Advertisement

ವಿವಿಧೆಡೆ ಮಳೆಕೊಯ್ಲು ಅಳವಡಿಸಿ ಜಲ ಸಂರಕ್ಷಣೆ ಜಾಗೃತಿ

09:42 PM Jul 05, 2019 | Team Udayavani |

ಮಹಾನಗರ: ಜನರಲ್ಲಿ ಜಲ ಸಾಕ್ಷರತೆ ಮೂಡಿಸುವ ನಿಟ್ಟಿನಲ್ಲಿ ಉದಯವಾಣಿ ಹಮ್ಮಿಕೊಂಡ ಮನೆ ಮನೆಗೆ ಮಳೆಕೊಯ್ಲು ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ವಿವಿಧೆಡೆ ಮಳೆಕೊಯ್ಲು ಅಳವಡಿಕೆ ಬಗ್ಗೆ ಜನರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Advertisement

ಬೆಂದೂರ್‌ವೆಲ್‌ ಗೋಲ್ಡನ್‌ ಪೆಬ್ಲೆಸ್‌ ಅಪಾರ್ಟ್‌ಮೆಂಟ್‌ನಲ್ಲಿ ಎರಡು ವಾರಗಳ ಹಿಂದಷ್ಟೇ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಈವರೆಗೆ ನೀರಿನ ಸಮಸ್ಯೆ ಉಂಟಾಗಿಲ್ಲ. ನೀರಿನ ಅಭಾವದ ಸಂದರ್ಭದಲ್ಲಿ ಅಕ್ಕಪಕ್ಕದವರಿಗೆ ನೀರನ್ನು ಹಂಚಿಕೆ ಮಾಡಿದ್ದಾರೆ. ಆದರೆ ಈ ಬಾರಿ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಮುಂದಿನ ವರ್ಷಗಳಲ್ಲಿ ನೀರಿಗೆ ಕೊರತೆಯಾಗದಿರಲೆಂಬ ಮುಂದಾಲೋಚನೆ ಯೊಂದಿಗೆ ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ನವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಛಾವಣಿ ನೀರನ್ನು ಪೈಪ್‌ ಮೂಲಕ ಬಾವಿಗೆ ಬಿಡಲಾಗುತ್ತಿದೆ. ನೀರು ಶುದ್ಧೀಕರಣಗೊಂಡು ಬಾವಿಗೆ ಬೀಳುವಂತಾಗಲು ಫಿಲ್ಟರ್‌ ವ್ಯವಸ್ಥೆ ಮಾಡಲಾಗಿದೆ.

“ಉದಯವಾಣಿ’ಯಲ್ಲಿ ಮಳೆನೀರು ಕೊಯ್ಲು ಬಗ್ಗೆ ಸರಣಿ ಮಾಹಿತಿಯೋಗ್ಯ ಲೇಖನಗಳನ್ನು ಓದುತ್ತಿದ್ದೇವೆ. ಇದರಿಂದ ಪ್ರೇರಿತರಾಗಿ ಮಳೆಕೊಯ್ಲು ಅಳವಡಿಕೆಗೆ ನಾವೆಲ್ಲ ಮುಂದಾಗಿದ್ದೇವೆ ಎನ್ನುತ್ತಾರೆ ಅಸೋಸಿಯೇಶನ್‌ ಅಧ್ಯಕ್ಷ ಆಲ್ವಿನ್‌ ಡಿ’ಸೋಜಾ.

ಅಶೋಕನಗರ ಹೊಗೆಬೈಲಿನಲ್ಲಿರುವ ಅಶೋಕ ಪ್ಯಾರಡೈಸ್‌ ವಸತಿ ಸಮುತ್ಛಯದಲ್ಲಿ ಮಳೆ ನೀರು ಕೊಯ್ಲು ಯೋಜನೆ ಅಳವಡಿಸಿದ್ದಾರೆ. ಆರು ಕಟ್ಟಡಗಳಿರುವ ಈ ಬೃಹತ್‌ ಸಮುಚ್ಚಯದಲ್ಲಿ ಒಟ್ಟಾರೆ 1,73,66,000 ಲೀ. ನೀರು ಉತ್ಪಾದನೆ ಸಾಧ್ಯತೆ ಅಂದಾಜಿಸಲಾಗಿದೆ. ಆರಂಭಿಕ ಹಂತದಲ್ಲಿ ಇಲ್ಲಿನ ಬಾವಿಗಳನ್ನು ಪುನಶ್ಚೇತನಗೊಳಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಮುಂದಿನ ಹಂತಗಳಲ್ಲಿ ಬೋರ್‌ವೆಲ್‌ ರೀಚಾರ್ಜಿಂಗ್‌ ಮತ್ತಿತರ ನೀರಿಂಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅಶೋಕ ಪ್ಯಾರಡೈಸ್‌ ಅಪಾರ್ಟ್‌ಮೆಂಟ್‌ ಓನರ್ ಅಸೋಸಿಯೇಶನ್‌(ಎಪಿಎಒಎ)ಖಜಾಂಚಿ ರಾಮಚಂದ್ರ ರಾವ್‌ ಹೇಳಿದ್ದಾರೆ.

