ಬಂಗಾರಪೇಟೆ: ಜಿಲ್ಲೆ ಮಟ್ಟಿಗೆ ಪ್ರತಿ ಹನಿ ನೀರೂ ಅಮೂಲ್ಯವಾದದ್ದು, ವ್ಯರ್ಥ ಮಾಡದೆ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸುವುದು ಎಲ್ಲರ ಹೊಣೆ ಎಂದು ತಾಪಂ ಇಒ ವೆಂಕಟೇಶ್ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಪಂ ಹಾಗೂ ವೀಲ್ ಸ್ವಯಂ ಸೇವಾ ಸಂಸ್ಥೆಯಿಂದ ಗ್ರಾಪಂ ನೀರುಗಂಟಿಗಳಿಗೆ ಸ್ವತ್ಛತೆ, ನೀರಿನ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಕ್ಷೇತ್ರ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಕಲ ಜೀವ ರಾಶಿಗಳಿಗೂ ನೀರು ಆಧಾರ. ಇಡೀ ಮಾನವ ಕುಲವೇ ನೀರನ್ನು ಜೀವಜಲವೆಂದು ಪರಿಗಣಿಸಿದೆ ಎಂದು ಹೇಳಿದರು.
ವಿಶ್ವದಲ್ಲಿ ಮೂರು ಭಾಗ ನೀರಿದ್ದು, ಒಂದು ಭಾಗ ಭೂಮಿ ಇದೆ. ವಿಶ್ವದಲ್ಲಿ ಶೇ.1ರಷ್ಟು ಮಾತ್ರ ಮನುಕುಲ, ಗಿಡ ಮರ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಬಳಕೆಯಾಗಿದೆ. ಈ ಒಂದರಷ್ಟು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಶೇ. 70.1 ಕೈಗಾರಿಕೆಗಳಿಗೆ 20.1, ಕುಡಿಯುವ ನೀರು ಮತ್ತು ಗೃಹ ಬಳಕೆಗೆ ಕೇವಲ ಶೇ.9.8ರಷ್ಟು ಬಳಕೆಯಾಗುತ್ತಿದೆ. ಆದರೆ, ಇಂದು ಮಾನವನ ಸತತ ಚಟುವಟಿಕೆಗಳಿಂದಾಗಿ ಈ ಅತ್ಯಲ್ಪ ಕುಡಿಯುವ ನೀರು ಮಾಲಿನ್ಯವಾಗುತ್ತಿದೆ, ಇದರಿಂದ ಅಪಾಯಕಾರಿ ಸಾರಜನಕದಂತಹ ಅನಿಲಗಳು, ನೈಟ್ರೇಟ್, ಕ್ಯಾಲ್ಸಿಯಂ, ಸೋಡಿಯಂ ನಂತಹ ಲವಣಗಳು ಸೇರಿ ಕಲುಷಿತಗೊಂಡಿದೆ ಎಂದು ವಿವರಿಸಿದರು.
ಕಲುಷಿತ ನೀರಿನಿಂದ ಹಲವು ರೋಗಗಳನ್ನು ಮನುಷ್ಯ ಎದುರಿಸಬೇಕಾಗಿದೆ. ಎಲ್ಲಾ ಗ್ರಾಮಗಳಲ್ಲಿ ಶುದ್ಧ ನೀರು ಜನರಿಗೆ ಪೂರೈಕೆಯಾಗಬೇಕು ಮತ್ತು ಲಭ್ಯವಿರುವ ನೀರನ್ನು ಹೇಗೆ ಮಿತವಾಗಿ ಬಳಕೆ ಮಾಡಬೇಕು ಹಾಗೂ ಗ್ರಾಮಗಳಲ್ಲಿ ನೈರ್ಮಲ್ಯ
ಹೇಗೆ ರಕ್ಷಣೆ ಮಾಡಬೇಕು, ಇದರಿಂದಾಗುವ ಅನುಕೂಲಗಳನ್ನು ಮೊದಲು ನೀರುಗಂಟಿಗಳಿಗೆ ತಿಳಿಯಬೇಕಾಗಿದೆ. ಆದ್ದರಿಂದ ಅವರಿಗೆ ಒಂದು ದಿನದ ತರಬೇತಿಯನ್ನು ಜಿಲ್ಲೆಯ ಮುಳಬಾಗಿಲು ತಾಲೂಕು ಉತ್ತನೂರಿನಲ್ಲಿ ಹಮ್ಮಿಕೊಂಡಿದ್ದು, ಅಲ್ಲಿ ಹೋಗಿ ತರಬೇತಿ ಪಡೆದು ಅದನ್ನು ತಮ್ಮ ಗ್ರಾಪಂಗಳಲ್ಲಿ ಅಳಡಿಸಬೇಕೆಂದು ಹೇಳಿದರು.
ಬೀದಿ ನಾಟಕಗಳ ಮೂಲಕ ಜನರಿಗೆ ನೈರ್ಮಲ್ಯ ಮತ್ತು ಜಲರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. ಈ ವೇಳೆ ತಾಪಂ ಎಡಿ ಮಂಜುನಾಥ್, ವ್ಹೀಲ್‌ಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ಎಂ.ರತ್ನಪ್ಪ, ದೋಣಿಮಡಗು ಪಿಡಿಒ ಸುರೇಶ್‌ಬಾಬು ಇದ್ದರು.