Advertisement

ಜಲ ಸಂರಕ್ಷಣೆ ಕಾಮಗಾರಿ ಪರಿಶೀಲನೆ

09:06 PM Dec 14, 2019 | Lakshmi GovindaRaj |

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದಡಿ ಪ್ರಸಕ್ತ ಸಾಲಿನಲ್ಲಿ ಕೈಗೊಂಡಿರುವ ಜಲ ಸಂರಕ್ಷಣೆ ಕಾಮಗಾರಿಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಜಲಶಕ್ತಿ ತಂಡದ ಮುಖ್ಯಸ್ಥರು ಹಾಗೂ ಯುಐಡಿಎಐ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಂಕಜ್‌ ಕುಮಾರ್‌(ಐಎಎಸ್‌) ಶಿಡ್ಲಘಟ್ಟ ತಾಲೂಕಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ತಾಲೂಕಿನ ಪಲಿಚೇರ್ಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿಯಲ್ಲಿ ಅಳವಡಿಸಿರುವ ಮಳೆನೀರು ಕೊಯ್ಲು ಪದ್ಧತಿಯನ್ನು ಪರಿಶೀಲಿಸಿ ಬಳಿಕ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾಂಪೌಂಡ್‌ ನಿರ್ಮಾಣ ಮತ್ತು ಪರಿಸರ ಸಂರಕ್ಷಣೆ ಮಾಡಲು 2 ಸಾವಿರ ಗಿಡಗಳನ್ನು ನಾಟಿ ಮಾಡಿ ಪೋಷಣೆ ಮತ್ತು ನಿರ್ವಹಣೆಗಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ವೀಕ್ಷಣೆ: ಉದ್ಯೋಗ ಖಾತ್ರಿ ಯೋಜನೆಯಡಿ ದೊಗರನಾಯಕನಹಳ್ಳಿ ಗ್ರಾಮದಲ್ಲಿ ಅಕ್ಕಲಪ್ಪ ಎಂಬ ರೈತರ ಮಾವಿನ ತೋಟ ಅಭಿವೃದ್ಧಿಗೊಳಿಸಿರುವುದನ್ನು ಪರಿಶೀಲಿಸಿದರು. ನಂತರ ಕನ್ನಪ್ಪನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಚೆಕ್‌ಡ್ಯಾಂ ಕಾಮಗಾರಿ ಪರಿಶೀಲಿಸಿ ಬಳಿಕ ಸದ್ದಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಕುಂಟೆ ವೀಕ್ಷಿಸಿದರು. ನಂತರ ಕನ್ನಪ್ಪನಹಳ್ಳಿ ಗ್ರಾಮದಲ್ಲಿ ದೇವರಾಜ್‌ ಎಂಬ ರೈತರೊಬ್ಬರು ನಿರ್ಮಿಸಿರುವ ಕೃಷಿ ಹೊಂಡವನ್ನು ಪರಿಶೀಲಿಸಿದರು.

ಅಂತರ್ಜಲ ವೃದ್ಧಿ: ಸದ್ದಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಕುಂಟೆಯಿಂದ ಏನು ಅನುಕೂಲವಾಗಿದೆ ಎಂದು ಗ್ರಾಮಸ್ಥರನ್ನು ಪ್ರಶ್ನಿಸಿದಾಗ ಅದೇ ಗ್ರಾಮದ ವೆಂಕಟೇಶ್‌ ಮಾತನಾಡಿ, ಕುಂಟೆಯನ್ನು ಅಭಿವೃದ್ಧಿಗೊಳಿಸಿರುವುದರಿಂದ ಅಂರ್ತಜಲಮಟ್ಟ ವೃದ್ಧಿಯಾಗಿದೆ. ಈ ಭಾಗದಲ್ಲಿ ಸಾವಿರದಿಂದ ಒಂದೂವರೆ ಸಾವಿರ ಅಡಿವರೆಗೆ ಕೊರೆದರೂ ನೀರು ಲಭಿಸುತ್ತಿರಲಿಲ್ಲ. ಆದರೆ ಜಲ ಸಂರಕ್ಷಣೆ ಕಾಮಗಾರಿಗಳು ಕೈಗೊಳ್ಳುತ್ತಿರುವುದರಿಂದ ಅಂರ್ತಜಲ ಮಟ್ಟ ವೃದ್ಧಿಯಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವ ವಿಶ್ವಾಸ ಹೊಂದಿದ್ದೇವೆ ಎಂದರು.