ಹೊಗೆಬೈಲ್‌-ಗುರುಂಪೆ ಎಂಬಲ್ಲಿ ಮೂರೂವರೆ ಎಕ್ರೆ ಪ್ರದೇಶದಲ್ಲಿ ಆರು ಕಟ್ಟಡಗಳಿರುವ ಅಶೋಕ ಪ್ಯಾರಡೈಸ್‌ ಅಪಾರ್ಟ್‌ಮೆಂಟ್‌ 264 ಫ್ಲಾಟ್‌ಗಳಿರುವ ಬೃಹತ್‌ ವಸತಿ ಸಮುಚ್ಚಯವಾಗಿದೆ. ಸುಮಾರು 850ಕ್ಕೂ ಹೆಚ್ಚು ನಿವಾಸಿಗಳಿರುವ ಕಿರು ಗ್ರಾಮದಂತಿರುವ ಈ ಸಮುಚ್ಚಯದಲ್ಲಿ ಮೂರು ವರ್ಷಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ತೀವ್ರ ಉಲ್ಬಣವಾಗಿತ್ತು. ಅದೇ ವೇಳೆ ಬಿಲ್ಡರ್‌ ಕೂಡ ಈ ಬೃಹತ್‌ ಸಮುಚ್ಚಯದ ನಿರ್ವಹಣೆ ಹೊಣೆಯನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದರು. ಅಂತಹ ಬಿಕ್ಕಟ್ಟಿನ ಸಂದರ್ಭ ಇಲ್ಲಿನ ನಿವಾಸಿಗಳೇ ಅಸೋಸಿಯೇಶನ್‌(ಎಪಿಎಒಎ) ಕಟ್ಟಿಕೊಂಡು ತಮ್ಮ ವಿವಿಧ ಸಮಸ್ಯೆಗಳಿಗೆ ತಾವೇ ಪರಿಹಾರಗಳನ್ನು ಕಂಡುಕೊಂಡಿದ್ದರು.

Advertisement

ಅಸೋಸಿಯೇಶನ್‌ ಇದೀಗ ವಿವಿಧ ಮಳೆ ನೀರು ಕೊಯ್ಲು ತಜ್ಞರನ್ನು ಕರೆಸಿಕೊಂಡು ಸಮಾಲೋಚಿಸಿದ್ದು, ಬೃಹತ್‌ ಯೋಜನೆಯೊಂದನ್ನು ರೂಪಿಸಿದೆ. ಆರು ಕಟ್ಟಡಗಳಿಂದ ಗರಿಷ್ಠ ನೀರು ಉತ್ಪಾದನೆ ಮತ್ತು ಅಂತರ್ಜಲ ವೃದ್ಧಿ ಯೋಜನೆಯ ಉದ್ದೇಶವಾಗಿದ್ದು, ತಮಗೆ ಮಾತ್ರವಲ್ಲದೆ ಹೊಗೆಬೈಲ್‌ ಪರಿಸರದ ಇತರ ಬಾವಿಗಳಿಗೆ ಕೂಡ ಪ್ರಯೋಜನವಾಗಬಹುದು ಎಂಬ ಆಶಯವನ್ನು ರಾಮಚಂದ್ರ ಅವರು ವ್ಯಕ್ತಪಡಿಸಿದರು.

ಮಳೆಕೊಯ್ಲಿನಿಂದ ಟ್ಯಾಂಕರ್‌ ನೀರಿನ ಅಲೆದಾಟ ತಪ್ಪಿತು
ನಗರದ ಉಜ್ಜೋಡಿಯ ರಾಮ್‌ಮೋಹನ್‌ ಆಳ್ವ ಅವರು ಕೆಲವು ವರ್ಷಗಳ ಹಿಂದೆಯೇ ತಮ್ಮ ಮನೆಯ ಒಂದು ಭಾಗದ ಮೇಲ್ಛಾವಣಿಯ ನೀರು ಸಂಗ್ರಹಿಸಿ ಮಳೆನೀರು ಕೊಯ್ಲು ಅಳವಡಿಸಿದ್ದರು. ಇದೀಗ ಉದಯವಾಣಿ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಆರಂಭಗೊಂಡ ಬಳಿಕ ಎರಡು ದಿನಗಳ ಹಿಂದೆ ಪರಿಪೂರ್ಣವಾಗಿ ಮಳೆನೀರು ಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ.

ಮನೆಗ ಮೇಲ್ಛಾವಣಿಯಲ್ಲಿನ ಮಳೆನೀರನ್ನು ಸುಮಾರು 35 ಅಡಿ ಬಾವಿಗೆ ಪೈಪ್‌ಮುಖೇನ ಸಂಪರ್ಕ ಕಲ್ಪಿಸಿದ್ದಾರೆ. ಶುದ್ಧನೀರು ಬಾವಿಗೆ ಬೀಳುವ ನಿಟ್ಟಿನಲ್ಲಿ ಬಾವಿಯ ಬಳಿ ಫಿಲ್ಟರ್‌ ಅಳವಡಿಸಿದ್ದಾರೆ. ಇದೀಗ ಬಾವಿಯಲ್ಲಿ ನೀರು ತುಂಬಿದೆ. ಇನ್ನು, ಈ ಹಿಂದೆ ರಾಮ್‌ಮೋಹನ್‌ ಆಳ್ವ ಅವರ ಮನೆಯಲ್ಲಿ ಅತಿಯಾಗಿ ನೀರಿನ ಸಮಸ್ಯೆ ಇತ್ತು. ಕೆಲವು ಬಾರಿ ಟ್ಯಾಂಕರ್‌ ಮುಖೇನ ನೀರು ತರಿಸುತ್ತಿದ್ದರು. ಆದರೆ ಮಳೆಕೊಯ್ಲು ಅಳವಡಿಸಿದ ಬಳಿಕ ನೀರಿನ ಸಮಸ್ಯೆ ಕಡಿಮೆಯಾಗಿದೆ.

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Advertisement

Udayavani is now on Telegram. Click here to join our channel and stay updated with the latest news.

Next