Advertisement

ಹನಿ ನೀರೂ ಬರಲ್ಲ; ಕಾಮಗಾರಿ ಬಿಲ್ ಪಾವತಿ!

03:38 PM May 27, 2019 | keerthan |

ಉಪ್ಪಿನಂಗಡಿ : ಕುಡಿಯುವ ನೀರಿನ ಅಭಾವ ನೀಗಿಸಲು ಸರಕಾರ ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಯೋಜನೆ ಜಾರಿಗೊಳಿಸಿದ್ದು, ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ತುಕ್ಕು ಹಿಡಿದು ಗುಜರಿಗೆ ಸೇರುವಂತಾಗಿದೆ.

Advertisement

ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಆರಂಭಿಸಿ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ನೀರು ಪ್ರಯಾಣಿಕರಿಗೆ ಸಿಗಲೆಂದು ಉಪ್ಪಿನಂಗಡಿಯಲ್ಲೂ ಯೋಜನೆ ಜಾರಿಗೊಳಿಸಲಾಗಿತ್ತು. ಎರಡು ವರ್ಷಗಳ ಹಿಂದೆ ಹೊರ ರಾಜ್ಯದ ಗುತ್ತಿಗೆದಾರರೊಬ್ಬರು ಕಾಟಾಚಾರಕ್ಕೆ ಎಂಬಂತೆ ಕಳಪೆ ಕಾಮಗಾರಿ ನಿರ್ವಹಿಸಿ, ಅದರ ಭಾವಚಿತ್ರಗಳನ್ನು ಸರಕಾರಕ್ಕೆ ಸಲ್ಲಿಸಿ, ಬಿಲ್ ಪಡೆದಿದ್ದಾರೆ. ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸದೆ ಮಂಜೂರಾತಿ ನೀಡಿದ್ದಾರೆ. ಇದೇ ಅವಾಂತರಕ್ಕೆ ಕಾರಣ ಎಂಬುದು ಸ್ಥಳೀಯರ ಆರೋಪ.

ಘಟಕ ರಚಿಸಿ ಎರಡು ವರ್ಷಗಳೇ ಆದರೂ ಪ್ರವಾಸಿಗರಿಗೆ ಅಥವಾ ಗ್ರಾಮಸ್ಥರಿಗೆ ಒಂದು ಹನಿ ನೀರೂ ಸಿಕ್ಕಿಲ್ಲ. ಹೆದ್ದಾರಿ ಸನಿಹದಲ್ಲಿ ಯಾರೋ ಅಪರಿಚಿತರು ಘಟಕ ನಿರ್ಮಿಸಿ ತೆರಳಿದ್ದಾರೆ. ಇದು 1 ರೂ. ನಾಣ್ಯವನ್ನೂ ಸ್ವೀಕರಿಸುವುದಿಲ್ಲ, ಹನಿ ನೀರೂ ಇದರಿಂದ ಬರುವುದಿಲ್ಲ. ಹೊಸ ಯೋಜನೆಗಳು ಪುಸ್ತಕಗಳಿಗೆ ಸೀಮಿತವೇ ಅಥವಾ ಜನರಿಗೂ ಏನಾದರೂ ಉಪಯೋಗ ಸಿಗುತ್ತದೆಯೇ ಎಂದು ಸ್ಥಳೀಯ ರಿಕ್ಷಾ ಚಾಲಕ ಖಲಂಧರ್‌ ಶಾಫಿ ಪ್ರಶ್ನಿಸಿದ್ದಾರೆ.

ಸ್ಥಳೀಯರಿಗೆ ಕೊಡಿ

ಸರಕಾರದ ಎಲ್ಲ ಯೋಜನೆಗಳಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸ್ವೀಕಾರ ಮಾಡಿ, ಟೆಂಡರ್‌ ನೀಡುವುದರಿಂದ ಇಂತಹ ಯೋಜನೆಗಳು ಸಮಸ್ಯೆಗಳ ಆಗರವಾಗಿ ಹಣ ಪೋಲಾಗುತ್ತಿದೆ. ಪ್ರತಿಯೊಂದು ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲು ಸ್ಥಳೀಯರಿಗೆ ಗುತ್ತಿಗೆ ನೀಡಿದರೆ ಒಳಿತು. – ಅಬ್ದುಲ್ ರಹಿಮಾನ್‌, ಗ್ರಾ.ಪಂ. ಅಧ್ಯಕ್ಷ, ಉಪ್ಪಿನಂಗಡಿ
Advertisement

Udayavani is now on Telegram. Click here to join our channel and stay updated with the latest news.

Next