ಮೆಚ್ಚುಗೆ: ಕುಂಟೆಯ ಕಾಮಗಾರಿ ಪರಿಶೀಲಿಸುವ ವೇಳೆಯಲ್ಲಿ ನೀರು ಶೇಖರಣೆಯಾಗಿರುವುದನ್ನು ನೋಡಿ ತಂಡದ ಮುಖ್ಯಸ್ಥರು ಮತ್ತು ಸದಸ್ಯರು ಸಂತಸ ವ್ಯಕ್ತಪಡಿಸಿದರು. ನರೇಗಾ ಯೋಜನೆಯಡಿ ಜಲ ಸಂರಕ್ಷಣೆಯ ಕಾಮಗಾರಿಗಳನ್ನು ಕೈಗೊಳ್ಳುವ ಜೊತೆಗೆ ಪರಿಸರ ಸಂರಕ್ಷಣೆ ಮಾಡಿ ಹೆಚ್ಚಾಗಿ ಮಳೆನೀರು ಸಂರಕ್ಷಣೆ ಮಾಡಲು ಕೈಗೊಂಡಿರುವ ಕಾಮಗಾರಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ತಂಡದ ಮುಖ್ಯಸ್ಥರಿಗೆ ಮಾಹಿತಿ: ಕೇಂದ್ರ ಸಂಪುಟ ಕಾರ್ಯದರ್ಶಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೆಚ್ಚುಗೆ ಪಡೆದ ಜಿಲ್ಲಾ ಪಂಚಾಯಿತಿ ಸಿಇಒ ಫೌಝೀಯಾ ತರುನ್ನುಮ್‌ ಅವರು ಜಲಶಕ್ತಿ ತಂಡದ ಮುಖ್ಯಸ್ಥರಿಗೆ ಶಿಡ್ಲಘಟ್ಟ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರ ನೀಡಿದರಲ್ಲದೆ, ವಿವಿಧ ಗ್ರಾಮಗಳಲ್ಲಿ ಕೈಗೊಂಡಿರುವ ಯೋಜನೆಯಿಂದ ಲಾಭವಾಗಿದೆಯೇ? ಎಂಬುದರ ಕುರಿತು ಗ್ರಾಮಸ್ಥರಿಂದ ತಂಡದ ಮುಖ್ಯಸ್ಥರಿಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನೋಮೇಶ್‌, ತಾಂತ್ರಿಕ ಅಧಿಕಾರಿ ದಿಲೀಪ್‌ಕುಮಾರ್‌, ತಾಲೂಕು ಪಂಚಾಯಿತಿ ಇಒ ಬಿ.ಶಿವಕುಮಾರ್‌, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಲಿಚೇರ್ಲು ಗ್ರಾಮ ಪಂಚಾಯಿತಿ ಪಿಡಿಒ ಕಾತ್ಯಾಯಿನಿ, ನರೇಗಾ ಇಂಜಿನಿಯರ್‌ ರಾಜೇಶ್‌, ಜಿಲ್ಲಾ ಸಂಯೋಜಕ ಮಧು ಉಪಸ್ಥಿತರಿದ್ದರು.

ಕಾಲುವೆಗಳ ಅಭಿವೃದ್ಧಿ: ಜಿಲ್ಲೆಯಲ್ಲಿ ನರೇಗಾ ಯೋಜನೆಯ 100 ದಿನಗಳ ವಿಶೇಷ ಅಭಿಯಾನ ಕಾರ್ಯಕ್ರಮ ಆರಂಭಿಸಿ ಜಿಲ್ಲಾದ್ಯಂತ ಇರುವ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್‌ ಕಾಮಗಾರಿ, ಅಂರ್ತಜಲಮಟ್ಟ ವೃದ್ಧಿಗೊಳಿಸಲು ಕಲ್ಯಾಣಿಗಳು, ಕುಂಟೆಗಳ ನಿರ್ಮಾಣ, ಇಂಗು ಗುಂಡಿಗಳು, ಪೋಷಕ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ಜಿಪಂ ಸಿಇಒ ಕೇಂದ್ರ ಜಲಶಕ್ತಿ ತಂಡಕ್ಕೆ ಮಾಹಿತಿ ನೀಡಿದರು.

ಮಳೆನೀರು ಕೊಯ್ಲು, ಚೆಕ್‌ಡ್ಯಾಂ, ಕುಂಟೆಗಳ ನಿರ್ಮಾಣ, ಕೃಷಿ ಹೊಂಡ ಮತ್ತು ಶಾಲಾ ಕಾಂಪೌಂಡ್‌ ಮತ್ತು ಗಿಡಗಳನ್ನು ನಾಟಿ ಮಾಡಿರುವ ಕುರಿತು ಗ್ರಾಮಸ್ಥರಿಂದ ಫೀಡ್‌ಬ್ಯಾಕ್‌ ಪಡೆದುಕೊಂಡರು. ಗ್ರಾಮೀಣ ಪ್ರದೇಶಗಳ ಜನರಿಗೆ ನರೇಗಾ ಯೋಜನೆ ವರದಾನವಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next