ಬಸವಕಲ್ಯಾಣ: ಬೇಸಿಗೆಯಲ್ಲಿ ಕಲ್ಲಂಗಡಿ ಹಾಕಿದರೆ ಕೈ ತುಂಬಾ ಹಣ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಆಸೆ ಮೇಲೆ ಬರಗಾಲ ತಣ್ಣೀರು ಎರಚುವಂತಾಗಿದೆ. ನೀರಿನ ಕೊರತೆಯಿಂದ ಕಲ್ಲಂಗಡಿ ಬೆಳೆ ಒಣಗಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಇದರಿಂದ 3ರಿಂದ 4 ಕೆಜಿ ಆಗಬೇಕಾದ ಕಲ್ಲಂಗಡಿ 2 ಅಥವಾ 3 ಕೆಜಿ ಆಗುವಷ್ಟು ಗಾತ್ರದಲ್ಲಿ ಕಲ್ಲಂಗಡಿಗಳು ಹತ್ತಿಕೊಂಡಿವೆ. ಹೀಗಾಗಿ ರೈತರು ಪ್ರತಿ ಹೆಕ್ಟೇರ್‌ಗೆ ಮಾಡಿದ ಖರ್ಚು ತಿರುಗಿ ಬರುತ್ತದೆಯೋ ಅಥವಾ ಇಲ್ಲವೋ ಎಂಬ ಆತಂಕದಲ್ಲಿ ರೈತರಿದ್ದಾರೆ.
ತೋಟದಲ್ಲಿರುವ ಕೊಳವೆ ಬಾವಿ ಮತ್ತು ಬಾವಿಗಳಲ್ಲಿ ನೀರಿನ ಮಟ್ಟ ಕುಸಿತವಾಗಿದ್ದು, ದಿನದಲ್ಲಿ ಒಂದು ಅಥವಾ ಎರಡು ಗಂಟೆ ಮಾತ್ರ ನೀರು ಉಣಿಸಲಾಗುತ್ತಿದೆ. ಇದರಿಂದ ಅಲ್ಲಲ್ಲಿ ಒಂದೊಂದು ಕಲ್ಲಂಗಡಿಗಳು ಕಾಣುತ್ತಿದ್ದು, ನಿರೀಕ್ಷೆಗೆ ತಕ್ಕಂತೆ ಇಳುವರಿ ಬಾರದೆ ಇರುವುದು ರೈತರಿಗೆ ಮುಂದಿನ ದಾರಿ ಕಾಣದಂತಾಗಿದೆ. ನೀರಿನ ಅಭಾವದಿಂದ ಈಗಾಗಲೇ ಕಲ್ಲಂಗಡಿ ಬಳ್ಳಿ ಒಣಗಿ ಹೋಗುತ್ತಿದೆ. ಹೇಗಾದರೂ ಮಾಡಿ ಇನ್ನೂ ಸ್ವಲ್ಪ ದಿನ ಉಳಿಸಿಕೊಂಡರೆ ಇನ್ನೊಂದು ಬೆಳೆ ಪಡೆದುಕೊಳ್ಳಬೇಕು ಎಂದರೆ ನೀರು ಇಲ್ಲದಿರುವುದು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ನೀರಿನ ಅಭಾವದಿಂದ ಕಲ್ಲಂಗಡಿ ಬೆಳೆಗಾರರ ಮೇಲೆ ಪರಿಣಾಮ ಬೀರಿರುವುದು ಮಾತ್ರ ಗಾಯದ ಮೇಲೆ ಬರೆ ಎಳೆದಂತಾಗಿದೆ.
Advertisement
ಪ್ರಸಕ್ತ ವರ್ಷದಲ್ಲಿ ಬಹಳ ನಿರೀಕ್ಷೆ ಇಟ್ಟಿಕೊಂಡು ತಾಲೂಕಿನಾದ್ಯಂತ ಒಟ್ಟು 62 ಹೆಕ್ಟೇರ್‌ನಲ್ಲಿ ರೈತರು ಕಲ್ಲಂಗಡಿ ರೋಪಣಿ ಮಾಡಿದ್ದರು. ಇದರಲ್ಲಿ ಕೆಲವರು ಮೊದಲನೇ ಇಳುವರಿ ಪಡೆದುಕೊಂಡಿದ್ದರೆ, ಮತ್ತೆ ಕೆಲವರಿಗೆ ಅಂತರ್ಜಲ ಕುಸಿತದಿಂದ ಶೇ. 20ರಿಂದ 25ರಷ್ಟು ಇಳುವರಿ ಕಡಿಮೆ ಆಗುವುದರ ಜತೆಗೆ ಬೆಳೆ ಮೇಲೆ ಪರಿಣಾಮ ಬೀರಿರುವುದು ರೈತರ ನಿರೀಕ್ಷೆ ಹುಸಿ ಮಾಡಿದೆ.
ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಅಭಾವದಿಂದ ಶೇ. 15ರಿಂದ 20ರಷ್ಟು ಇಳುವರಿಯಲ್ಲಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯಾದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಅವರು ನೀಡಿವ ಆದೇಶ ಪಾಲಿಸಲಾಗುವುದು.•ಸಂತೋಷ ತಾಂಡೂರ,ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ,
ಬಹಳ ನಿರೀಕ್ಷೆ ಇಟ್ಟುಕೊಂಡು ಕಲ್ಲಂಗಡಿ ಬೆಳೆಸಲಾಗಿತ್ತು. ಆದರೆ ನೀರಿನ ಅಭಾವದಿಂದ ಕೊಳವೆ ಬಾವಿ ಮತ್ತು ಬಾವಿಯಲ್ಲಿನ ನೀರು ದಿನೇ ದಿನೇ ಬತ್ತು ಹೋಗುತ್ತಿದೆ. ಇದರಿಂದ ಕಲ್ಲಂಗಡಿ ಬೆಳೆಸಲು ತುಂಬಾ ಕಷ್ಟುವಾಗುತ್ತಿದೆ.•ಸೂರ್ಯಕಾಂತ ಚಂದು, ಕಲ್ಲಂಗಡಿ ಬೆಳೆಗಾರ ಪರತಾಪುರ
•ವೀರಾರೆಡ್ಡಿ ಆರ್.ಎಸ್.