ಬೆಳ್ತಂಗಡಿ: ಬರದಿಂದ ಎಲ್ಲೆಡೆ ನೀರಿನ ಅಭಾವ ಸೃಷ್ಟಿಯಾಗಿರುವ ನಡುವೆಯೇ ಬೇಸಿಗೆ ರಜೆಯೂ ಬಂದಿರುವುದರಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದು, ನೀರಿನ ಅಭಾವ ಸೃಷ್ಟಿಯಾಗಿದೆ. ಕಳೆದ 20 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ ನೇತ್ರಾವತಿಯ ಉಪ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಧರ್ಮಸ್ಥಳ ಕ್ಷೇತ್ರದಲ್ಲೂ ಕೊಂಚ ನೀರಿನ ಕೊರತೆ ತಲೆದೋರಿದೆ.
ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಮಕ್ಕಳೊಂದಿಗೆ ಕ್ಷೇತ್ರ ದರ್ಶನ ಪಡೆಯಲು ಬರುವ ಭಕ್ತರು ಬಿಸಿಲಿನ ಧಗೆಯಿಂದ ವಿಪರೀತ ತೊಂದರೆಗೊಳಗಾಗುತ್ತಿದ್ದಾರೆ. ಕ್ಷೇತ್ರದಿಂದ ಭಕ್ತರಿಗೆ ನೀಡುವ ಅನುಕೂಲಗಳಲ್ಲಿ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಸಾಧ್ಯವಾದರೆ ಪ್ರವಾಸಿಗರು ಕೆಲವು ವಾರಗಳ ಕಾಲ ಕ್ಷೇತ್ರ ದರ್ಶನ ಮುಂದೂಡಿ ಎಂದು ವಿನಂತಿಸಿದ್ದೇನೆ ಎಂದರು.
ಇಡೀ ರಾಜ್ಯದಲ್ಲಿ ಬರದ ಲಕ್ಷಣವಿದ್ದು, ನೀರಿನ ಕೊರತೆಯಿದೆ. ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಪ್ರಕೃತಿಯನ್ನು ಮೀರುವ ಶಕ್ತಿ ನಮ್ಮಲ್ಲಿಲ್ಲ. ಇದನ್ನರಿತು ಎಲ್ಲರೂ ಸಹಕರಿಸಬೇಕಾಗಿದೆ. ನೀರಿನ ಅಭಾವ ಈ ಹಿಂದೆಯೂ ಆಗಿದೆ. ಇದು ಹೊಸ ಅನುಭವವಲ್ಲ. ಕೃಷಿಗೆ ಹೆಚ್ಚು ನೀರು ಬಳಕೆ, ನೀರಿನ ಒಳ ಹರಿವು ಕಡಿಮೆಯಾಗಿರುವುದರಿಂದ ನೀರಿನ ಬಳಕೆ ಜಾಸ್ತಿಯಾಗುತ್ತಿದೆ.
ಪ್ರಕೃತಿ ಮತ್ತು ಜನಜೀವನದ ನಡುವೆ ಸಣ್ಣ ಪೈಪೋಟಿ ನಡೆಯುತ್ತಿದೆ. ನೀರಿನ ಅವಶ್ಯಕತೆ ಮತ್ತು ಕೊರತೆ ಎರಡೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ವರ್ಷಗಳಲ್ಲಿ 3 ತಿಂಗಳ ಹಿಂದೆಯೇ ನೀರಿನ ಬಳಕೆಯಲ್ಲಿ ಜಾಗರೂಕರಾಗಬೇಕು. ದೊಡ್ಡಮಟ್ಟದ ಕೃಷಿಕರು ಹನಿ ನೀರಾವರಿ, ಒಡ್ಡು ನಿರ್ಮಾಣದ ಮೂಲಕ ನೀರಿನ ಬಳಕೆಯನ್ನು ಹತೋಟಿಯಲ್ಲಿಡುವಂತೆ ಸಲಹೆ ನೀಡಿದರು.
