಲ್ಲಿರುವ 2 ನೀರಿನ ಟ್ಯಾಂಕ್‌ಗಳು ಅಸ್ವಚ್ಛತೆಯಿಂದ ಕೂಡಿವೆ. ಟ್ಯಾಂಕ್‌ಗಳ ಒಳಗಡೆ ಮುರಿದು ಬಿದ್ದ ಸಿಮೆಂಟಿನ ತುಂಡುಗಳು, ಗಿಡ-ಮರಗಳ ಎಲೆಗಳು, ತುಕ್ಕು ಹಿಡಿದು ಮುರಿದು ಬಿದ್ದಿರುವ ಕಬ್ಬಿಣದ ತುಂಡುಗಳು, ಟ್ಯಾಂಕ್‌ಗೆ ಮುಚ್ಚಳವೇ ಇಲ್ಲದಿರುವುದರಿಂದ ಹೊಲಸು ತುಂಬಿಕೊಂಡು ಗಬ್ಬು ನಾರುತ್ತಿವೆ. ಇದೇ ನೀರನ್ನು ಊರಿನ ಜನತೆ ಕುಡಿಯಲು ಉಪಯೋಗಿಸುತ್ತಿದ್ದು, ಮಲೇರಿಯಾದಂತಹ ರೋಗಗಳಿಗೆ ಮುಖ್ಯ ಕಾರಣವಾಗಿದೆ.

ಮುನ್ನೆಚ್ಚರಿಕೆಗೆ ಸೂಚನೆ: ತೀವ್ರವಾದ ಮೈ ಕೈನೋವು, ತಲೆ ನೋವು, ಜ್ವರ ವಾಂತಿ ಭೇದಿ ಜನರಲ್ಲಿ ಕಂಡುಬಂದು ಮಲೇರಿಯಾದಂತ ದೈತ್ಯ ರೋಗಕ್ಕೆ ಕಾರಣವಾಗುತ್ತದೆ. ಜನರು ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಇಂತಹ ರೋಗಗಳಿಂದ ದೂರ ಇರಬಹುದು. ನಲ್ಲಿಯಿಂದ ಬಂದ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಹೆಚ್ಚು ದಿನ ನೀರನ್ನು ಸಂಗ್ರಹಿಸಿ ಇಡಬಾರದು. ಶುದ್ಧ ಘಟಕದ ನೀರನ್ನು ಕುಡಿಯಬೇಕು. ಮನೆಯಲ್ಲಿ ನೀರು ಸಂಗ್ರಹದ ಪಾತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ವೈದ್ಯರು ತಿಳಿಸುತ್ತಾರೆ.

Advertisement

ಗ್ರಾಮದ ಜನರು ಮನೆಯಲ್ಲಿರುವ ನೀರು ಶೇಖರಿಸಿಡುವ ಸಾಮಗ್ರಿ ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಮುಖ್ಯ ಟ್ಯಾಂಕ್‌ನಿಂದ ಬರುವ ನೀರು ಶುದ್ಧವಾಗಿರದೇ ಇರುವುದು ಎಲ್ಲ ರೋಗಗಳಿಗೆ ಕಾರಣವಾಗಿದೆ. ತಾಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕಗಳು ನಾಮಕಾವಸ್ಥೆ ಕಾರ್ಯ ಜರುಗಿಸುತ್ತಿದ್ದು, ಬಹುತೇಕ ಘಟಕಗಳು ಸ್ಥಗಿತಗೊಂಡಿವೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇತ್ತ ಗಮನ ಹರಿಸಬೇಕಿದೆ. ಎಲ್ಲ ಗ್ರಾಮಗಳ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ.

 

•ಪ್ರಭಾಕರ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next