32 ಲಕ್ಷ ಲೀ.ನೀರಿನ ಅಗತ್ಯ: ಧರ್ಮಸ್ಥಳದಲ್ಲಿ ವಸತಿ ಗೃಹ, ಅಡುಗೆಗೆ, ಸಾರ್ವಜನಿಕ ಶೌಚಾಲಯ ಸೇರಿದಂತೆ ನಿತ್ಯ ಬಳಕೆಗೆ ಸಾಮಾನ್ಯವಾಗಿ ಪ್ರತಿ ನಿತ್ಯ 25ರಿಂದ 28 ಲಕ್ಷ ಲೀ.ನೀರು ಅಗತ್ಯವಿದೆ. ಆದರೆ, ಪ್ರಸ್ತುತ 32 ಲಕ್ಷ ಲೀ.ನೀರಿನ ಬೇಡಿಕೆ ಇದೆ. ನೇತ್ರಾವತಿ ಸ್ನಾನಘಟ್ಟದ ಬಳಿ ಕಿಂಡಿ ಅಣೆಕಟ್ಟಿನಿಂದ ನೀರು ಬಳಸಲಾಗುತ್ತಿದ್ದು, 4 ಕೊಳವೆ ಬಾವಿಗಳನ್ನು ಆಶ್ರಯಿಸಲಾಗಿದೆ. ಈಗಾಗಲೇ ವಸತಿಗೃಹ ಸೇರಿದಂತೆ ಅವಶ್ಯ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ ಎಂದು ತಿಳಿಸಲಾಗಿದೆ.
ಶನಿವಾರ ಬಂದರು 30-35 ಸಾವಿರ ಭಕ್ತರು: ಕ್ಷೇತ್ರದಲ್ಲಿ ಶನಿವಾರ 30ರಿಂದ 35 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಮೇ 19 ಭಾನುವಾರ ರಜೆಯಾದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಡಾ| ಹೆಗ್ಗಡೆ ಅವರು ಮನವಿ ಮಾಡಿರುವ ವಿಚಾರವಾಗಿ ಭಕ್ತರು ದೇವಸ್ಥಾನಕ್ಕೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಈ ಕುರಿತು ಕ್ಷೇತ್ರದ ವತಿಯಿಂದ ಈಗಾಗಲೇ ಮುಂಗಡವಾಗಿ ದಿನಾಂಕ ನಿಗದಿ ಮಾಡುವ ಭಕ್ತರಿಗೆ ನೀರಿನ ಅಭಾವ ಮತ್ತು ಮಿತ ಬಳಕೆ ಕುರಿತು ಸೂಚನೆ ನೀಡಲಾಗುತ್ತಿದೆ.
ನಮಗೆ ಘಟ್ಟದ ಭಾಗದಿಂದ ನೀರು ಹರಿದು ಬರಬೇಕು. ಆದರೆ, ಅಲ್ಲಿ ಮಳೆಯಾಗದ ಕಾರಣ ನೀರಿಲ್ಲ. ಕಿಂಡಿ ಅಣೆಕಟ್ಟಿನಿಂದಾಗಿ ತೀರ್ಥಕ್ಕೆ ಮತ್ತು ಅಭಿಷೇಕಕ್ಕೆ ನೀರಿದೆ. ತೀರ್ಥ ಗುಂಡಿಯಲ್ಲಿ ನಾಲ್ಕು ಅಡಿ ನೀರು ಕಡಿಮೆಯಾಗಿದೆ. ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರುವುದಿಲ್ಲ ಎಂಬ ಸೂಚನೆ ಕೊಟ್ಟಿದೆ. ಹೀಗಾಗಿ, ಕ್ಷೇತ್ರ ದರ್ಶನ ಮುಂದೂಡಿ ಎಂದು ವಿನಂತಿ ಮಾಡುತ್ತೇವೆ. ಸರಕಾರ ಮತ್ತು ಜಲತಜ್ಞರು ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು.
-ಡಾ| ಡಿ.ವೀರೇಂದ್ರ ಹೆಗ್ಗಡೆ, ಧರ್ಮಧಿಕಾರಿಗಳು